ದೆಹಲಿ: ಕೆಲವು ದೇಶಗಳಲ್ಲಿ ಕೊವಿಡ್ (Covid 19) ರೂಪಾಂತರಿ ಒಮಿಕ್ರಾನ್ (omicron)ವ್ಯಾಪಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಂಗಳವಾರ ರಾಷ್ಟ್ರವ್ಯಾಪಿ ಕೊವಿಡ್ ಕಂಟೇನ್ಮೆಂಟ್ ಕಾರ್ಯತಂತ್ರವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದ್ದು, ಜಾಗರೂಕರಾಗಿರಲು ರಾಜ್ಯಗಳಿಗೆ ಹೇಳಿದೆ. ಮಂಗಳವಾರ ಈ ಬಗ್ಗೆ ಸೂಚನೆಗಳನ್ನು ನೀಡಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ (Ajay Bhalla) ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದ ನವೆಂಬರ್ 25 ರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದ್ದಾರೆ.ಅದೇ ವೇಳೆ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಆಗಮಿಸುವಾಗ ಕಠಿಣ ತಪಾಸಣೆ ಮತ್ತು ಪರೀಕ್ಷೆ ನಡೆಸಬೇಕು ಎಂದು ಹೇಳಿದ್ದಾರೆ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಪರ್ಕಗಳನ್ನು ನಿಕಟವಾಗಿ ಟ್ರ್ಯಾಕ್ ಮಾಡಬೇಕು ಮತ್ತು ಪರೀಕ್ಷಿಸಬೇಕು. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಮಾರ್ಗದರ್ಶನ ದಾಖಲೆ ಪ್ರಕಾರ ಪ್ರಯಾಣಿಕರ ಮಾದರಿಗಳನ್ನು ಗೊತ್ತುಪಡಿಸಿದ ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿಗೆ ತ್ವರಿತವಾಗಿ ಕಳುಹಿಸಬೇಕು ಎಂದು ಭಲ್ಲಾ ಹೇಳಿದರು. ಜೀನೋಮಿಕ್ ವಿಶ್ಲೇಷಣೆಯ ಫಲಿತಾಂಶಗಳನ್ನು ತ್ವರಿತಗೊಳಿಸಲು ರಾಜ್ಯದ ಕಣ್ಗಾವಲು ಅಧಿಕಾರಿಗಳು ತಮ್ಮ ಗೊತ್ತುಪಡಿಸಿದ ಅಥವಾ ಟ್ಯಾಗ್ ಮಾಡಲಾದ ಜೀನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳೊಂದಿಗೆ ನಿಕಟ ಸಮನ್ವಯವನ್ನು ಸ್ಥಾಪಿಸಬೇಕು. ಕಳಕಳಿಯ ರೂಪಾಂತರಗಳ ಉಪಸ್ಥಿತಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಕ್ಷಣ ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು. ಅದರಂತೆ ಗೃಹ ಕಾರ್ಯದರ್ಶಿ ಅವರು ಅಸ್ತಿತ್ವದಲ್ಲಿರುವ ಕೊವಿಡ್‌ಗಾಗಿ ತ್ವರಿತ ಮತ್ತು ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ಡಿಸೆಂಬರ್ 31 ರವರೆಗೆ ಮುಂದುವರಿಸಬೇಕು ಎಂದು ನಿರ್ದೇಶನ ನೀಡಿದರು.
ಮಂಗಳವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದು, ಪ್ರಕರಣಗಳ ಆರಂಭಿಕ ಗುರುತಿಸುವಿಕೆ ಮತ್ತು ನಿರ್ವಹಣೆಗಾಗಿ ಪರೀಕ್ಷೆಯನ್ನು ಹೆಚ್ಚಿಸಲು ಸಲಹೆ ನೀಡಿದರು.
ಹೊಸ ರೂಪಾಂತರಿ RT-PCR ಮತ್ತು RAT ಪರೀಕ್ಷೆಗಳಿಂದ ತಪ್ಪಿಸಿಕೊಳ್ಳುವುದಿಲ್ಲ ಎಂಬುದನ್ನು ಒತ್ತಿ ಹೇಳಿದ ಎಂದ ಆರೋಗ್ಯ ಸಚಿವಾಲಯದ ಪ್ರಕಾರ, ಸಾಕಷ್ಟು ಮೂಲಸೌಕರ್ಯ ಮತ್ತು ಮೇಲ್ವಿಚಾರಣೆಯ ಹೋಮ್ ಐಸೋಲೇಷನ್ ಖಚಿತಪಡಿಸಿಕೊಳ್ಳಲು ಭೂಷಣ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೇಳಿದ್ದಾರೆ.
ಭಾರತವು 6,990 ಹೊಸ ಕೊರೊನಾವೈರಸ್ ಸೋಂಕನ್ನು ದಾಖಲಿಸಿದೆ, ಇದು 551 ದಿನಗಳಲ್ಲಿ ಅತ್ಯಂತ ಕಡಿಮೆ. ದೇಶದ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆಯನ್ನು 3,45,87,822 ಕ್ಕೆ ತಲುಪಿದೆ., ಆದರೆ ಸಕ್ರಿಯ ಪ್ರಕರಣಗಳು 1,00,543 ಕ್ಕೆ ಇಳಿದಿದೆ, ಇದು 546 ದಿನಗಳಲ್ಲಿ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ. ಅಂಕಿಅಂಶಗಳ ಪ್ರಕಾರ 190 ಹೊಸ ಸಾವು ಪ್ರಕರಣಗಳೊಂದಿಗೆ ಸಾವಿನ ಸಂಖ್ಯೆ 4,68,980 ಕ್ಕೆ ಏರಿದೆ.
ಇದನ್ನೂ ಓದಿ: 2017ರಿಂದ 6 ಲಕ್ಷಕ್ಕೂ ಹೆಚ್ಚು ಭಾರತೀಯರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ: ಸರ್ಕಾರ
ಇದನ್ನೂ ಓದಿ: ಡಿಸೆಂಬರ್ 1ರಿಂದ ಭಾರತಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ: ವಿವರಗಳು ಇಲ್ಲಿವೆ