ವೈದ್ಯಕೀಯ ಆಮ್ಲಜನಕ ವ್ಯರ್ಥ ಮಾಡಬೇಡಿ: ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ

|

Updated on: Apr 15, 2021 | 5:22 PM

Medical Oxygen: ಕೊವಿಡ್ ಪ್ರಕರಣಗಳು ಹೆಚ್ಚುತ್ತಿದ್ದಂತೆ ರಾಜ್ಯಗಳಲ್ಲಿ ಆಮ್ಲಜನಕದ ಬೇಡಿಕೆಯೂ ಹೆಚ್ಚಿದೆ. ಅದಕ್ಕಾಗಿ ದೇಶದಲ್ಲಿರುವ ತಯಾರಿಕಾ ಘಟಕಗಳಲ್ಲಿರುವ ಕೈಗಾರಿಕಾ ಆಮ್ಲಜನಕ ಸೇರಿದಂತೆ 50,000 ಮೆಟ್ರಿಕ್ ಟನ್ ಆಮ್ಲಜನಕದ ಸಂಗ್ರಹವಿದೆ ಎಂದು ಸರ್ಕಾರ ಹೇಳಿದೆ.

ವೈದ್ಯಕೀಯ ಆಮ್ಲಜನಕ ವ್ಯರ್ಥ ಮಾಡಬೇಡಿ: ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ
ಆಕ್ಸಿಜನ್ ಸಿಲಿಂಡರ್ (ಪ್ರಾತಿನಿಧಿಕ ಚಿತ್ರ)
Follow us on

ದೆಹಲಿ: ವೈದ್ಯಕೀಯ ಆಮ್ಲಜನಕವನ್ನು ಸಮರ್ಪಕವಾಗಿ ಬಳಸಿ, ಅವು ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ ಕೇಂದ್ರ ಸರ್ಕಾರ ದೇಶದಲ್ಲಿ ಆಮ್ಲಜನಕದ ಕೊರತೆ ಇಲ್ಲ, ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಂಗ್ರಹ ಇದೆ ಎಂದು ಹೇಳಿದೆ. ಕೊವಿಡ್ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಆಮ್ಲಜನಕ (Medical oxygen ) ಅತ್ಯಗತ್ಯವಾಗಿದೆ. ವೈದ್ಯಕೀಯ ಆಮ್ಲಜನಕ ಪೂರೈಕೆ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳು ಲಭ್ಯವಾಗುವಂತೆ ಮಾಡಲು 2020ಮಾರ್ಚ್ ತಿಂಗಳಲ್ಲಿ ವಿವಿಧ ಸಚಿವಾಲಯಗಳ ಸಮಿತಿಯನ್ನು ಸರ್ಕಾರ ರಚಿಸಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.ಆಮ್ಲಜನಕದ ಉತ್ಪಾದನೆ ಘಟಕದಲ್ಲಿ ಉತ್ಪಾದನೆ ಹೆಚ್ಚಿಸುವುದರ ಜತೆಗೆ ಅಗತ್ಯಕ್ಕೆ ಬೇಕಾದಷ್ಟು ಸಂಗ್ರಹ ಇದೆ. ಕಳೆದ ಎರಡು ದಿನಗಳಿಂದ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದನೆಯಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

ಎಲ್ಲ ಜಿಲ್ಲೆಗಳಿಗೆ ಸುಗಮವಾಗಿ ಆಮ್ಲಜನಕ ಸರಬರಾಜು ಮಾಡಲು ರಾಜ್ಯದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ. ಈ ಮೂಲಕ ಸಿಲಿಂಡರ್, ಟ್ಯಾಂಕ್ ಗಳ ಪರಿಶೀಲನೆ, ಆಮ್ಲಜನಕ ಪೂರೈಕೆ ಸುಗಮವಾಗಲಿದೆ. ಆಮ್ಲಜನಕದ ಕೊರತೆ ಇರುವ ರಾಜ್ಯಗಳಿಗೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವ ಮೂಲಗಳ ಬಗ್ಗೆ ಪ್ರತಿದಿನ ಮ್ಯಾಪಿಂಗ್ ಮಾಡುವ ಮೂಲಕ ಆಮ್ಲಜಕದ ಸಾಗಾಣಿಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಸಚಿವಾಲಯ  ನಿರ್ದೇಶಿಸಿದೆ.

ಅಂತರ ಸಚಿವಾಲಯದ ಸಶಕ್ತ ಗುಂಪು (EG2) ನಿರ್ದೇಶನದ ಪ್ರಕಾರ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ), ಆರೋಗ್ಯ ಸಚಿವಾಲಯ, ಉಕ್ಕು ಸಚಿವಾಲಯ, ಆಮ್ಲಜನಕದ ಕೊರತೆ ಇರುವ ರಾಜ್ಯಗಳು, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ಅಧಿಕಾರಿಗಳು , ಆಮ್ಲಜನಕ ಉತ್ಪಾದಕರು ಮತ್ತು ಅಖಿಲ ಭಾರತೀಯ ಅನಿಲ ಉತ್ಪಾದಕ ಸಂಘಟನೆಯ ಪ್ರತಿನಿಧಿಗಳೊಂದಿಗೆ ಪ್ರತಿದಿನ ನಡೆಯುವ ಚರ್ಚೆಗಳ ಆಧಾರದ ಮೇಲೆ ಈ ನಿರ್ಧಾರಗಳನ್ನು ಕೈಗೊಳ್ಳಲಾಗುವುದು.

