ದೆಹಲಿ: ಭಾರತದಲ್ಲಿ ಪ್ರತಿ ದಿನ ಸರಾಸರಿ 34,30,502 ಡೋಸ್ ಕೊವಿಡ್ ಲಸಿಕೆ ವಿತರಣೆಯಾಗುತ್ತಿದೆ. ವಿಶ್ವದಲ್ಲಿ ಅತೀ ಹೆಚ್ಚು ಡೋಸ್ ಕೊವಿಡ್ ಲಸಿಕೆ ವಿತರಣೆ ಮಾಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಅದೇ ವೇಳೆ ವಿವಿಧ ರಾಜ್ಯಗಳು ಕೊವಿಡ್ ಲಸಿಕೆ ಕೊರತೆ ಇದೆ ಎಂದು ಕೇಂದ್ರ ಸರ್ಕಾರದ ಮೊರೆ ಹೋಗಿವೆ. ಈ ನಡುವೆಯೇ ದೇಶದಲ್ಲಿ ಕೊವಿಡ್ ಲಸಿಕೆ ಪೋಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮಹಾರಾಷ್ಟ್ರದಲ್ಲಿ ಕೊವಿಡ್ ಲಸಿಕೆ ಕೊರತೆ ಇದೆ, ಹೆಚ್ಚು ಲಸಿಕೆಗಳನ್ನು ಪೂರೈಸಿ ಎಂದು ಅಲ್ಲಿನ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ರಾಜ್ಯದ ಮನವಿ ಮೇರೆಗೆ ಹೆಚ್ಚಿನ ಡೋಸ್ ಲಸಿಕೆಗಳನ್ನು ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಪೂರೈಕೆ ಮಾಡಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರ 5 ಲಕ್ಷ ಡೋಸ್ ಲಸಿಕೆಗಳನ್ನು ಪೋಲು ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.
ತಮಿಳುನಾಡಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕೊವಿಡ್ ಲಸಿಕೆ ವ್ಯರ್ಥವಾಗುತ್ತಿದೆ. ಇಲ್ಲಿ ಶೇ 12.4 ಕೊವಿಡ್ ಲಸಿಕೆ ವ್ಯರ್ಥವಾಗುತ್ತಿದ್ದು ಹರ್ಯಾಣದಲ್ಲಿ ಶೇ 10, ಬಿಹಾರದಲ್ಲಿ ಶೇ 8.1 ಲಸಿಕೆ ವ್ಯರ್ಥವಾಗುತ್ತಿದೆ. ದೆಹಲಿ ( ಶೇ 7), ಆಂಧ್ರ ಪ್ರದೇಶ (ಶೇ 7.3 ), ಪಂಜಾಬ್ (ಶೇ 8), ಅಸ್ಸಾಂ (ಶೇ 7.3) ಮತ್ತು ಮಣಿಪುರದಲ್ಲಿ ಶೇ 7.2 , ಮಹಾರಾಷ್ಟ್ರದಲ್ಲಿ ಶೇ 1.9 ಲಸಿಕೆ ವ್ಯರ್ಥವಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ.
ಅದೇ ವೇಳೆ ಗೋವಾ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಕೇರಳ , ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು, ಮಿಜೊರಾಂನಲ್ಲಿ ಕೊವಿಡ್ ಲಸಿಕೆ ವ್ಯರ್ಥವಾಗಿಲ್ಲ.
India’s Cumulative Vaccination Coverage exceeds 11.44Crores
Over 33 Lakh doses given in the last 24 hours; 81% of New Cases are being reported from 10 States
Five States account for 67.16% of India’s total Active Cases#StaySafe #Unite2FightCorona pic.twitter.com/Mj8FqT2n9X
— #IndiaFightsCorona (@COVIDNewsByMIB) April 15, 2021
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಈವರೆಗೆ 13,10,90,370 ಕೊವಿಡ್ ಲಸಿಕೆಗಳನ್ನು ವಿತರಿಸಲಾಗಿದೆ. ಇವುಗಳಲ್ಲಿ 11,43,69,677ರಷ್ಟು ಡೋಸ್ ಪೋಲಾಗಿದೆ ಎಂದಿದ್ದಾರೆ. ದೇಶದಲ್ಲಿ ಲಸಿಕೆ ಕೊರತೆ ಇದೆ ಎಂದಲ್ಲ, ಲಸಿಕೆ ವಿತರಣೆಯ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಕೆಲವೊಂದು ರಾಜ್ಯಗಳು ಶೇ 8-9 ರಷ್ಟು ಲಸಿಕೆಗಳನ್ನು ವ್ಯರ್ಥ ಮಾಡುತ್ತಿದ್ದು ಕೇರಳದಲ್ಲಿ ಲಸಿಕೆ ಪೋಲಾಗಿಲ್ಲ ಎಂದು ಭೂಷಣ್ ಹೇಳಿದ್ದರು.
