ಕೊವಿಶೀಲ್ಡ್​-ಕೊವ್ಯಾಕ್ಸಿನ್​ ಲಸಿಕೆಗಳ ಮಿಶ್ರಣ ಕ್ಲಿನಿಕಲ್​ ಪ್ರಯೋಗ, ಅಧ್ಯಯನಕ್ಕೆ ಡಿಸಿಜಿಐ ಅನುಮೋದನೆ..

| Updated By: Lakshmi Hegde

Updated on: Aug 11, 2021 | 10:09 AM

ಭಾರತದಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳ ಮಿಶ್ರಣ ಮಾಡಿ ಕೊಡುವುದು ಎಷ್ಟು ಪರಿಣಾಮಕಾರಿ? ಅಪಾಯವಿದೆಯಾ ಎಂಬಿತ್ಯಾದಿ ವಿಷಯಗಳನ್ನು ಅಧ್ಯಯನ ಮಾಡಲು ಇದೀಗ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ.

ಕೊವಿಶೀಲ್ಡ್​-ಕೊವ್ಯಾಕ್ಸಿನ್​ ಲಸಿಕೆಗಳ ಮಿಶ್ರಣ ಕ್ಲಿನಿಕಲ್​ ಪ್ರಯೋಗ, ಅಧ್ಯಯನಕ್ಕೆ ಡಿಸಿಜಿಐ ಅನುಮೋದನೆ..
ಸಾಂಕೇತಿಕ ಚಿತ್ರ
Follow us on

ಸದ್ಯ ಭಾರತದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಕೊವಿಶೀಲ್ಡ್​ (Covishield  Vaccine) ಮತ್ತು ಕೊವ್ಯಾಕ್ಸಿನ್​ ಲಸಿಕೆ (Covaxin Vaccine)ಗಳ ಮಿಶ್ರಣ ಮಾಡಿ, ಅಧ್ಯಯನ ನಡೆಸಲು ಡ್ರಗ್ಸ್​ ಕಂಟ್ರೋಲರ್ ಜನರಲ್ ಆಫ್​ ಇಂಡಿಯಾ (DCGI) ಅನುಮೋದನೆ ನೀಡಿದೆ. ವೆಲ್ಲೂರ್​​ನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇದರ ಅಧ್ಯಯನ ಮತ್ತು ಎರಡೂ ಲಸಿಕೆಗಳ ಮಿಶ್ರಣದ ಕ್ಲಿನಿಕಲ್​ ಪ್ರಯೋಗ (Clinical Trial) ನಡೆಯಲಿದೆ. ಸದ್ಯ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದು ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳು. ಅದರಲ್ಲೂ ಕೊವಿಶೀಲ್ಡ್​ ಜಾಸ್ತಿ ಬಳಕೆಯಾಗುತ್ತಿದೆ. ಇವೆರಡೂ ಎರಡು ಡೋಸ್​ಗಳ ಲಸಿಕೆಯಾಗಿದೆ.

ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳ ಮಿಶ್ರಣದ ಮೇಲೆ ಅಧ್ಯಯನ ನಡೆಸಬೇಕು ಎಂದು, ಜುಲೈ 29ರಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ (CDSCO)ಯ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿತ್ತು. ವೆಲ್ಲೂರಿನ ಮೆಡಿಕಲ್​ ಕಾಲೇಜಿನಲ್ಲಿ ಇವೆರಡೂ ಲಸಿಕೆಗಳ ಮಿಶ್ರಣ ಮಾಡಿ ಅಧ್ಯಯನ ನಡೆಸಲು ಅವಕಾಶ ಮಾಡಿಕೊಡಬೇಕು. ಹಾಗೇ, ಒಟ್ಟಾರೆ 300 ಆರೋಗ್ಯವಂತ ಸ್ವಯಂಸೇವಕ ಮೇಲೆ ಒಟ್ಟು ನಾಲ್ಕು ಹಂತದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮತಿ ನೀಡಬೇಕು ಎಂದು ತಜ್ಞರ ಸಮಿತಿ ತನ್ನ ಶಿಫಾರಸ್ಸಿನಲ್ಲಿ ಹೇಳಿತ್ತು.

