ದೆಹಲಿಯಲ್ಲಿ ಹನುಮಾನ್​ ಜಯಂತಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ; ಹಿಂಸಾಚಾರದಲ್ಲಿ 6 ಪೊಲೀಸರಿಗೆ ಗಾಯ

ಗಲಭೆ ನಡೆದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ಪ್ರತಿಯೊಬ್ಬರೂ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಹನುಮಾನ್​ ಜಯಂತಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ; ಹಿಂಸಾಚಾರದಲ್ಲಿ 6 ಪೊಲೀಸರಿಗೆ ಗಾಯ
ಧ್ವಂಸಗೊಂಡ ವಾಹನ (ಪಿಟಿಐ ಚಿತ್ರ)
Edited By:

Updated on: Apr 17, 2022 | 8:14 AM

ದೆಹಲಿಯ ವಾಯುವ್ಯ ಭಾಗದಲ್ಲಿರುವ ಜಹಂಗೀರ್​ಪುರಿಯಲ್ಲಿ ಹನುಮಾನ್​ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ಶೋಭಾಯಾತ್ರೆಯ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದರಿಂದ ಎರಡು ಸಮುದಾಯಗಳ ಮಧ್ಯೆ ಘರ್ಷಣೆ ಉಂಟಾಗಿದೆ. ಸಂಜೆ ಸುಮಾರು 6ಗಂಟೆ ಹೊತ್ತಿಗೆ ನಡೆದ ಹಿಂಸಾಚಾರದಲ್ಲಿ ಒಂದಷ್ಟು ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಬಳಿಕ ಸ್ಥಳಕ್ಕೆ ದೆಹಲಿಯ ಹಿರಿಯ ಪೊಲೀಸ್​ ಅಧಿಕಾರಿಗಳು ಭೇಟಿ ಕೊಟ್ಟು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಘಟನೆಯಲ್ಲಿ ಆರು ಮಂದಿ ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬರು ಸಬ್ ಇನ್​ಸ್ಪೆಕ್ಟರ್​ ಆಗಿದ್ದು, ಅವರ ಕೈಯಿಗೇ ಗುಂಡು ಹಾರಿಸಲಾಗಿದೆ. ಆದರೆ ಹಿಂಸಾಚಾರದಲ್ಲಿ ತೊಡಗಿಕೊಂಡಿರುವವರ ಮೇಲೆ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿಲ್ಲ, ನಾವು ಅಶ್ರುವಾಯು ಪ್ರಯೋಗ ಮಾಡಿದ್ದಷ್ಟೇ. ಹೀಗೆ ಪೊಲೀಸರ ಮೇಲೆ ದಾಳಿ ಮಾಡಿದ್ದು ಯಾರು ಎಂಬ ಗುರುತೂ ಸಿಕ್ಕಿಲ್ಲ. ಅಪರಿಚಿತರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿಶೇಷ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೀಪಕ್ ಪಾಠಕ್​ ತಿಳಿಸಿದ್ದಾರೆ.

ಘಟನೆ ನಡೆದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸ್ ಆಯುಕ್ತ ರಾಕೇಶ್​ ಆಸ್ತಾನಾ  ಮತ್ತು ವಿಶೇಷ ಆಯುಕ್ತ ದೀಪೇಂದ್ರ ಪಾಠಕ್​ ಬಳಿ ಮಾತನಾಡಿ, ವರದಿ ಕೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ ಎಂದೂ ಸೂಚಿಸಿದ್ದಾರೆ.  ಇನ್ನು ಗಲಾಟೆ ನಡೆದ ಜಹಂಗೀರ್​ಪುರಿ ಸುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜನರು ಶಾಂತಿಯಿಂದ ಇರಬೇಕು, ದಂಗೆಕೋರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್​ ಟ್ವೀಟ್
ಗಲಭೆ ನಡೆದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ಪ್ರತಿಯೊಬ್ಬರೂ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಮಾಡಬೇಕು. ಕೇಂದ್ರ ಸರ್ಕಾರದ ಅಡಿಯಲ್ಲಿರುವ ಪೊಲೀಸ್ ತಂಡ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.  ಹಾಗೇ, ಟ್ವೀಟ್ ಮಾಡಿ ದೆಹಲಿಯ ಜಹಂಗೀರ್​ಪುರಿಯಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದ್ದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.  ಹಾಗೇ, ಆರ್​ಜೆಡಿ ನಾಯಕ, ರಾಜ್ಯ ಸಭಾ ಸಂಸದ ಮನೋಜ್ ಕುಮಾರ್ ಝಾ ಟ್ವೀಟ್ ಮಾಡಿ, ಜಹಂಗೀರ್​ಪುರಿ ಏರಿಯಾದಲ್ಲಿ ಶಾಂತಿ ಮತ್ತು ಸಾಮರಸ್ಯ ಕದಡುವ ಕೆಲಸ ಆಗಿದೆ. ಕೇಂದ್ರ ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಗುರುತಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಹಲವು ರಾಜಕೀಯ ಗಣ್ಯರು ಘಟನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಶೀಘ್ರ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Chanakya Niti: ಮಕ್ಕಳ ಯಶಸ್ಸನ್ನು ನೀವು ಬಯಸುವುದಾದರೆ ಅವರ ಪಾಲನೆಯಲ್ಲಿ ಈ ವಿಷಯಗಳನ್ನು ನೆನಪಿಡಿ- ಚಾಣಕ್ಯ ನೀತಿ