ಮೂರು ದಿನಗಳಿಗಾಗುವಷ್ಟೇ ಲಸಿಕೆ ಇದೆ, ಲಸಿಕೆ ಪೂರೈಕೆ ಮಾಡದೇ ಇದ್ದರೆ ಎಲ್ಲ ಲಸಿಕೆಗಳು ಖಾಲಿಯಾಗುತ್ತವೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದರು. ಮಹಾರಾಷ್ಟ್ರಕ್ಕೆ 11,078,500 ಡೋಸ್ ಲಸಿಕೆ ಲಭಿಸಿದ್ದು ಇದರಲ್ಲಿ 9,514, 650 ಡೋಸ್ ವಿತರಣೆಯಾಗಿದೆ. 1,483,970ಡೋಸ್ ಮಹಾರಾಷ್ಟ್ರಕ್ಕೆ ಪೂರೈಕೆ ಆಗಲಿದೆ.
ಲಸಿಕೆ ವ್ಯರ್ಥವಾಗುತ್ತಿರುವುರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಹೇಳಿದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ. ರಾಮ್ ಸೇವಕ್ ಶರ್ಮಾ ಸಣ್ಣ ಲಸಿಕೆ ವಿತರಣೆ ಕೇಂದ್ರಗಳನ್ನು ಒಟ್ಟುಗೂಡಿಸಿ ದೊಡ್ಡ ಲಸಿಕೆ ಕೇಂದ್ರಗಳನ್ನಾಗಿ ಪರಿವರ್ತಿಸಿದರೆ ಈ ಸಮಸ್ಯೆ ಬಗೆಹರಿಯಬಹುದು ಎಂದಿದ್ದಾರೆ.
ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆ ಜವಾಬ್ದಾರಿ ವಹಿಸಬೇಕು.ಲಸಿಕೆ ವ್ಯರ್ಥವಾಗುವುದು ಕಳವಳದ ಸಂಗತಿ. ಲಸಿಕೆಯ ಉತ್ಪಾದನೆ ಮಾಡುತ್ತಿರುವ ಸಾಮರ್ಥ್ಯವನ್ನು ನಾವು ಹೊಂದಿದ್ದು, ಅದೃಷ್ಟವಂತರಾಗಿದ್ದೇವೆ. ಅದೇ ಹೊತ್ತಲ್ಲಿ ನಾವವು ಲಸಿಕೆಯನ್ನು ವ್ಯರ್ಥ ಮಾಡಬಹುದೆಂದು ಇದರ ಅರ್ಥವಲ್ಲ. ಸ್ಥಳೀಯ ಸಂಸ್ಥೆಗಳ ನಿರ್ವಹಣೆ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಸಣ್ಣ ಪುಟ್ಟ ಲಸಿಕೆ ಕೇಂದ್ರಗಳನ್ನು ದೊಡ್ಡ ಕೇಂದ್ರಗಳಾಗಿ ಮಾಡುವುದರಿಂದ ಲಸಿಕೆ ವ್ಯರ್ಥವಾಗುವುದು ಕಡಿಮೆಯಾಗುತ್ತದೆ. ಲಸಿಕೆ ಪಡೆಯಲು ಅರ್ಹತೆ ಇದ್ದವರು ಕೂಡಾ ಲಸಿಕೆ ಪಡೆಯಲು ಹಿಂದೇಟು ಹಾಕುವುದು ಕೂಡಾ ಇದಕ್ಕೆ ಕಾರಣ ಎಂದು ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ.
ಕೊವಿಡ್ ಎರಡನೇ ಅಲೆಯಿಂದ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಲಸಿಕೆ ಕೊರತೆ, ವೈದ್ಯಕೀಯ ಆಮ್ಲಜನಕದ ಕೊರತೆ, ಆಸ್ಪತ್ರೆಯಲ್ಲಿ ಜಾಗ ಸಿಗದೆ ಜನರು ಕಂಗೆಟ್ಟಿದ್ದಾರೆ.
ಇದನ್ನೂ ಓದಿ:ವೈದ್ಯಕೀಯ ಆಮ್ಲಜನಕ ವ್ಯರ್ಥ ಮಾಡಬೇಡಿ: ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ
(Tamil Nadu Haryana Top in Covid Vaccine Wastage zero wastage in Goa West Bengal and Kerala)
Published On - 6:39 pm, Thu, 15 April 21