ಸದಾ ಒಂದಿಲ್ಲೊಂದು ಕಾರಣಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಇಂಧನ, ಎಲ್ಪಿಜಿ ಸಿಲಿಂಡರ್ ಗ್ಯಾಸ್ ಬೆಲೆ ಏರಿಕೆಯಾಗುತ್ತಿರುವುದರ ವಿರುದ್ಧ ಕಿಡಿ ಕಾರಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೊಣೆ ಮಾಡಿರುವ ರಾಹುಲ್ ಗಾಂಧಿ (Rahul Gandhi), ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ದಿನಚರಿ ಪಟ್ಟಿಯಲ್ಲಿ ಅಂದರೆ ನಿತ್ಯ ಬೆಳಗ್ಗೆ ಎದ್ದ ಬಳಿಕ ಮಾಡಬೇಕಾದ ಕೆಲಸದ ಪಟ್ಟಿಯಲ್ಲಿ ಪೆಟ್ರೋಲ್, ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಮಾಡುವುದನ್ನೂ ಸೇರಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ದಿನಚರಿಯ ಪಟ್ಟಿಯನ್ನು ಬರೆದಿದ್ದಾರೆ. 1)ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಏರಿಕೆ ಮಾಡುವುದು. 2) ಜನರ ಖರ್ಚಿನ ಮೇಲಿನ ಚರ್ಚೆ ನಿಲ್ಲಿಸುವುದು ಹೇಗೆ? 3) ನಿರುದ್ಯೋಗಿ ಯುವಕರಿಗೆ ಉದ್ಯೋಗದ ಪೊಳ್ಳು ಕನಸು ತೋರಿಸುವುದು 4) ಇವತ್ತು ಸಾರ್ವಜನಿಕ ವಲಯದ ಯಾವ ಕಂಪನಿಯನ್ನು ಮಾರಾಟ ಮಾಡುವುದು ಎಂಬುದನ್ನು ನೋಡಿ, ಅದನ್ನು ಕಾರ್ಯಗತಗೊಳಿಸುವುದು. 5) ರೈತರನ್ನು ಮತ್ತಷ್ಟು, ಇನ್ನಷ್ಟು ಅಸಹಾಯಕರನ್ನಾಗಿ ಮಾಡುವುದು..ಇವೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿದಿನ ಮಾಡುವ ಪಟ್ಟಿಯಲ್ಲಿ ಸೇರಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅದಕ್ಕೆ #RozSubahKiBaat (ಪ್ರತಿದಿನ ಬೆಳಗಿನ ಮಾತು) ಎಂಬ ಹ್ಯಾಷ್ಟ್ಯಾಗ್ ಕೊಟ್ಟಿದ್ದಾರೆ.
प्रधानमंत्री की Daily To-Do List
1. पेट्रोल-डीज़ल-गैस का रेट कितना बढ़ाऊँ
2. लोगों की ‘खर्चे पे चर्चा’ कैसे रुकवाऊँ
3. युवा को रोज़गार के खोखले सपने कैसे दिखाऊं
4. आज किस सरकारी कंपनी को बेचूँ
5. किसानों को और लाचार कैसे करूँ#RozSubahKiBaat— Rahul Gandhi (@RahulGandhi) March 30, 2022
2021ರಿಂದ ಸ್ಥಿರತೆ ಕಾಯ್ದುಕೊಂಡಿದ್ದ ಪೆಟ್ರೋಲ್-ಡೀಸೆಲ್ ದರ ಇದೀಗ ಮತ್ತೆ ಪ್ರತಿದಿನ ಏರಿಕೆಯಾಗುತ್ತಿದೆ. ಪ್ರತಿದಿನ 80 ಪೈಸೆಯಂತೆ ಕಳೆದ 9 ದಿನಗಳಲ್ಲಿ 5.60 ರೂ.ಹೆಚ್ಚಳವಾಗಿದೆ. ಇದು ಸಹಜವಾಗಿಯೇ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಮುಗಿಯುತ್ತಿದ್ದಂತೆ ಬಿಜೆಪಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿತು ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ. ಆದರೆ ಇದನ್ನು ಬಿಜೆಪಿ ನಿರಾಕರಿಸಿದೆ. ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿದ್ದು, ಅದರ ಪರಿಣಾಮ ಬಹುತೇಕ ಎಲ್ಲ ದೇಶಗಳಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಅಷ್ಟೇ ಅಲ್ಲ, ನಿತ್ಯ ಬಳಕೆಯ ಅನೇಕ ವಸ್ತುಗಳ ಬೆಲೆಯಲ್ಲಿ ಏರಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇದನ್ನೂ ಓದಿ: ‘ನನಗೆ ಹುಚ್ಚುನಾಯಿ ಕಚ್ಚಿಲ್ಲ’; ಒಂದೇ ಪ್ರಶ್ನೆಗೆ ಪಿತ್ತ ನೆತ್ತಿಗೇರಿಸಿಕೊಂಡ ರಣಬೀರ್ ಕಪೂರ್