ಅಂದರೆ ಒಬ್ಬ ವ್ಯಕ್ತಿಗೆ ಎರಡೂ ಸಲವೂ ಒಂದೇ ಲಸಿಕೆ ಕೊಡುವುದಕ್ಕಿಂತ, ಎರಡು ಬೇರೆ ಬೇರೆ ಲಸಿಕೆ ಕೊಟ್ಟರೆ ಪರಿಣಾಮ ಏನಾಗುತ್ತದೆ ಎಂಬುದನ್ನು ಈ ಅಧ್ಯಯನದಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಒಂದು ಡೋಸ್​ ಕೊವಿಶೀಲ್ಡ್​ ಕೊಟ್ಟರೆ, ಮುಂದೆ ಇನ್ನೊಂದು ಡೋಸ್​ ಕೊವ್ಯಾಕ್ಸಿನ್​ ಕೊಡುವ ಬಗ್ಗೆ ಯೋಜನೆ ರೂಪಿಸಿ ಹೀಗೊಂದು ಪ್ರಯೋಗಕ್ಕೆ ಮುಂದಾಗಲಾಗಿದೆ. ಉತ್ತರ ಪ್ರದೇಶದಲ್ಲಿ ಕೆಲವರಿಗೆ ಕಣ್ತಪ್ಪಿನಿಂದ ಹೀಗೆ ಒಂದು ಬಾರಿ ಕೊವಿಶೀಲ್ಡ್​ ಲಸಿಕೆ ಕೊಟ್ಟು ಮತ್ತೊಂದು ಬಾರಿ ಕೊವ್ಯಾಕ್ಸಿನ್​ ಲಸಿಕೆ ನೀಡಲಾಗಿತ್ತು. ಹೀಗೆ ಎರಡು ವಿಭಿನ್ನ ಲಸಿಕೆ ಪಡೆದ ಗುಂಪಿನ ಮೇಲೆ ಭಾರತೀಯ ವೈದ್ಯಕೀಯ ಮಂಡಳಿ (ICMR) ಅಧ್ಯಯನ ನಡೆಸಿತ್ತು. ಬಳಿಕ ವರದಿ ನೀಡಿದ್ದ ಐಸಿಎಂಆರ್​, ಹೀಗೆ ಎರಡೂ ಲಸಿಕೆಗಳ ಮಿಶ್ರಣ ಪಡೆದವರ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯ (ಆ್ಯಂಟಿಬಾಡಿ) ಕೊವಿಡ್​ 19 ಸೋಂಕಿನ ವಿರುದ್ಧ ಪ್ರಭಾವಶಾಲಿಯಾಗಿ ಹೋರಾಡುತ್ತದೆ ಎಂದೂ ಹೇಳಿತ್ತು.

ಆದರೆ ಸದ್ಯ ವಿಷಯ ತಜ್ಞರು ಪ್ರಸ್ತಾವನೆ ಇಟ್ಟ ಅಧ್ಯಯನ ಪ್ರಸ್ತಾವನೆ, ಐಸಿಎಂಆರ್​ ಅಧ್ಯಯನಕ್ಕಿಂತಲೂ ವಿಭಿನ್ನವಾಗಿ ನಡೆಯಲಿದೆ ಎಂದು ಹೇಳಲಾಗಿದೆ. ಒಂದೊಮ್ಮೆ ಇದು ಯಶಸ್ವಿಯಾದರೆ ಲಸಿಕೆ ಅಭಿಯಾನ ಇನ್ನಷ್ಟು ಯಶಸ್ವಿಯಾಗಲಿದೆ.

ಇದನ್ನೂ ಓದಿ: ಮೈಸೂರಿನ ಫುಟ್​ಬಾಲ್​ ಆಟಗಾರ ರೋಮ್‌ನಲ್ಲಿ ಸಾವು; ಜಲಪಾತದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ

Published On - 9:54 am, Wed, 11 August 21