ದೇಶದಲ್ಲಿ 7127 ಮೆಟ್ರಿಕ್ ಟನ್ ನಷ್ಟು ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯವಿದೆ. ಕಳೆದ ಎರಡು ದಿನಗಳಿಂದ ಶೇ 100ರಷ್ಟು ಉತ್ಪಾದನೆ ಮಾಡಲಾಗುತ್ತಿದೆ. ಜತೆಗೆ ಅಗತ್ಯಕ್ಕೆ ತಕ್ಕಂತೆ ಉಕ್ಕಿನ ಕಾರ್ಖಾನೆಗಳಿಂದಲೂ ಆಮ್ಲಜನಕ ಲಭ್ಯವಾಗುವಂತೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದೆ.


ಏಪ್ರಿಲ್ 12 ರಂದು ದೇಶದಲ್ಲಿ ಬಳಕೆಯಾದ ವೈದ್ಯಕೀಯ ಆಕ್ಸಿಜನ್ ಬಳಕೆ 3842 ಮೆಟ್ರಿಕ್ ಟನ್. ಇದು ಪ್ರತಿದಿನದ ಉತ್ಪಾದನಾ ಸಾಮರ್ಥ್ಯದ ಶೇ 54 ಆಗಿದೆ. ಮಹಾರಾಷ್ಟ್ರ, ಗುಜರಾತ್,ಮಧ್ಯ ಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ತಮಿಳುನಾಡು, ದೆಹಲಿಯಲ್ಲಿ ಅತೀ ಹೆಚ್ಚು ವೈದ್ಯಕೀಯ ಆಮ್ಲಜನಕ ಬಳಕೆಯಾಗುತ್ತಿದ್ದು ಛತ್ತೀಸಗಡ, ಪಂಜಾಬ್, ರಾಜಸ್ಥಾನದಲ್ಲಿ ಸ್ವಲ್ಪ ಕಡಿಮೆ ಬಳಕೆ ಇದೆ ಎಂದು ಸಚಿವಾಲಯ ಹೇಳಿದೆ.

ಕೊವಿಡ್ ಪ್ರಕರಣಗಳು ಹೆಚ್ಚುತ್ತಿದ್ದಂತೆ ರಾಜ್ಯಗಳಲ್ಲಿ ಆಮ್ಲಜನಕದ ಬೇಡಿಕೆಯೂ ಹೆಚ್ಚಿದೆ. ಅದಕ್ಕಾಗಿ ದೇಶದಲ್ಲಿರುವ ತಯಾರಿಕಾ ಘಟಕಗಳಲ್ಲಿರುವ ಕೈಗಾರಿಕಾ ಆಮ್ಲಜನಕ ಸೇರಿದಂತೆ 50,000 ಮೆಟ್ರಿಕ್ ಟನ್ ಆಮ್ಲಜನಕದ ಸಂಗ್ರಹವಿದೆ ಎಂದು ಸರ್ಕಾರ ಹೇಳಿದೆ.

ಅದೇ ವೇಳೆ ಉಕ್ಕು ಕಾರ್ಖಾನೆಗಳಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ ಆಮ್ಲಜನಕವನ್ನು ಬಳಸಿಕೊಳ್ಳಲು ಸಲಹೆ ನೀಡಲಾಗಿದೆ. ಮಹಾರಾಷ್ಟ್ರ ಸರ್ಕಾರವು ದೊಲ್ವಿಯಲ್ಲಿರುವ ಜೆಎಸ್‌ಡಬ್ಲ್ಯೂ ಉಕ್ಕು ಕಾರ್ಖಾನೆಯಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ ವೈದ್ಯಕೀಯ ಆಮ್ಲಜನಕ ಬಳಸಿಕೊಳ್ಳಬೇಕು.  ಛತ್ತೀಸಗಡ ಸರ್ಕಾರವು ಭಿಲಾಯಿಯಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರದ ಉಕ್ಕಿನ ಕಾರ್ಖಾನೆಯಿಂದ ಹಾಗೂ ಕರ್ನಾಟಕವು ಬಳ್ಳಾರಿ ಜಿಲ್ಲೆಯಲ್ಲಿರುವ ಜೆಎಸ್‌ಡಬ್ಲ್ಯೂ ಉಕ್ಕಿನ ಕಾರ್ಖಾನೆಯಿಂದ ಪಡೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.  ಆಮ್ಲಜನಕದ ಸಾಗಾಣಿಕೆಯೂ ಈಗಿರುವ ಪ್ರಮುಖ ಸವಾಲಾಗಿದೆ. ಹಾಗಾಗಿ ವೈದ್ಯಕೀಯ ಆಮ್ಲಜನಕವನ್ನು ಕೈಗಾರಿಕೆ ಸಿಲಿಂಡರ್‌ಗಳಲ್ಲಿ ಸಾಗಿಸಲು ಅವಕಾಶ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : Corona 2nd Wave ಕೊರೊನಾ 2ನೇ ಅಲೆ ಅಬ್ಬರ.. ಒಂದೇ ದಿನದಲ್ಲಿ 1 ಲಕ್ಷ 99 ಸಾವಿರ ಕೇಸ್ ಪತ್ತೆ

Coronavirus India Update: ಕಳೆದ 24 ಗಂಟೆಗಳಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ಪತ್ತೆ, 1,038 ಮಂದಿ ಸಾವು

(Coronavirus Case incresed Centre asks states to make rational use of Medical Oxygen ensure there is no Wastage)