
ನವದೆಹಲಿ, ಅಕ್ಟೋಬರ್ 21: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರಿಗೆ 7 ದಿನಗಳ ನ್ಯಾಯಾಂಗ ಬಂಧನದ ನಂತರ ಜಾಮೀನು ಮಂಜೂರಾಗಿದೆ. ಇಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎದುರು ಇಬ್ಬರನ್ನೂ ಹಾಜರುಪಡಿಸಿದ ಬಳಿಕ ಈ ಆದೇಶ ಹೊರಬಿದ್ದಿದೆ. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್, ಮೊದಲಿಗೆ ಆದೇಶವನ್ನು ಕಾಯ್ದಿರಿಸಿ ನಂತರ ಅಂತಿಮ ತೀರ್ಪು ಪ್ರಕಟಿಸಿದರು. ಆದರೆ, ದಾಖಲೆಗಳ ಪ್ರಕ್ರಿಯೆ ಬಾಕಿ ಇರುವ ಕಾರಣದಿಂದ ಇಂದೇ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಇದೆ. ದೆಹಲಿ ಪೊಲೀಸರು ಅವರಿಬ್ಬರ ನ್ಯಾಯಾಂಗ ಬಂಧನವನ್ನು 3 ದಿನಗಳ ಕಾಲ ವಿಸ್ತರಿಸುವಂತೆ ಕೋರಿದ್ದರಾದರೂ, ನ್ಯಾಯಾಲಯವು ಇಬ್ಬರನ್ನೂ ಬಿಡುಗಡೆ ಮಾಡಲು ಆದೇಶಿಸಿತು.
ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ ಅವರ ಬಂಧನದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಕೆಲವು ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ಹೈಕೋರ್ಟ್ ಅರ್ಜಿದಾರರಿಗೆ ಎಸ್‌ಇಎಂ ನಿರ್ಧಾರಕ್ಕಾಗಿ ಕಾಯುವಂತೆ ಮತ್ತು ತಮ್ಮ ಕುಂದುಕೊರತೆಗಳು ಪರಿಹಾರವಾಗದಿದ್ದರೆ ಮೇಲ್ಮನವಿ ನ್ಯಾಯಾಲಯವನ್ನು ಸಂಪರ್ಕಿಸುವಂತೆ ತಿಳಿಸಿತ್ತು.
ಇದನ್ನೂ ಓದಿ: ನೀವೇನು ಜೆನ್-ಝಿಗಳಲ್ಲ, ನಿಮ್ಮ ಅಸಲಿ ಉದ್ದೇಶವೇನು? ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ತಪರಾಕಿ
ನಿಷೇಧಿತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ನಲ್ಲಿ ಶಾಂತಿ ಬಾಂಡ್ ಉಲ್ಲಂಘಿಸಿ ರಾಷ್ಟ್ರಧ್ವಜ ಪ್ರದರ್ಶಿಸಿದ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಅಕ್ಟೋಬರ್ 13ರಂದು ಇಬ್ಬರನ್ನೂ ವಶಕ್ಕೆ ಪಡೆಯಲಾಗಿತ್ತು. ಅಕ್ಟೋಬರ್ 14ರಂದು ಅವರನ್ನು ಜೈಲಿಗೆ ಹಾಕಲಾಗಿತ್ತು.
ಬಂಧನದ ಅವಧಿ ವಿಸ್ತರಣೆಯಾಗಿದ್ದು ಹೇಗೆ?
ಅಕ್ಟೋಬರ್ 13ರಂದು ವಶಕ್ಕೆ ಪಡೆಯಲಾದ ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ ಅವರನ್ನು ಅಕ್ಟೋಬರ್ 14ರಂದು ಆರಂಭದಲ್ಲಿ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ನಂತರ ಅಕ್ಟೋಬರ್ 19ರಂದು ಅವರ ಬಂಧನದ ಅವಧಿಯನ್ನು ಮತ್ತೂ 2 ದಿನಗಳ ಕಾಲ ವಿಸ್ತರಿಸಲಾಗಿತ್ತು. ಈ ಅವಧಿಯು ಬುಧವಾರಕ್ಕೆ ಮುಕ್ತಾಯಗೊಳ್ಳುತ್ತಿತ್ತು.
ಹೈಕೋರ್ಟ್ ನಿರ್ದೇಶನ:
ತಮ್ಮ ನ್ಯಾಯಾಂಗ ಬಂಧನವನ್ನು ಪ್ರಶ್ನಿಸಿ ಇಬ್ಬರೂ ನಾಯಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರೂ, ಹೈಕೋರ್ಟ್ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ, ಮ್ಯಾಜಿಸ್ಟ್ರೇಟ್ ನಿರ್ಧಾರಕ್ಕೆ ಕಾಯುವಂತೆ ಸೂಚಿಸಿತ್ತು. ನಂತರ ನಡೆದ ವಿಚಾರಣೆಯಲ್ಲಿ ಎಸ್‌ಇಎಂ ಇಬ್ಬರಿಗೂ ಜಾಮೀನು ನೀಡಿ ಬಿಡುಗಡೆಗೆ ಆದೇಶಿಸಿದೆ.
ಇದನ್ನೂ ಓದಿ: ಸಿಜೆಪಿ ನಾಯಕರಾದ ಸೌರವ್ ದಾಸ್, ಅಶುತೋಷ್ ರಾಂಕಾ ನ್ಯಾಯಾಂಗ ಬಂಧನ ಅವಧಿ 2 ದಿನ ವಿಸ್ತರಣೆ
ಬುಧವಾರ ಪ್ರಕರಣದ ಪರಿಶೀಲನೆ ನಡೆಸಲು ನಿಗದಿಯಾಗಿದ್ದ ಎಸ್‌ಇಎಂ ಎದುರು ಮೊದಲಿಗೆ ಕಲಾಪವನ್ನು ಮುಂದುವರಿಸುವಂತೆ ಹೈಕೋರ್ಟ್ ಸಿಜೆಪಿ ಸಹ-ಸಂಚಾಲಕರಿಗೆ ತಿಳಿಸಿತ್ತು. ಮ್ಯಾಜಿಸ್ಟ್ರೇಟ್ ನಿರ್ಧಾರದ ನಂತರವೂ ಸಮಸ್ಯೆಗಳಿದ್ದರೆ ಮೇಲ್ಮನವಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದೂ ಸುಳಿವು ನೀಡಿತ್ತು. ದಸರಾ ರಜೆಯ ಕಾರಣ ಹೈಕೋರ್ಟ್ ಮುಚ್ಚಲ್ಪಟ್ಟಿದ್ದರೂ ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆಗೆ ತೆಗೆದುಕೊಳ್ಳಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