ಇತ್ತೀಚೆಗೆ ಕರ್ನಾಟಕದಲ್ಲಿ ಹಿಂದು-ಮುಸ್ಲಿಂ ಸಂಘರ್ಷ ತುಸು ಜಾಸ್ತಿಯೇ ಆಗಿದೆ. ಹಿಜಾಬ್ನಿಂದ ಶುರುವಾಗಿದ್ದು, ಈಗ ಹಿಂದು ದೇಗುಲಗಳ ಜಾತ್ರೆಗಳು, ಉತ್ಸವದಲ್ಲಿ ಮುಸ್ಲಿಂ ವರ್ತಕರಿಗೆ ಅಂಗಡಿ ಹಾಕಲು ಬಿಡಬಾರದು, ಮುಸ್ಲಿಮರ ಹಬ್ಬರಲ್ಲಿ ಹಿಂದುಗಳು ಅಂಗಡಿ ಹಾಕಬಾರದು ಎಂಬ ಸಂಘರ್ಷದವರೆಗೆ ಬಂದು ನಿಂತಿದೆ. ಇದೆಲ್ಲದರ ಮಧ್ಯೆ ಬಯೋಕಾನ್ ಸಂಸ್ಥಾಪಕಿ, ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಕೋಮುವಾದ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಟ್ವೀಟ್ ಮೂಲಕ ಹೇಳಿದ್ದಾರೆ. ಕರ್ನಾಟಕ ಧಾರ್ಮಿಕ ವಿಭಜನೆಯತ್ತ ವಾಲುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಿ ಎಂದು ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಟ್ಯಾಗ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಪಶ್ಚಿಮ ಬಂಗಾಳ ಬಿಜೆಪಿ ಸಹ ಉಸ್ತುವಾರಿ ಅಮಿತ್ ಮಾಳ್ವಿಯಾ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿದ್ದ ಕಿರಣ್ ಮಜುಂದಾರ್ ಶಾ, ಕರ್ನಾಟಕ ಯಾವತ್ತೂ ಅಂತರ್ಗತ ಆರ್ಥಿಕತೆಯ ಆಧಾರದ ಮೇಲೆ ಮುನ್ನಡೆಯುತ್ತದೆ. ಅಂದರೆ ಇಲ್ಲಿನ ಆರ್ಥಿಕತೆ ಎಲ್ಲರನ್ನೂ ಒಳಗೊಂಡಿದೆ. ಹೀಗಿರುವಾಗ ನಾವು ಕೋಮುವಾದ ಹೆಸರಲ್ಲಿ ಯಾರನ್ನೂ ಪ್ರತ್ಯೇಕ ಮಾಡಬಾರದು. ಐಟಿಬಿಟಿ ವಲಯಕ್ಕೆ ಕೋಮುವಾದ ಅಂಟಿಕೊಂಡರೆ, ಜಾಗತಿಕ ಮಟ್ಟದಲ್ಲಿ ನಮ್ಮ ನಾಯಕತ್ವ ನಾಶವಾಗುತ್ತದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಧಾರ್ಮಿಕ ವಿಭಜನೆಯನ್ನು ತಡೆಯುವಂತೆ ಹೇಳಿ, ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಟ್ಯಾಗ್ ಮಾಡಿದ್ದರು.
ಅದಕ್ಕೆ ನೆಟ್ಟಿಗರೊಬ್ಬರ ಕಮೆಂಟ್ ಮಾಡಿ, ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಕೋಮುವಾದವನ್ನು, ವಿಭಜನೆಯನ್ನು ಇನ್ನಷ್ಟು ಹೆಚ್ಚಿಸುತ್ತಾರೆ ಬಿಟ್ಟರೆ, ಸಮಸ್ಯೆ ಪರಿಹಾರ ಮಾಡುವುದಿಲ್ಲ. ನೋಡುತ್ತಿರಿ, ನಿಮ್ಮ ಕಣ್ಣಮುಂದೆಯೇ ಕರ್ನಾಟಕ ಅಧಪತನವಾಗುತ್ತದೆ ಎಂದು ಹೇಳಿದ್ದರು. ಮತ್ತೆ ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಿರಣ್ ಶಾ, ನಮ್ಮ ಮುಖ್ಯಮಂತ್ರಿ ಪ್ರಗತಿಪರ ನಾಯಕರು. ಈ ಸಮಸ್ಯೆಯನ್ನು ಅವರು ಶೀಘ್ರದಲ್ಲೇ ಬಗೆಹರಿಸುತ್ತಾರೆ ಎಂಬ ಖಾತರಿ ನನಗೆ ಇದೆ ಎಂದು ಹೇಳಿದ್ದರು.
ಅಮಿತ್ ಮಾಳ್ವಿಯಾ ಪ್ರತಿಕ್ರಿಯೆ ಏನು?
