ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿ (WBBSE)ಯ 10ನೇ ತರಗತಿ ಪರೀಕ್ಷೆಯ (ಮಾಧ್ಯಮಿಕ್) ಪರೀಕ್ಷಾ ಪತ್ರಿಕೆಯಲ್ಲಿ ಭಾರತದ ಭೂಪಟದಲ್ಲಿ ‘ಆಜಾದ್ ಕಾಶ್ಮೀರ್’ (Azad Kashmir) ಎಂದು ಗುರುತಿಸಲು ವಿದ್ಯಾರ್ಥಿಗಳಿಗೆ ಕೇಳುವ ಪ್ರಶ್ನೆಯು ವಿವಾದವನ್ನು(controversy) ಹುಟ್ಟುಹಾಕಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ,ತೃಣಮೂಲ ಕಾಂಗ್ರೆಸ್ ಸರ್ಕಾರವು “ಪ್ರತ್ಯೇಕತಾವಾದಿಗಳ ಪರ” ಎಂದು ಆರೋಪಿಸಿದೆ. ಪರೀಕ್ಷೆ ಪತ್ರಿಕೆಯಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) “ಆಜಾದ್ ಕಾಶ್ಮೀರ” ಎಂದು ಉಲ್ಲೇಖಿಸಲಾಗಿದೆ. ಇತಿಹಾಸ ಪರೀಕ್ಷೆ ಪತ್ರಿಕೆಯ 132ನೇ ಪುಟದ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಡಬ್ಲ್ಯುಬಿಬಿಎಸ್‌ಇ ಪ್ರತಿ ವರ್ಷ ಬೋರ್ಡ್ ಪರೀಕ್ಷೆಗೆ ಮುಂಚಿತವಾಗಿ ಪರೀಕ್ಷಾ ಪತ್ರಿಕೆಗಳ ಸಂಕಲನವನ್ನು ಬಿಡುಗಡೆ ಮಾಡುತ್ತದೆ. ಬೋರ್ಡ್‌ಗೆ ಸಂಯೋಜಿತವಾಗಿರುವ ವಿವಿಧ ಶಾಲೆಗಳಿಂದ ರಚಿಸಲಾದ 10 ನೇ ತರಗತಿಯ ಪೂರ್ವ-ಬೋರ್ಡ್ ಪ್ರಶ್ನೆಗಳನ್ನು ಸಾಮಾನ್ಯವಾಗಿ ಪರೀಕ್ಷಾ ಪತ್ರಿಕೆಗಳು ಒಳಗೊಂಡಿರುತ್ತವೆ. ರಾಮಕೃಷ್ಣ ಮಿಷನ್ ವಿವೇಕಾನಂದ ವಿದ್ಯಾಮಂದಿರ, ಮಾಲ್ಡಾ ಶಾಲೆಯಲ್ಲಿನ ಪರೀಕ್ಷಾ ಪತ್ರಿಕೆಯ ಪ್ರಶ್ನೆ ಪುಟ 132ನಲ್ಲಿ ಈ ಪ್ರಶ್ನೆ ಇದೆ.
ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಅವರು ಬಂಗಾಳ ಶಿಕ್ಷಣ ಸಚಿವರಲ್ಲಿ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಅದರಲ್ಲಿ ಸೂಕ್ಷ್ಮವಾದ ರಾಷ್ಟ್ರವಾದಿ ವಿರೋಧಿ ಧ್ವನಿ ಇದೆ. ಇದೆಲ್ಲವೂ ಪ್ರತ್ಯೇಕತಾವಾದಿ ಅಂಶಗಳ ಕಾರಣವನ್ನು ಉತ್ತೇಜಿಸುತ್ತದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ತಿಳಿಯಬೇಕಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ರಾಜ್ಯ ಸರ್ಕಾರದ ತುಷ್ಟೀಕರಣದ ನೀತಿಯ ಪರಿಣಾಮವಾಗಿರಬಹುದು ಎಂದು ಅವರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ:ತಮಿಳುನಾಡು ಹೆಸರನ್ನು ಬದಲಿಸಲು ನಾನೆಂದೂ ಸೂಚಿಸಿಲ್ಲ; ವಿವಾದದ ಬಗ್ಗೆ ರಾಜ್ಯಪಾಲ ರವಿ ಸ್ಪಷ್ಟನೆ
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಬ್ರತ್ಯಾ ಬಸು ಭರವಸೆ ನೀಡಿದ್ದಾರೆ. ಇದು ನಮ್ಮ ಗಮನಕ್ಕೆ ಬಂದ ನಂತರ, ನಾವು ಅದನ್ನು ಸರಿಪಡಿಸಲು ಮತ್ತು ಏನಾಯಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಪ್ರಶ್ನೆಯನ್ನು ರೂಪಿಸಿದವರು ಮತ್ತು ಪತ್ರಿಕೆಯನ್ನು ಸಂಪಾದಿಸಿದವರೊಂದಿಗೆ ನಾವು ಮಾತನಾಡುತ್ತೇವೆ. ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಡಬ್ಲ್ಯುಬಿಬಿಎಸ್‌ಇ ಅಧ್ಯಕ್ಷ ರಾಮಾನುಜ್ ಗಂಗೋಪಾಧ್ಯಾಯ ಹೇಳಿದ್ದಾರೆ.
“ಮಮತಾ ಸರ್ಕಾರ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ ಎಂದು ಗುರುತಿಸುವಂತೆ ಕೋರಲಾಗಿದೆ. ಈ ರಾಜ್ಯ ಸರ್ಕಾರವು ಕೇವಲ ಉಗ್ರಗಾಮಿಗಳನ್ನು ಬೆಂಬಲಿಸುತ್ತಿಲ್ಲ, ಆದರೆ ಯುವ ವಿದ್ಯಾರ್ಥಿಗಳಲ್ಲಿ ಭಾರತ ವಿರೋಧಿ ಮನಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:ಕೈಗಳನ್ನು ಕಟ್ಟಿಹಾಕಿ, ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಐಐಎಂಆರ್ ವಿದ್ಯಾರ್ಥಿಯ ಶವ ಪತ್ತೆ
ಇಂತಹ ಪ್ರಶ್ನೆಗಳನ್ನು ತಪ್ಪಿಸಬೇಕು ಎಂದು ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಹೇಳಿದ್ದಾರೆ.
ಅದನ್ನು ಖಂಡಿಸಲು, ವಿರೋಧಿಸಲು ಅಥವಾ ಜನರಿಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬರೆಯಲಾಗಿದೆಯೇ ಎಂಬುದನ್ನು ನೋಡದೆ ಕಾಮೆಂಟ್ ಮಾಡಲು ಸಾಧ್ಯವಿಲ್ಲ. ಆದರೆ ನಾವು ಅಂತಹ ವಿಷಯವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:46 pm, Wed, 18 January 23