ಆಗ್ರಾ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ(Uttar Pradesh Assembly elections) ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ನೇತೃತ್ವದಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ (Salman Khurshid) ಭಾನುವಾರ ಹೇಳಿದ್ದಾರೆ. ಎಎನ್ಐ ಜತೆ ಮಾತನಾಡಿದ ಖುರ್ಷಿದ್, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಯಾವುದೇ ರಾಜಕೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು. ಆದಾಗ್ಯೂ, “ಘಟ್ ಬಂಧನ್ (ಮೈತ್ರಿಯನ್ನು) ಹೃದಯದಿಂದ ಮಾಡಲಾಗುತ್ತದೆ. ಯಾರಾದರೂ ನಮ್ಮ ಪಕ್ಷಕ್ಕೆ ಸೇರಲು ಬಯಸಿದರೆ, ಅವರನ್ನು ಸ್ವಾಗತಿಸಲಾಗುತ್ತದೆ” ಎಂದು ಅವರು ಹೇಳಿದರು.
ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಕಾಂಕ್ಷಿ ಬಗ್ಗೆ ಕೇಳಿದಾಗ “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಕಣಕ್ಕಿಳಿಯಲಿದ್ದೇವೆ. ನಾವು ಗೆಲುವು ಖಚಿತಪಡಿಸಿಕೊಳ್ಳಲು ಅವರು ಶ್ರಮಿಸುತ್ತಿದ್ದಾರೆ. ನಂತರ ಅವರು ಸಿಎಂ ಯಾರು ಎಂಬುದನ್ನು ಘೋಷಿಸಬಹುದು ಎಂದಿದ್ದಾರೆ.
ಮುಂಬರುವ ಚುನಾವಣೆಗಳ ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಮಾತನಾಡಿದ ಅವರು “ನಾವು ಸಾಮಾನ್ಯ ಜನರೊಂದಿಗೆ ಸಂವಹನ ನಡೆಸುತ್ತಿದ್ದೇವೆ. ಇದಕ್ಕಾಗಿ ನಾವು ಸರಿಯಾದ ಕಾರ್ಯತಂತ್ರವನ್ನು ರೂಪಿಸಿದ್ದೇವೆ. ಪ್ರಣಾಳಿಕೆಯಲ್ಲಿ ಸಾಮಾನ್ಯ ಜನರ ಧ್ವನಿಯು ಇರುತ್ತದೆ. ಮುಖ್ಯ ಗಮನವು ರೈತರು ಮತ್ತು ಮಹಿಳೆಯರ ಭದ್ರತೆ ಬಗ್ಗೆ ಇರುತ್ತದೆ ನಾವು ಇಂದು ಆಗ್ರಾ ಜನರನ್ನು ಭೇಟಿ ಮಾಡಿದ್ದೇವೆ ಮತ್ತು ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.
ರಾಷ್ಟ್ರವು ದುರ್ಬಲ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವುದರಿಂದ ಪ್ರಣಾಳಿಕೆಯು ಆರೋಗ್ಯ ಕ್ಷೇತ್ರದ ಮೇಲೆ ಕೇಂದ್ರೀಕರಿಸುತ್ತದೆ. ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸತ್ಯ ಬಹಿರಂಗವಾಗಿದೆ. ನಾವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಬಲಪಡಿಸಬೇಕು”ಎಂದು ಅವರು ಹೇಳಿದರು.
ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ.
2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. 403 ಸದಸ್ಯರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷವು ಶೇಕಡಾ 39.67 ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಸಮಾಜವಾದಿ ಪಕ್ಷ (ಎಸ್ಪಿ) 47 ಸ್ಥಾನಗಳನ್ನು, ಬಿಎಸ್ಪಿ- 19 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ ಏಳು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು.
ಇದನ್ನೂ ಓದಿ: UP Assembly Election 2022: ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ: ಬಿಎಸ್ಪಿ
(Congress will contest the upcoming Uttar Pradesh Assembly elections under the leadership of Priyanka Gandhi)