
ರತ್ಲಂ, ನವೆಂಬರ್ 30: ಎಂಟನೇ ತರಗತಿ ಬಾಲಕನೊಬ್ಬ ಶಾಲಾ ಕಟ್ಟಡದಿಂದ ಹಾರಿ ಆತ್ಮಹತ್ಯೆ(Suicide)ಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದೆ. ಆತ ಹಾರುವ ಮೊದಲು ನಾಲ್ಕು ನಿಮಿಷಗಳಲ್ಲಿ 52 ಬಾರಿ ಕ್ಷಮೆ ಕೇಳಿದ್ದ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಶಾಲೆಯ ಆಡಳಿತ ಮಂಡಳಿ ಹೇಳಿರುವ ಪ್ರಕಾರ, ವಿದ್ಯಾರ್ಥಿ ಗುರುವಾರ ಮೊಬೈಲ್ ಅನ್ನು ಶಾಲೆಗೆ ತಂದಿದ್ದ, ಅಷ್ಟೇ ಅಲ್ಲದೆ ತರಗತಿಯ ವಿಡಿಯೋವನ್ನು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ.
ಶಾಲಾ ಆಡಳಿತ ಮಂಡಳಿಯು ವೀಡಿಯೊವನ್ನು ನೋಡಿ ಶುಕ್ರವಾರ ಅವನ ಪೋಷಕರಿಗೆ ಕರೆ ಮಾಡಿ ಶಾಲಾ ನಿಯಮಗಳ ಉಲ್ಲಂಘನೆಯ ಬಗ್ಗೆ ಮಾತನಾಡಿತ್ತು. ಈಗ ತನಿಖೆಯ ಭಾಗವಾಗಿ ವಿದ್ಯಾರ್ಥಿ ಪ್ರಾಂಶುಪಾಲರ ಕಚೇರಿಗೆ ಪ್ರವೇಶಿಸುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.ಸುಮಾರು ನಾಲ್ಕು ನಿಮಿಷಗಳ ಕಾಲ ತನ್ನ ತಪ್ಪಿಗೆ ಪದೇ ಪದೇ ಕ್ಷಮೆಯಾಚಿಸುತ್ತಾ, ಭಯ ಮತ್ತು ಹತಾಶೆಯಿಂದ 52 ಬಾರಿ ಕ್ಷಮಿಸಿ ಎಂದು ಹೇಳಿದ್ದ.
ಪ್ರಾಂಶುಪಾಲರು ನನ್ನ ಆಸೆ, ಆಕಾಂಕ್ಷೆಗಳನ್ನು ಚಿವುಟುವುದಾಗಿ ಜತೆಗೆ ಅವನನ್ನು ಶಾಲೆಯಿಂದ ಅಮಾನತುಗೊಳಿಸುವುದಷ್ಟೇ ಅಲ್ಲದೆ, ಆತ ಪಡೆದಿರುವ ಪದಕಗಳನ್ನು ಕೂಡ ಹಿಂದಕ್ಕೆ ಪಡೆಯುತ್ತೇವೆ ಎಂದು ಬೆದರಿಸಿದ ಪರಿಣಾಮ ಈ ತಪ್ಪಿನ ಹೆಜ್ಜೆಯನ್ನಿಟ್ಟಿದ್ದಾನೆ. ಆತ ಸ್ಕೇಟಿಂಗ್ ಅಲ್ಲಿ ತುಂಬಾ ಹೆಸರು ಮಾಡಿದ್ದ, ಎರಡ ಬಾರಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ದ ಬಾಲಕ ಪ್ರಾಂಶುಪಾಲರ ಮಾತು ಕೇಳಿ ಕುಸಿದುಬಿದ್ದಿದ್ದ.
ಮತ್ತಷ್ಟು ಓದಿ: ಹಲೋ ಎಲ್ಲಾ ಕೇಳಿಸ್ಕೊಳ್ಳಿ: ವಿಡಿಯೋ ಮಾಡಿಟ್ಟು ನವ ವಿವಾಹಿತ ಆತ್ಮಹತ್ಯೆ, ಹೆಂಡ್ತಿ ವಿರುದ್ಧ ಗಂಭೀರ ಆರೋಪ
ಕೆಲವೇ ಕ್ಷಣಗಳ ನಂತರ, ಆತ ಕಚೇರಿಯಿಂದ ಹೊರಗೆ ಬಂದಿದ್ದ, ಕಾರಿಡಾರ್ನಲ್ಲಿ ಓಡಿ ಇದ್ದಕ್ಕಿದ್ದಂತೆ ಮೂರನೇ ಮಹಡಿಯಿಂದ ಜಿಗಿಯುತ್ತಿರುವುದು ಕಂಡುಬರುತ್ತದೆ. ಆಘಾತಕಾರಿ ಸಂಗತಿಯೆಂದರೆ, ಆ ಕ್ಷಣದಲ್ಲಿ ಆ ಹುಡುಗನ ತಂದೆ ಶಾಲೆಯ ಎದುರೇ ಕುಳಿತಿದ್ದರು, ಕೆಲವೇ ಮೀಟರ್ ದೂರದಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವಿರಲಿಲ್ಲ.
ನನ್ನ ಮಗನನ್ನು ಭೇಟಿಯಾಗಲು ಪ್ರಾಂಶುಪಾಲರು ಶಾಲೆಗೆ ಬರಲು ಹೇಳಿದ್ದರು, ನಾನು ಶಾಲೆಗೆ ತಲುಪಿದಾಗ, ಅವನು ಬಿದ್ದಿದ್ದಾನೆಂದು ನನಗೆ ತಿಳಿಯಿತು.
ಶಾಲೆಯಿಂದ ನನಗೆ ಕರೆ ಬಂತು, ಆದರೆ ನಂತರ ಶಾಲೆಯಿಂದ ಮತ್ತೊಂದು ಕರೆ ಬಂದು ನೇರವಾಗಿ ಆಸ್ಪತ್ರೆಗೆ ಬರುವಂತೆ ಕೇಳಿದ್ದರು ಎಂದು ವಿದ್ಯಾರ್ಥಿಯ ತಂದೆ ಪ್ರೀತಮ್ ಕಟಾರ ಹೇಳಿದ್ದಾರೆ. ಬಾಲಕ ಅಷ್ಟೆಲ್ಲಾ ಬಾರಿ ಕೇಳಿಕೊಂಡರೂ ಪ್ರಾಂಶುಪಾಲರು ಇದೊಂದು ಸಲ ಬಿಟ್ಟಿಬಿಡಬಹುದಿತ್ತು, ಇನ್ನೊಮ್ಮೆ ತರಬೇಡ ಎಂದು ಗದರಬಹುದಿತ್ತು ಎಂಬುದು ಪೋಷಕರ ಮಾತು.
ಆದರೆ ಶಾಲೆಯಲ್ಲಿ ಮಕ್ಕಳು ಮಾತ್ರವಲ್ಲ ಶಿಕ್ಷಕರು ಮೊಬೈಲ್ ಬಳಕೆ ಮಾಡಿದರೂ ಅವರ ಮೊಬೈಲ್ ಅನ್ನು ಕೂಡ ತೆಗೆದಿಟ್ಟುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಚಿಕ್ಕಪುಟ್ಟ ವಿಚಾರಗಳಿಗೆ ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆಲೋಚನಾ ಶಕ್ತಿಯೇ ಕಡಿಮೆಯಾಗುತ್ತಿದೆ. ತುಂಬಾ ಸೂಕ್ಷ್ಮವಾಗುತ್ತಾ ಹೋಗುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:19 am, Sun, 30 November 25