ನಿಮ್ಮ ಕ್ಷೇತ್ರವನ್ನಷ್ಟೇ ನೀವು ನೋಡಿಕೊಳ್ಳಿ; ಸಂಸದೆ ಮಹುವಾ ಮೊಯಿತ್ರಾಗೆ ಸಿಎಂ ಮಮತಾ ಬ್ಯಾನರ್ಜಿ ಸಲಹೆ

| Updated By: ಸುಷ್ಮಾ ಚಕ್ರೆ

Updated on: Sep 09, 2022 | 3:21 PM

ತೃಣಮೂಲ ಕಾಂಗ್ರೆಸ್ ಸಂಸದೆಯಾಗಿರುವ ಮಹುವಾ ಮೊಯಿತ್ರಾ ಅವರು ಕಾಳಿ ದೇವಿ ಕುರಿತ ವಿವಾದಾತ್ಮಕ ಹೇಳಿಕೆಯಿಂದ ಚರ್ಚೆಗೀಡಾಗಿದ್ದರು.

ನಿಮ್ಮ ಕ್ಷೇತ್ರವನ್ನಷ್ಟೇ ನೀವು ನೋಡಿಕೊಳ್ಳಿ; ಸಂಸದೆ ಮಹುವಾ ಮೊಯಿತ್ರಾಗೆ ಸಿಎಂ ಮಮತಾ ಬ್ಯಾನರ್ಜಿ ಸಲಹೆ
ಸಂಸದೆ ಮಹುವಾ ಮೊಯಿತ್ರಾ
Follow us on

ನವದೆಹಲಿ: ಕೊಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸಭೆಯನ್ನು ಉದ್ದೇಶಿಸಿ ಇಂದು ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಾರ್ವಜನಿಕವಾಗಿ ಖಂಡಿಸಿದ್ದಾರೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರ ತವರು ನಾಡಿಯಾ ಜಿಲ್ಲೆಯಲ್ಲಿ ಪಕ್ಷದ ಸ್ಥಾನವನ್ನು ಚರ್ಚಿಸುವಾಗ ಮಮತಾ ಬ್ಯಾನರ್ಜಿ, ಮಹುವಾ ನೀವು ಜನರೊಂದಿಗೆ ಕೆಲಸ ಮಾಡಬೇಕು ಮತ್ತು ಸಮಯ ನೀಡಬೇಕು. ಯಾರಿಗಾದರೂ ಸ್ಥಾನ ನೀಡಲಿ ಅಥವಾ ನೀಡದಿರಲಿ, ಅದು ನಿಮಗೆ ಸಂಬಂಧಪಟ್ಟ ವಿಷಯವಲ್ಲ. ನಾವು ಹೇಗೆ ಎಲ್ಲರನ್ನೂ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ. ಆದರೆ ನೀವು ಪಕ್ಷಕ್ಕೆ ಸಮಯ ನೀಡಬೇಕು ಎಂದು ಹೇಳಿದ್ದಾರೆ.

“ಕರಿಂಪುರವನ್ನು ಅಬು ತಾಹೆರ್ ನೋಡಿಕೊಳ್ಳುತ್ತಾರೆ. ನಿಮ್ಮ ಲೋಕಸಭಾ ಸ್ಥಾನ ಮತ್ತು ಆ ಪ್ರದೇಶವನ್ನು ನೀವು ನೋಡಿಕೊಳ್ಳಿ” ಎಂದು ಅವರು ಸಂಸದೆ ಮಹುವಾ ಅವರಿಗೆ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ: Mamata Banerjee: ನಾನು ಅವರ ಸೇವಕನಂತೆ ನನಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ, ಮಮತಾ ಬ್ಯಾನರ್ಜಿ ಆರೋಪ

ಕಳೆದ ಡಿಸೆಂಬರ್‌ನಲ್ಲಿ ಮಮತಾ ಬ್ಯಾನರ್ಜಿಯವರು ನಾಡಿಯಾ ಅಂತಃಕಲಹದ ಕುರಿತು ಮಹುವಾ ಮೊಯಿತ್ರಾ ಅವರನ್ನು ಸಾರ್ವಜನಿಕವಾಗಿ ಟೀಕಿಸಿದ ವೀಡಿಯೊ ವೈರಲ್ ಆಗಿತ್ತು. ತೃಣಮೂಲ ಕಾಂಗ್ರೆಸ್ ಸಂಸದೆಯಾಗಿರುವ ಮಹುವಾ ಮೊಯಿತ್ರಾ ಅವರು ಕಾಳಿ ದೇವಿ ಕುರಿತ ವಿವಾದಾತ್ಮಕ ಹೇಳಿಕೆಯಿಂದ ಚರ್ಚೆಗೀಡಾಗಿದ್ದರು. ಕಾಳಿ ದೇವಿ ಸಿಗರೇಟ್ ಸೇದುತ್ತಿರುವ ಫೋಟೋವನ್ನು ಒಳಗೊಂಡಿದ್ದ ಸಿನಿಮಾದ ಪೋಸ್ಟರ್ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಸದೆ ಮಹುವಾ, ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ರೀತಿಯಲ್ಲಿ ದೇವರನ್ನು ಪೂಜಿಸುವ ಹಕ್ಕನ್ನು ಹೊಂದಿರುವುದರಿಂದ ಕಾಳಿ ದೇವಿಯನ್ನು “ಮಾಂಸ ತಿನ್ನುವ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆ” ಎಂದು ಕಲ್ಪಿಸಿಕೊಳ್ಳಲು ಒಬ್ಬ ವ್ಯಕ್ತಿಯಾಗಿ ತನಗೆ ಎಲ್ಲ ಹಕ್ಕಿದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಟಿಎಂಸಿಯಲ್ಲೇ ವಿರೋಧ ವ್ಯಕ್ತವಾಗಿತ್ತು. ಧರ್ಮವನ್ನು ತುಂಬಾ ಗಂಭೀರವಾಗಿ ಪರಿಗಣಿಸುವ ದೇಶದಲ್ಲಿ ಇದು ಪ್ರತಿಪಕ್ಷ ಬಿಜೆಪಿಗೆ ತೃಣಮೂಲವನ್ನು ಗುರಿಯಾಗಿಸುವಂತೆ ಮಾಡುತ್ತದೆ ಎಂದು ಟೀಕಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