ಅಮಿತ್ ಮಾಳ್ವಿಯಾ ಅವರು ಬಿಜೆಪಿಯ ಐಟಿ ಸೆಲ್ನ ಮುಖ್ಯಸ್ಥರೂ ಹೌದು. ಕಿರಣ್ ಶಾ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಕಿರಣ್ ಮಜುಂದಾರ್ ಶಾರಂಥವರು ತಮ್ಮ ವೈಯಕ್ತಿಕ, ರಾಜಕೀಯ ಬಣ್ಣ ಬಳಿದ ಅಭಿಪ್ರಾಯವನ್ನು ಹೀಗೆ ಹೇರುತ್ತಿರುವುದು ಸರಿಯಲ್ಲ. ಅದೂ ಕೂಡ ಐಟಿಬಿಟಿ ವಲಯದಲ್ಲಿ ಭಾರತದ ನಾಯಕತ್ವದೊಂದಿಗೆ ಸಂಯೋಜಿಸಿಕೊಂಡು ಮಾತನಾಡುತ್ತಿರುವುದು ದುರದೃಷ್ಟಕರ. ಹಿಂದೊಮ್ಮೆ ರಾಹುಲ್ ಬಜಾಜ್ ಗುಜರಾತ್ ಬಗ್ಗೆ ಇಂಥದ್ದೇ ಮಾತುಗಳನ್ನಾಡಿದ್ದರು. ಆದರೆ ಆ ರಾಜ್ಯವಿಂದು ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಿದೆ ಎಂದಿದ್ದರು.
ಕರ್ನಾಟಕದಲ್ಲಿ ಧಾರ್ಮಿಕ ವಿಭಜನೆಯಾಗುತ್ತಿರುವ ಬಗ್ಗೆ ಕಿರಣ್ ಶಾ ಎಚ್ಚೆತ್ತುಕೊಂಡಿರುವುದು ಸಂತೋಷ. ಆದರೆ ಸದಾ ಯುದ್ಧೋತ್ಸಾಹಿಗಳಂತೆ ತೋರಿಸಿಕೊಳ್ಳುವ ಅಲ್ಪಸಂಖ್ಯಾತರು ಶಿಕ್ಷಣಕ್ಕಿಂತಲೂ ಹಿಜಾಬ್ ಮುಖ್ಯವೆಂದಾಗ ಇವರು ಮಾತನಾಡಿದ್ದಾರೆಯೇ? ಕಾಂಗ್ರೆಸ್, ಹಿಂದು ಸಂಸ್ಥೆಗಳಿಂದ ಹಿಂದುಯೇತರರನ್ನು ಹೊರಗಿಟ್ಟು ನಿಯಮ ರೂಪಿಸಿತು. ಆಗ ಕಾಂಗ್ರೆಸ್ ಪ್ರಣಾಳಿಕೆ ತಯಾರಿಸಲು ಕಿರಣ್ ಶಾ ಸಹಾಯ ಮಾಡಿದರು. ವಿವರಣೆ ಇದೆಯೇ? ಎಂದೂ ಅಮಿತ್ ಮಾಳ್ವಿಯಾ ಟ್ವೀಟ್ನಲ್ಲಿ ಬರೆದಿದ್ದರು.
ಮತ್ತೆ ಟ್ವೀಟ್ ಮಾಡಿದ ಕಿರಣ್ ಶಾ !
ಹೀಗೆ ತಮ್ಮ ಟ್ವೀಟ್ಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಕಿರಣ್ ಮಜುಂದರ್ ಶಾ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. ನಾನು ಹೇಳಿದ ವಿಷಯವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಪಕ್ಷಗಳಿಗೆ ಹೈಜಾಕ್ ಮಾಡುತ್ತಿವೆ. ಆದರೆ ಬಸವರಾಜ್ ಬೊಮ್ಮಾಯಿಯವರ ಮೇಲೆ ನನಗೆ ವಿಶ್ವಾಸವಿದೆ. ಅವರು ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹಾರ ಮಾಡುತ್ತಾರೆ ಎಂಬ ನಂಬಿಕೆ ಇದೆ. ನಾನೂ ಹೆಮ್ಮೆಯ ಕನ್ನಡಿಗಳು. ಇಂಥ ಕೋಮುವಾದಕ್ಕೆ ಸಂಬಂಧಪಟ್ಟ ಘಟನೆಗಳು ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುವುದನ್ನು ನೋಡಲು ಇಷ್ಟಪಡುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಾಗಿ ಶ್ರಮಿಸಿ, ಸಮಸ್ಯೆ ಪರಿಹರಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಪ್ರಕರಣದಲ್ಲಿ ಇಳಿಕೆ ಹಿನ್ನೆಲೆ ಎಲ್ಲ ರೀತಿಯ ಕೊವಿಡ್ ನಿರ್ಬಂಧ ತೆರವುಗೊಳಿಸಿದ ಮಹಾರಾಷ್ಟ್ರ ಸರ್ಕಾರ