ಮುಖ್ಯ ಚುನಾವಣಾ ಆಯುಕ್ತರೊಂದಿಗೆ ಪ್ರಧಾನಿ ಕಚೇರಿ ಸಭೆ; ಶಿಷ್ಟಾಚಾರ ಉಲ್ಲಂಘನೆಯೆಂದು ಚುನಾವಣಾ ನಿಷ್ಪಕ್ಷಪಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್​

| Updated By: Lakshmi Hegde

Updated on: Dec 18, 2021 | 8:14 AM

ಚುನಾವಣಾ ಸಮಿತಿ ಹೀಗೆ ಪಿಎಂಒ ಜತೆ ಸಂವಾದ, ಚರ್ಚೆಯಲ್ಲಿ ಪಾಲ್ಗೊಂಡ ಬಳಿಕ, ಅವರು ಚುನಾವಣೆಯಲ್ಲಿ ನಿಷ್ಪಕ್ಷಪಾತದಿಂದ ಇರುತ್ತಾರೆ ಎಂಬುದನ್ನು ಪ್ರತಿಪಕ್ಷಗಳು ನಂಬುವುದಾದರೂ ಹೇಗೆ? ಎಂದು ಮಲ್ಲಿಕಾರ್ಜುನ್​ ಖರ್ಗೆ ಪ್ರಶ್ನಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರೊಂದಿಗೆ ಪ್ರಧಾನಿ ಕಚೇರಿ ಸಭೆ; ಶಿಷ್ಟಾಚಾರ ಉಲ್ಲಂಘನೆಯೆಂದು ಚುನಾವಣಾ ನಿಷ್ಪಕ್ಷಪಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್​
ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಮುಖ್ಯ ಆಯುಕ್ತ ಸುಶೀಲ್​ ಚಂದ್ರ (ಫೋಟೋ ಕೃಪೆ- ಇಂಡಿಯನ್ ಎಕ್ಸ್​ಪ್ರೆಸ್​)
Follow us on

ಪ್ರಧಾನಮಂತ್ರಿ ಕಾರ್ಯಾಲಯ(PMO) ಮತ್ತು ಮುಖ್ಯ ಚುನಾವಣಾ ಆಯುಕ್ತ(Chief Election Commissioner) ರ ನಡುವೆ ನಡೆದ ಮಾತುಕತೆಯೀಗ ಕಾಂಗ್ರೆಸ್​ ಕೆಂಗಣ್ಣಿಗೆ ಗುರಿಯಾಗಿದೆ. ಮುಂದಿನ ವರ್ಷ 5ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಮಧ್ಯೆ ಡಿಸೆಂಬರ್ 16ರಂದು ಪ್ರಧಾನಮಂತ್ರಿ ಕಚೇರಿ, ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ, ಚುನಾವಣಾ ಆಯುಕ್ತರಾದ ರಾಜೀವ್​ ಕುಮಾರ್, ಅನೂಪ್​ ಚಂದ್ರ ಪಾಂಡೆಯವರೊಂದಿಗೆ ಆನ್​ಲೈನ್​ ಸಂವಾದ ನಡೆಸಿತ್ತು.  ಅದನ್ನೀಗ ಕಾಂಗ್ರೆಸ್​ ಖಂಡಿಸಿದೆ. ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಮಾತನಾಡಿ, ಪ್ರಧಾನಮಂತ್ರಿ ಕಚೇರಿ ಹೀಗೆ ಚುನಾವಣಾ ಆಯೋಗದೊಂದಿಗೆ ಸಭೆ ನಡೆಸುವಂತಿಲ್ಲ. ಚುನಾವಣಾ ಆಯೋಗ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಜೊತೆ ಪ್ರಧಾನಿ ಕಚೇರಿ ಮಾತುಕತೆ, ಸಂವಾದ ನಡೆಸುವಂತಿಲ್ಲ ಎಂದಿದ್ದಾರೆ. 

