ಪಂಜಾಬ್ ಸಿಎಂ ಭಗವಂತ್ ಮಾನ್ ವಿರುದ್ಧ ಮದ್ಯ ಸೇವಿಸಿ ಗುರುದ್ವಾರ ಪ್ರವೇಶಿಸಿದ ಆರೋಪ; ಪೊಲೀಸರಿಗೆ ದೂರು ಕೊಟ್ಟ ಬಿಜೆಪಿ ನಾಯಕ
ಏಪ್ರಿಲ್ 14ರಂದು ದೇಶಾದ್ಯಂತ ಬೈಸಾಖಿ (ವೈಶಾಖಿ) ಆಚರಿಸಲಾಗಿದೆ. ಈ ವೇಳೆ ಭಗವಂತ್ ಮಾನ್ ತಕ್ತ್ ದಮದಮಾ ಸಾಹೀಬ್ ಗುರುದ್ವಾರಕ್ಕೆ ಭೇಟಿಕೊಟ್ಟಿದ್ದರು.
ಹಿಂದೊಮ್ಮೆ ಸಂಸತ್ ಕಲಾಪಕ್ಕೆ ಮದ್ಯ ಪಾನ ಮಾಡಿಕೊಂಡು ಹೋಗಿ ವಿವಾದ ಸೃಷ್ಟಿಸಿದ್ದ ಭಗವಂತ್ ಮಾನ್ ಇದೀಗ ಮತ್ತೊಮ್ಮೆ ಅದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಏಪ್ರಿಲ್ 14ರಂದು ಭಗವಂತ್ ಮಾನ್ ಮದ್ಯಪಾನ ಮಾಡಿ, ಗುರುದ್ವಾರ ಪ್ರವೇಶ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಸಿಎಂ ಭಗವಂತ್ ಮಾನ್ ವಿರುದ್ಧ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದಾರೆ. ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಂಜಾಬ್ ಡಿಜಿಪಿಗೆ ಮನವಿಯನ್ನೂ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿರುವ ಬಿಜೆಪಿ ನಾಯಕ, ತಾವು ನೀಡಿದ ದೂರಿನ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ. ಭಗವಂತ್ ಮಾನ್ ಅವರು ಮದ್ಯಪಾನ ಮಾಡಿ ಗುರುದ್ವಾರ ದಮದಮಾ ಸಾಹೀಬ್ನ್ನು ಪ್ರವೇಶ ಮಾಡಿದ್ದಾರೆ. ಈ ಮೂಲಕ ಗುರುದ್ವಾರವನ್ನು ಅಪವಿತ್ರಗೊಳಿಸಿದ್ದಾರೆ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
Filed Police complaint against Punjab CM @BhagwantMann for Entering Gurudwara Damdama Sahib in Drunk Condition. I request @DGPPunjabPolice @PunjabPoliceInd to take action on my complaint pic.twitter.com/3bde4i32zI
— Tajinder Pal Singh Bagga (@TajinderBagga) April 16, 2022
ಏಪ್ರಿಲ್ 14ರಂದು ದೇಶಾದ್ಯಂತ ಬೈಸಾಖಿ (ವೈಶಾಖಿ) ಆಚರಿಸಲಾಗಿದೆ. ಈ ವೇಳೆ ಭಗವಂತ್ ಮಾನ್ ತಕ್ತ್ ದಮದಮಾ ಸಾಹೀಬ್ ಗುರುದ್ವಾರಕ್ಕೆ ಭೇಟಿಕೊಟ್ಟಿದ್ದರು. ಆದರೆ ಆಗ ಅವರು ಸಹಜವಾಗಿ ಇರಲಿಲ್ಲ. ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದರು ಎಂದು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (SGPC) ಆರೋಪಿಸಿತ್ತು. ಅಷ್ಟೇ ಅಲ್ಲ, ಮಾನ್ ಕೂಡಲೇ ಕ್ಷಮೆ ಕೇಳಬೇಕು ಎಂದೂ ಆಗ್ರಹಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಭಗವಂತ್ ಮಾನ್ ವಿರುದ್ಧ ಕಿಡಿ ಕಾರುತ್ತಿವೆ. ಆದರೆ ಆಮ್ ಆದ್ಮಿ ಪಕ್ಷ ಈ ಆರೋಪವನ್ನು ನಿರಾಕರಿಸುತ್ತಿದೆ. ಭಗವಂತ್ ಮಾನ್ ಪ್ರತಿಷ್ಠೆಯನ್ನು ಹಾಳು ಮಾಡಲು ಕಾಂಗ್ರೆಸ್-ಬಿಜೆಪಿಗಳು ಪ್ರಯತ್ನಿಸುತ್ತಿವೆ ಎಂದು ಹೇಳಿದೆ.
ಏಪ್ರಿಲ್ 3ರಂದು ಆಮ್ ಆದ್ಮಿ ಪಕ್ಷದ ನಾಯಕ ಸನ್ನಿ ಅಹ್ಲುವಾಲಿಯಾ ಇದೇ ಬಿಜೆಪಿ ನಾಯಕ ಬಗ್ಗಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಬಗ್ಗೆ ಪ್ರಚೋದನಕಾರಿ ಮಾತುಗಳನ್ನು ಆಡುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಅದಾದ ಬಳಿಕ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಇದೀಗ ತಜೀಂದರ್ ಪಾಲ್ ಸಿಂಗ್ ಬಗ್ಗಾ ಮುಖ್ಯಮಂತ್ರಿ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರೊಂದಿಗೆ 4 ತಾಸು ಸಭೆ ನಡೆಸಿದ ಪ್ರಶಾಂತ್ ಕಿಶೋರ್; 2024 ಲೋಕಸಭಾ ಚುನಾವಣೆ ಬಗ್ಗೆ ಸುದೀರ್ಘ ವಿಷಯ ಮಂಡನೆ
Published On - 8:06 pm, Sat, 16 April 22