ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ನಿಂದ 3 ಹಂತದ ಅಭಿಯಾನ; ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ ಹಾರ ಹಾಕಿ ಪ್ರತಿಭಟಿಸಲು ನಿರ್ಧಾರ
ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಜನರಿಗೆ ವಿಶ್ವಾಸ ದ್ರೋಹವಾಗಿದೆ. 137 ದಿನಗಳ ಬಳಿಕ ಕೇವಲ ಮತಕ್ಕಾಗಿ ಎಲ್ಲವುಗಳ ಬೆಲೆಯೂ ನಿಯಂತ್ರಣದಲ್ಲಿತ್ತು. ಆದರೆ ಈಗ ಮತ್ತೆ ಏರಿಕೆಯಾಗುತ್ತಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಬಿಜೆಪಿ ಕೇಂದ್ರ ಸರ್ಕಾರ (BJP Central Government) ಈ ದೇಶದ ಜನರಿಗೆ ನಂಬಿಕೆ ದ್ರೋಹ ಮಾಡಿದೆ. ಜನರು ಮತ ಹಾಕಲಿ ಎಂಬ ಕಾರಣಕ್ಕೆ 137 ದಿನಗಳ ಕಾಲ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದೆ, ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ಹೆಚ್ಚಳ ಮಾಡಿದೆ. ಈ ಮೂಲಕ ಜನರ ನಂಬಿಕೆಗೆ ಮೋಸ ಮಾಡಿದೆ ಎಂದು ಇಂದು ಕಾಂಗ್ರೆಸ್ ಆರೋಪ ಮಾಡಿದೆ. ಅಷ್ಟೇ ಅಲ್ಲ, ಮಾರ್ಚ್ 31ರಿಂದ ಏಪ್ರಿಲ್ 7ರವರೆಗೆ, ಮಹಂಗಾಯಿ ಮುಕ್ತ ಭಾರತ (ಹಣದುಬ್ಬರ ಮುಕ್ತ ಭಾರತ) ಅಭಿಯಾನವನ್ನು ಮೂರು ಹಂತದಲ್ಲಿ ನಡೆಸಲಾಗುವುದು. ಬೆಲೆ ಏರಿಕೆ ವಿರುದ್ಧ ನಡೆಯಲಿರುವ ಈ ಅಭಿಯಾನದಲ್ಲಿ ವಿವಿಧ ರ್ಯಾಲಿಗಳು, ಮೆರವಣಿಗೆಗಳು ನಡೆಯಲಿವೆ ಎಂದೂ ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಜನರಿಗೆ ವಿಶ್ವಾಸ ದ್ರೋಹವಾಗಿದೆ. 137 ದಿನಗಳ ಬಳಿಕ ಕೇವಲ ಮತಕ್ಕಾಗಿ ಎಲ್ಲವುಗಳ ಬೆಲೆಯೂ ನಿಯಂತ್ರಣದಲ್ಲಿತ್ತು. ಆದರೆ ಈಗ ಮತ್ತೆ ಏರಿಕೆಯಾಗುತ್ತಿದೆ. ನಾವು ಬೆಲೆ ಏರಿಕೆ ವಿರುದ್ಧ ಹೋರಾಟ ಶುರು ಮಾಡುತ್ತೇವೆ. ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಅಧ್ಯಕ್ಷರ ಬಳಿ ಸಮಾಲೋಚನೆ ಬಳಿಕ ಮೂರು ಹಂತದಲ್ಲಿ ಮಹಂಗಾಯಿ ಮುಕ್ತ ಭಾರತ ಅಭಿಯಾನ ನಡೆಸಲು ಸೂಚಿಸಿದ್ದಾರೆ. ಅದರಂತೆ ಮಾರ್ಚ್ 31ರಂದು ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು, ಸಾಮಾನ್ಯ ಜನರು ಸೇರಿ ಪ್ರತಿಭಟನೆ ನಡೆಸುತ್ತೇವೆ. ಈ ವೇಳೆ ಪ್ರತಿಭಟನಾಕಾರರು ಎಲ್ಪಿಜಿ ಸಿಲಿಂಡರ್ಗಳಿಗೆ ಹಾರ ಹಾಕುತ್ತಾರೆ. ಡ್ರಮ್ಗಳನ್ನು ಬಾರಿಸಲಿದ್ದಾರೆ. ಹೀಗೆ ಇಂಧನ, ಗ್ಯಾಸ್ ಬೆಲೆ ಏರಿಕೆ ಮಾಡುತ್ತಿರುವ ಬಗ್ಗೆ ಇಷ್ಟು ವಿರೋಧ ವ್ಯಕ್ತವಾಗುತ್ತಿದ್ದರೂ ಕಿವುಡನಂತೆ ವರ್ತಿಸುತ್ತಿರುವ ಬಿಜೆಪಿ ಸರ್ಕಾರವನ್ನು ಎಚ್ಚರಿಸಲು ಪ್ರಯತ್ನ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮತ್ತೆ ಅಭಿಯಾನದ ಎರಡನೇ ಹಂತ ಏಪ್ರಿಲ್ 2ರಿಂದ 4ರವರೆಗೆ ನಡೆಯಲಿದೆ. ಇದರಲ್ಲಿ ವಿವಿಧ ಎನ್ಜಿಒಗಳು, ಧಾರ್ಮಿಕ ಗುಂಪುಗಳು, ಸಾಮಾಜಿಕ ಸಂಘಟನೆಗಳು, ನಿವಾಸಿ ಕಲ್ಯಾಣ ಸಂಸ್ಥೆಗಳು ಪಾಲ್ಗೊಳ್ಳುವವರು. ಈ ಹಂತದಲ್ಲಿ ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ವಿವಿಧೆಡೆ ಧರಣಿಗಳು, ಮೆರವಣಿಗೆಗಳು ನಡೆಯುತ್ತವೆ ಎಂದು ಸುರ್ಜೇವಾಲಾ ತಿಳಿಸಿದ್ದಾರೆ. ಹಾಗೇ ಮಹಂಗಾಯಿ ಮುಕ್ತ ಅಭಿಯಾನದ ಮೂರನೇ ಹಂತ ಏಪ್ರಿಲ್ 7ರಂದು ನಡೆಯಲಿದೆ. ಅಂದು ರಾಜ್ಯಗಳ ಕಾಂಗ್ರೆಸ್ ಪ್ರಧಾನ ಕಚೇರಿಗಳಲ್ಲಿ ಧರಣಿ ನಡೆಯಲಿದೆ. ಇದರಲ್ಲೂ ಸಾಮಾಜಿಕ ಸಂಘಟನೆಗಳು, ಎನ್ಜಿಒಗಳು ಪಾಲ್ಗೊಳ್ಳುವವರು ಎಂಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Petrol Diesel Price Hike: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ; ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ?
Published On - 6:41 pm, Sat, 26 March 22