ಚುನಾವಣಾ ಸಮಿತಿ ಹೀಗೆ ಪಿಎಂಒ ಜತೆ ಸಂವಾದ, ಚರ್ಚೆಯಲ್ಲಿ ಪಾಲ್ಗೊಂಡ ಬಳಿಕ, ಅವರು ಚುನಾವಣೆಯಲ್ಲಿ ನಿಷ್ಪಕ್ಷಪಾತದಿಂದ ಇರುತ್ತಾರೆ ಎಂಬುದನ್ನು ಪ್ರತಿಪಕ್ಷಗಳು ನಂಬುವುದಾದರೂ ಹೇಗೆ? ಸ್ವತಂತ್ರ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನು ಪ್ರಧಾನಿ ಕಚೇರಿಯಾದರೂ ಯಾಕೆ ಸಂವಾದಕ್ಕೆ ಆಹ್ವಾನಿಸಬೇಕು. ಇಷ್ಟೆಲ್ಲ ಆದ ಮೇಲೆ, ಮುಂಬರುವ ಚುನಾವಣೆಗಳಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂದು ನಂಬುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಅಂದಹಾಗೆ, ಚುನಾವಣಾ ಆಯೋಗ ನವೆಂಬರ್ 15ರಂದು ಕೇಂದ್ರ ಕಾನೂನು ಇಲಾಖೆಯಿಂದ ಪತ್ರವೊಂದನ್ನು ಸ್ವೀಕರಿಸಿತ್ತು. ಪ್ರಧಾನಮಂತ್ರಿಯವರ ಪ್ರಧಾನಕಾರ್ಯದರ್ಶಿ ಪಿ.ಕೆ.ಮಿಶ್ರಾ ಅವರು ಡಿಸೆಂಬರ್​ 16ರಂದು ಸಾಮಾನ್ಯ ಮತದಾರರ ಪಟ್ಟಿಗೆ ಸಂಬಂಧಪಟ್ಟಂತೆ ಸಭೆ ಕರೆದಿದ್ದಾರೆ. ಅದರಲ್ಲಿ ಮುಖ್ಯ ಚುನಾವಣಾ ಆಯೋಕ್ತರೂ ಪಾಲ್ಗೊಳ್ಳಬೇಕು ಎಂದು ಉಲ್ಲೇಖವಾಗಿತ್ತು. ಅದೀಗ ಸಿಕ್ಕಾಪಟೆ ವಿವಾದಕ್ಕೆ ಕಾರಣವಾಗಿದೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ. ಚುನಾವಣಾ ಸುಧಾರಣಾ ನಿಯಮಗಳಿಗೆ ಸಂಬಂಧಿಸಿದಂತೆ ಕಾನೂನು ಇಲಾಖೆ ಮತ್ತು ಚುನಾವಣಾ ಆಯೋಗದ ನಡುವಿನ ಭಿನ್ನತೆಯನ್ನು ಹೋಗಲಾಡಿಸಲು ಈ ಸಂವಾದ ನಡೆಸಲಾಗಿತ್ತು ಎಂದು ಹೇಳಲಾಗಿದ್ದರೂ, ಇದು ಶಿಷ್ಟಾಚಾರದ ಉಲ್ಲಂಘನೆ ಎಂಬುದು ಕಾಂಗ್ರೆಸ್ ಆರೋಪ ಮಾಡಿದೆ.

ಇದನ್ನೂ ಓದಿ: Best Battersand Bowlers Of 2021: 2021ರ ಬೆಸ್ಟ್ ಬ್ಯಾಟ್ಸ್​ಮನ್​​ ಮತ್ತು ಬೆಸ್ಟ್ ಬೌಲರ್ ಯಾರು ಗೊತ್ತೇ?: ಇಲ್ಲಿದೆ ನೋಡಿ

Published On - 8:07 am, Sat, 18 December 21