ದೆಹಲಿ: ಕಲ್ಲಿದ್ದಲು ಪೂರೈಕೆ ಸಮಸ್ಯೆ ದೇಶದ ವಿದ್ಯುತ್ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ನಿಚ್ಚಳವಾಗಿವೆ. ಪಂಜಾಬ್, ರಾಜಾಸ್ತಾನ್, ದೆಹಲಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಸ್ಥಿತಿ ಗಂಭೀರವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಚೀನಾ ನಂತರ ವಿಶ್ವದ ಅತ್ಯಂತ ದೊಡ್ಡ ಕಲ್ಲಿದ್ದಲು ಬಳಕೆದಾರ ದೇಶವಾಗಿರುವ ಭಾರತದಲ್ಲಿ ಕಲ್ಲಿದ್ದಲು ಕೊರತೆಯ ಪರಿಣಾಮ ಮುಂದಿನ ದಿನಗಳಲ್ಲಿ ನಿಚ್ಚಳವಾಗಿ ಗೋಚರಿಲಿವೆ ಎಂದು ಅಂದಾಜಿಸಲಾಗಿದೆ. ಕರ್ನಾಟಕ ಸೇರಿದಂತೆ ದೇಶದ ಕೆಲ ರಾಜ್ಯಗಳಲ್ಲಿ ಈಗಾಗಲೇ ದೀರ್ಘ ಕಾಲದ ವಿದ್ಯುತ್ ಕಡಿತ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳು ಕತ್ತಲಲ್ಲಿ ಮುಳುಗಬಹುದು ಎಂದು ಹೇಳಲಾಗಿದೆ. ಈ ರಾಜ್ಯಗಳ ಪಟ್ಟಿಗೆ ಹೊಸದಾಗಿ ಮತ್ತಷ್ಟು ರಾಜ್ಯಗಳ ಹೆಸರು ಸೇರ್ಪಡೆಯಾಗಿದೆ.
ಪಂಜಾಬ್: ಇರುವ ಕಲ್ಲಿದ್ದಲು 5 ದಿನಗಳಿಗೆ ಮುಗಿಯುವ ಭೀತಿ
ಪಂಜಾಬ್ನ ಹಲವು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಹಲವು ಘಟಕಗಳ ಉತ್ಪಾದನಾ ಸಾಮರ್ಥ್ಯ ಕುಂಠಿತಗೊಂಡಿದೆ. ರಾಜ್ಯದ ಎಲ್ಲ ಭಾಗಗಳಿಗೆ ಬೇಡಿಕೆಯಷ್ಟು ವಿದ್ಯುತ್ ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಲೋಡ್ ಶೆಡಿಂಗ್ ವೇಳಾಪಟ್ಟಿಯನ್ನು ಪ್ರಕಟಿಸಿರುವ ಪಂಜಾಬ್ ವಿದ್ಯುತ್ ನಿಗಮ (Punjab State Power Corporation Ltd – PSPCL) ಲಭ್ಯ ವಿದ್ಯುತ್ ಅನ್ನೇ ಎಲ್ಲೆಡೆಗೆ ಹಂಚಿಕೆ ಮಾಡುತ್ತಿದೆ. ಮುಂದಿನ ಐದು ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ಮಾತ್ರ ರಾಜ್ಯದ ವಿದ್ಯುತ್ ಘಟಕಗಳಲ್ಲಿ ದಾಸ್ತಾನು ಇದೆ. ಮುಂದಿನ ದಿನಗಳಿಗೆ ಕಲ್ಲಿದ್ದಲು ಉಳಿಸಿಕೊಳ್ಳಬೇಕಾದ ಒತ್ತಡವಿರುವುದರಿಂದ ಉತ್ಪಾದನೆಯನ್ನೂ ಈಗಿನಿಂದಲೇ ಕಡಿತ ಮಾಡಲಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ. ಪಂಜಾಬ್ ರಾಜ್ಯದ ಸದ್ಯದ ವಿದ್ಯುತ್ ಬೇಡಿಕೆ 9,000 ಮೆಗಾವ್ಯಾಟ್. ಕೃಷಿ ಕ್ಷೇತ್ರದಲ್ಲಿ ವಿದ್ಯುತ್ ಬೇಡಿಕೆ ಎಂದಿನಂತೆ ಗಮನಾರ್ಹ ಪ್ರಮಾಣದಲ್ಲಿದೆ. ಉಷ್ಣಾಂಶ ಏರುತ್ತಿರುವ ಹಿನ್ನೆಲೆಯಲ್ಲಿ ಹವಾ ನಿಯಂತ್ರಕಗಳ ಬಳಕೆಯೂ ಹೆಚ್ಚಾಗಿದೆ. ಇದೂ ಸಹ ವಿದ್ಯುತ್ ಬೇಡಿಕೆ ಹೆಚ್ಚಾಗಲು ಮುಖ್ಯ ಕಾರಣವಾಗಿದೆ.
