ದೆಹಲಿ: ಜನಸಾಮಾನ್ಯರು ಮತ್ತೊಮ್ಮೆ ಬೆಲೆ ಏರಿಕೆಯಿಂದ ತತ್ತರಿಸಿ ಹೋಗುವಂತಾಗಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ, ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ಏರಿಕೆ ಕಂಡಿದೆ. ಇದೀಗ (ಏಪ್ರಿಲ್ 4, 2022) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಸಿಎನ್ಜಿ ಬೆಲೆ ಹೆಚ್ಚಳವಾಗಿದೆ. ದೆಹಲಿಯ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ದೆಹಲಿಯಲ್ಲಿ ಸಿಎನ್ಜಿ ಬೆಲೆಯನ್ನು ಪ್ರತಿ ಕೆಜಿಗೆ 2.5 ರೂಪಾಯಿ ಹೆಚ್ಚಳ ಮಾಡಿದೆ. ಬೆಲೆ ಏರಿಕೆಯಿಂದ ದೆಹಲಿಯಲ್ಲಿ ಸಿಎನ್ಜಿ ಬೆಲೆ ಕೆಜಿಗೆ 64.11 ರೂಪಾಯಿ ಆಗಿದೆ. ಇದೀಗ ಮತ್ತೆ ದರ ಹೆಚ್ಚಿದ್ದು ಇಂದಿನಿಂದಲೇ (ಏಪ್ರಿಲ್ 4) ನೂತನ ದರ ಜಾರಿ ಆಗಲಿದೆ. ಇದಕ್ಕೂ ಮೊದ,ಲು ಏಪ್ರಿಲ್ 1 ರಂದು ಸಿಎನ್ಜಿ ಬೆಲೆ ಕೆಜಿಗೆ 80 ಪೈಸೆ ಹೆಚ್ಚಿಸಲಾಗಿತ್ತು.
ಇತ್ತ ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸತತವಾಗಿ ಏರಿಕೆ ಮಾಡಲಾಗುತ್ತಿದ್ದು, ಇಂದಿನ ಬೆಲೆ ಏರಿಕೆಯ ಬಳಿಕ (ಏಪ್ರಿಲ್ 4, 2022) ಇಂಧನ ದರದಲ್ಲಿ ಮತ್ತೆ ಹೆಚ್ಚಳವಾಗಿದೆ. ಮಾರ್ಚ್ 22ರಂದು ಆರಂಭವಾದ ಬೆಲೆ ಏರಿಕೆ ಸತತವಾಗಿ ಹೆಚ್ಚುತ್ತಲೇ ಇದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿದಿನ ಎನ್ನುವಂತೆ ಏರುತ್ತಲೇ ಇದೆ. ಅದರ ಪರಿಣಾಮ ಕಳೆದ ಎರಡು ವಾರಗಳಲ್ಲಿ (14 ದಿನ) ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ಸರಾಸರಿ ₹ 8.40 ಹೆಚ್ಚಾಗಿದೆ. ಮೊದಲ ನಾಲ್ಕು ದಿನಗಳಲ್ಲಿ ಇಂಧನ ಬೆಲೆಗಳನ್ನು ದಿನಕ್ಕೆ ಪ್ರತಿ ಲೀಟರ್ಗೆ ತಲಾ 80 ಪೈಸೆಯಂತೆ ಹೆಚ್ಚಿಸಲಾಗಿಯಿತು. ನಂತರದ ದಿನಗಳಲ್ಲಿ ಪೆಟ್ರೋಲ್ ಧಾರಣೆಯನ್ನು ಲೀಟರ್ಗೆ 50 ಮತ್ತು 30, ಮತ್ತೆ 80 ಪೈಸೆಯಷ್ಟು ಹೆಚ್ಚಿಸಲಾಯಿತು. ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 40 ಪೈಸೆ ಹೆಚ್ಚಿಸಲಾಗಿದೆ.
ದೆಹಲಿಯಲ್ಲಿಂದು ಪೆಟ್ರೋಲ್ ಬೆಲೆ ಒಂದು ಲೀಟರ್ಗೆ ₹ 103.81 ಮುಟ್ಟಿದೆ. ಲೀಟರ್ ಡೀಸೆಲ್ ಬೆಲೆ ₹ 95.07 ತಲುಪಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹ 118.83, ಡೀಸೆಲ್ ₹ 103.07ಕ್ಕೆ ಮಾರಾಟವಾಗುತ್ತಿದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 109.34 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 99.42 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 113.03 ರೂ. ಡೀಸೆಲ್ ಬೆಲೆ ಲೀಟರ್ಗೆ 98.22 ರೂ. ಆಗಿದೆ.
ಕ್ಯಾಬ್ನಲ್ಲಿ ಎಸಿ ಸೌಲಭ್ಯ ನೀಡುವುದಿಲ್ಲ ಎಂದ ಕ್ಯಾಬ್ ಚಾಲಕ
ದೆಹಲಿಯ ಕ್ಯಾಬ್ ಚಾಲಕರೊಬ್ಬರು ಸಿಎನ್ಜಿ ಬೆಲೆ ಏರಿಕೆ ಬಗ್ಗೆ ಮಾತನಾಡಿ, ಈ ಬೆಲೆ ಹೆಚ್ಚಳ ಪರಿಣಾಮವಾಗಿ ನಾವು ಕ್ಯಾಬ್ನ ಎಸಿ ಸೇವೆ ಒದಗಿಸುವುದಿಲ್ಲ. ಹೆಚ್ಚಿದ ಬೆಲೆಯು ನಮ್ಮ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಎಸಿ ಸೌಲಭ್ಯ ನೀಡಿದರೆ ಮತ್ತಷ್ಟು ಹೊರೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ನಿಂದ 3 ಹಂತದ ಅಭಿಯಾನ; ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ ಹಾರ ಹಾಕಿ ಪ್ರತಿಭಟಿಸಲು ನಿರ್ಧಾರ
ಇದನ್ನೂ ಓದಿ: Petrol Diesel Price Hike: ಮತ್ತೆ 110 ರೂ.ಗಳತ್ತ ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆ; ಇಂಧನ ದರ ಎಷ್ಟಾಗಿದೆ? ಇಲ್ಲಿ ನೋಡಿ