ಜಮ್ಮು ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆ ಮೇಲೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಸಿದುಬಿದ್ದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಅಕ್ಟೋಬರ್ 1 ರಂದು ಜಮ್ಮು ಮತ್ತು ಕಾಶ್ಮೀರ ಮೂರನೇ ಮತ್ತು ಕೊನೆಯ ಹಂತದ ಚುನಾವಣೆಗೆ ಸಜ್ಜಾಗುತ್ತಿದ್ದಂತೆ, ಪ್ರಚಾರಕ್ಕೆ ಇಂದೇ ಕೊನೆಯದಿನವಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ಕಥುವಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಅಸ್ವಸ್ಥರಾದರು, ನನಗೆ 83 ವರ್ಷ, ನಾನು ಇಷ್ಟು ಬೇಗ ಸಾಯುವುದಿಲ್ಲ, ಪ್ರಧಾನಿ ಮೋದಿಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೂ ನಾನು ಬದುಕುತ್ತೇನೆ ಎಂದು ಹೇಳುತ್ತಾ ಕುಸಿದುಬಿದ್ದಿದ್ದಾರೆ.
ಒಂದು ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನವು ಸೆಪ್ಟೆಂಬರ್ 18 ರಂದು ನಡೆಯಿತು ಮತ್ತು ಎರಡನೇ ಹಂತವು ಸೆಪ್ಟೆಂಬರ್ 25 ರಂದು ಕೊನೆಗೊಂಡಿತು. ಫಲಿತಾಂಶವು ಅಕ್ಟೋಬರ್ 8 ರಂದು ಪ್ರಕಟವಾಗಲಿದೆ.
ಮೂರನೇ ಹಂತದಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 40 ಕ್ಷೇತ್ರಗಳ ಪೈಕಿ 24 ಜಮ್ಮು ವಿಭಾಗದ ವ್ಯಾಪ್ತಿಗೆ ಬರುತ್ತವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ಸಚಿನ್ ಪೈಲಟ್ ಇಂದು ಜಮ್ಮು ಕಾರ್ಶಮೀರದ ಹಲವು ಭಾಗಗಳಲ್ಲಿ ಆಯೋಜನೆಗೊಂಡಿದ್ದ ಸಭೆಗೆಂದು ಬಂದಿದ್ದರು.
ಮತ್ತಷ್ಟು ಓದಿ: ಬಿಜೆಪಿ ಮುಖಂಡ ದೂರು: ಸಿದ್ದರಾಮಯ್ಯ ಬೆನ್ನಲ್ಲೇ ಖರ್ಗೆ ಕುಟುಂಬಕ್ಕೂ ಲೋಕಾಯುಕ್ತ ಕಂಟಕ
ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟದ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮತದಾರರನ್ನು ಮನವೊಲಿಸಲು ಖರ್ಗೆ ಅವರು ಜಸ್ರೋಟಾ ಮತ್ತು ರಾಮನಗರದಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಈ ವೇಳೆ ವೇದಿಕೆಯಲ್ಲೇ ಅವರು ಕುಸಿದುಬಿದ್ದಿದ್ದಾರೆ, ಅವರನ್ನು ಅಲ್ಲೇ ಪಕ್ಕದಲ್ಲಿದ್ದವರು ನೆಲಕ್ಕೆ ಬೀಳದಂತೆ ಹಿಡಿದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರು ಕಳೆದ ವಾರಾಂತ್ಯದಲ್ಲಿ ಜಮ್ಮುವಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದರು, ಆದರೆ ನಿರಂತರ ಪ್ರಯಾಣದಿಂದ ಉಂಟಾದ ಆಯಾಸದಿಂದಾಗಿ ಹರ್ಯಾಣದಲ್ಲಿ ಕಾಂಗ್ರೆಸ್ ರ್ಯಾಲಿಗಳಲ್ಲಿ ಭಾಗವಹಿಸಿರಲಿಲ್ಲ ಎಂದು ವರದಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Sun, 29 September 24