ದೆಹಲಿ: ಪೂರೈಕೆ ಖಾತ್ರಿಗೆ ವಿನಂತಿಸಿ ಪ್ರಧಾನಿಗೆ ಪತ್ರ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ವಿದ್ಯುತ್ ಕೊರತೆ ಎದುರಾಗುವ ಸಾಧ್ಯತೆಯಿದೆ. ಈ ಕುರಿತು ನಿನ್ನೆಯಷ್ಟೇ (ಅ.9) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಂಕಷ್ಟ ಎದುರಿಸಲು ನಮ್ಮ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ. ನಗರದ ವಿದ್ಯುತ್ ಬೇಡಿಕೆ ಪೂರ್ಣ ಪ್ರಮಾಣದಲ್ಲಿ ಪೂರೈಸುವುದನ್ನು ಸಾಧ್ಯವಾಗಿಸಲು ವಿದ್ಯುತ್ ಉತ್ಪಾದನಾ ಘಟಕಗಳಿಗೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಮತ್ತು ಪೆಟ್ರೊಲಿಯಂ ಗ್ಯಾಸ್ ಪೂರೈಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಕಳೆದ ಆಗಸ್ಟ್ನಿಂದಲೂ ದೆಹಲಿಯಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿದೆ. ಆಗಸ್ಟ್ ತಿಂಗಳಿನಿಂದೀಚೆಗೆ ಕೊರತೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಅಕ್ಟೋಬರ್ ತಿಂಗಳಲ್ಲಿ ಇದು ಇನ್ನಷ್ಟು ತೀವ್ರಗೊಂಡಿದೆ ಎಂದು ಕೇಜ್ರಿವಾಲ್ ತಮ್ಮ ಪತ್ರದಲ್ಲಿ ತಿಳಿಸಿದ್ದರು.
ರಾಜಸ್ಥಾನ: ರಾಜ್ಯವ್ಯಾಪಿ ಲೋಡ್ಶೆಡಿಂಗ್
ಕಲ್ಲಿದ್ದಲು ಕೊರತೆಯಿಂದಾಗಿ ರಾಜಸ್ಥಾನ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದು, ರಾಜ್ಯವ್ಯಾಪಿ ದಿನಕ್ಕೆ ಒಂದು ತಾಸು ಲೋಡ್ ಶೆಡಿಂಗ್ ಹೇರಲಾಗಿದೆ. ರಾಜ್ಯದ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಮುಂದಿನ ಕೆಲ ದಿನಗಳಿಗೆ ಸಾಕಾಗುವಷ್ಟು ಇದ್ದರೂ, ಸಂಕಷ್ಟದ ಮುನ್ಸೂಚನೆಯ ಹಿನ್ನೆಲೆಯಲ್ಲಿ ಉತ್ಪಾದನೆಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ರಾಜ್ಯದ 10 ನಗರಗಳಲ್ಲಿ ಈಗಾಗಲೇ ಲೋಡ್ ಶೆಡಿಂಗ್ ಜಾರಿ ಮಾಡಲಾಗಿದ್ದು, ಕಲ್ಲಿದ್ದಲು ಬಿಕ್ಕಟ್ಟಿನ ಮುನ್ಸೂಚನೆ ನಂತರ ಲೋಡ್ಶೆಡಿಂಗ್ ಹೇರಿದ ಮೊದಲ ರಾಜ್ಯ ಎನಿಸಿದೆ.
ತಮಿಳುನಾಡು: ಚೆನ್ನೈನಲ್ಲಿ ವಿದ್ಯುತ್ ಕಡಿತ
ತಮಿಳುನಾಡು ಸರ್ಕಾರವು ಅಧಿಕೃತವಾಗಿ ಲೋಡ್ ಶೆಡಿಂಗ್ ಅಥವಾ ಅನಿಯಮಿತ ವಿದ್ಯುತ್ ಕಡಿತವನ್ನು ಘೋಷಿಸಿಲ್ಲ. ಆದರೆ ನಿರ್ವಹಣೆಯ ಹೆಸರಿನಲ್ಲಿ ಚೆನ್ನೈ ನಗರದಲ್ಲಿ ಕಳೆದ ಶುಕ್ರವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತ ಮಾಡಿತ್ತು. ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಅನಿಯಮಿತ ವಿದ್ಯುತ್ ಕಡಿತ ಆರಂಭವಾಗಿದೆ.
ಕಲ್ಲಿದ್ದಲು ಕೊರತೆಯಿಂದಾಗಿ ಜಾರ್ಖಂಡ್, ಬಿಹಾರ ಮತ್ತು ಆಂಧ್ರ ಪ್ರದೇಶಗಳಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದು, ಅನಿಯಮಿತ ವಿದ್ಯುತ್ ಕಡಿತ ಆರಂಭವಾಗಿದೆ. ನೀರಾವರಿ ಪಂಪ್ಸೆಟ್ಗಳನ್ನು ಚಾಲೂ ಮಾಡಲು ಆಗದ ರೈತರು ಬೆಳೆಗಳು ಒಣಗುತ್ತಿರುವುದನ್ನು ಅಸಹಾಯಕ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಒಡಿಶಾದ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಯು ರಾಜ್ಯದ ಕೈಗಾರಿಕೆಗಳಿಗೆ ಅಗತ್ಯ ಪ್ರಮಾಣದ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Coal Crisis ಕಲ್ಲಿದ್ದಲು ಕೊರತೆ ಪರಿಹರಿಸದಿದ್ದರೆ ದೆಹಲಿಯಲ್ಲಿ ವಿದ್ಯುತ್ ಕಡಿತ ಎದುರಾಗಬಹುದು: ಮನೀಶ್ ಸಿಸೋಡಿಯಾ
ಇದನ್ನೂ ಓದಿ: Coal Crisis: ‘ಕಲ್ಲಿದ್ದಲು ಅಭಾವ..ವಿದ್ಯುತ್ ಪೂರೈಕೆ ವ್ಯತ್ಯಯಗಳೆಲ್ಲ ತಪ್ಪು ಕಲ್ಪನೆ, ಆತಂಕ ಬೇಡ’-ಕೇಂದ್ರ ಸರ್ಕಾರ