ಕೊರೊನಾ ಲಸಿಕೆ ಪಡೆದವರಿಗಷ್ಟೇ ಮದ್ಯ; ಸರ್ಟಿಫಿಕೇಟ್​ ತೋರಿಸುವುದು ಕಡ್ಡಾಯ ಎಂದ ಬಾರ್ ಮಾಲೀಕರು!

|

Updated on: May 31, 2021 | 11:12 AM

ಈ ನಿರ್ಧಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಅಲ್ಲಿನ ಮ್ಯಾಜಿಸ್ಟ್ರೇಟ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ವತಿಯಿಂದ ಈ ತೆರನಾದ ಆದೇಶ ಹೊರಡಿಸಲಾಗಿಲ್ಲ. ಬಹುಶಃ ಬಾರ್ ಮಾಲೀಕರೇ ಲಸಿಕೆ ವಿತರಣೆಯನ್ನು ಪ್ರೇರೇಪಿಸುವ ಸಲುವಾಗಿ ಈ ನಿಯಮವನ್ನು ರೂಪಿಸಿರಬಹುದು. ಲಸಿಕೆ ಪಡೆಯಲು ಪ್ರೇರಣೆಗೆ ಇಂತಹ ಪೋಸ್ಟರ್ ಹಾಕಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೊರೊನಾ ಲಸಿಕೆ ಪಡೆದವರಿಗಷ್ಟೇ ಮದ್ಯ; ಸರ್ಟಿಫಿಕೇಟ್​ ತೋರಿಸುವುದು ಕಡ್ಡಾಯ ಎಂದ ಬಾರ್ ಮಾಲೀಕರು!
ಮದ್ಯಪಾನ ಆರೋಗ್ಯಕ್ಕೆ ಹಾನಿಕರ
Follow us on

ಲಕ್ನೋ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭಿಸಿ ಸುಮಾರು ಆರು ತಿಂಗಳಾಗುತ್ತಾ ಬಂದಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ವಿತರಣೆ ಸಾಧ್ಯವಾಗಿಲ್ಲ. ಒಂದೆಡೆ ಲಸಿಕೆ ಕೊರತೆ ಕಾರಣವಾಗಿದ್ದರೆ ಇನ್ನೊಂದೆಡೆ ಜನರು ಸ್ವಯಂಪ್ರೇರಿತರಾಗಿ ಮುಂದೆ ಬಾರದಿರುವುದೂ ಕಾರಣವಾಗಿದೆ. ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲು ಸರ್ಕಾರ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆಯಾದರೂ ಉತ್ತರ ಪ್ರದೇಶದಲ್ಲಿ ಬಾರ್​ ಮಾಲೀಕರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕೊರೊನಾ ಲಸಿಕೆ ಪಡೆಯುವುದಕ್ಕೆ ಪ್ರೇರೇಪಣೆ ಆಗಿದ್ದಾರೆ. ಅರೆ! ಎಲ್ಲಿಯ ಬಾರ್, ಎಲ್ಲಿಯ ಕೊರೊನಾ ಲಸಿಕೆ? ಲಸಿಕೆ ಪಡೆದ ಮೇಲೆ ಮದ್ಯಪಾನವನ್ನೇ ಮಾಡುವಂತಿಲ್ಲ. ಅಂತಹದ್ದರಲ್ಲಿ ಇದೇನು ಕತೆ ಎನ್ನುತ್ತೀರಾ? ಇಲ್ಲಿದೆ ನೋಡಿ ಅಸಲಿ ಸಮಾಚಾರ.

ಈ ಬಾರಿಯ ಜನವರಿಯಿಂದ ಕೊರೊನಾ ಫ್ರಂಟ್​ಲೈನ್ ವಾರಿಯರ್ಸ್​, ಆರೋಗ್ಯ ಕಾರ್ಯಕರ್ತರು ಹಾಗೂ ಬಹು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಲಸಿಕೆ ನೀಡಲಾರಂಭಿಸಿ ಹಂತಹಂತವಾಗಿ ಅದನ್ನು ಇತರೆ ವಯೋಮಾನದವರಿಗೂ ನೀಡುತ್ತಾ ಬರಲಾಗಿದೆ. ಸದ್ಯ 18ವರ್ಷದಿಂದ 44 ವರ್ಷ ವಯೋಮಾನದವರಿಗೂ ಲಸಿಕೆ ನೀಡಬಹುದೆನ್ನುವ ನಿಯಮ ಇದೆಯಾದರೂ ದೇಶದಲ್ಲಿ ಲಸಿಕೆ ಕೊರತೆ ಕಾಣಿಸಿಕೊಂಡ ಕಾರಣ ಲಸಿಕೆ ವಿತರಣೆ ನಿಧಾನಗತಿಯಲ್ಲಿ ಸಾಗುತ್ತಿದೆ. ಇನ್ನು ಕೆಲವೆಡೆ ಲಸಿಕೆ ಲಭ್ಯವಿದ್ದರೂ ಜನರು ಮಾತ್ರ ಅದರೆಡೆಗೆ ಉತ್ಸುಕರಾಗಿಲ್ಲ. ಹೀಗಾಗಿ ಎರಡನೇ ಅಲೆ ಉಪಟಳ ಮಿತಿ ಮೀರಿರುವಾಗ ಲಸಿಕೆಯನ್ನು ಎಲ್ಲರಿಗೆ ತಲುಪಿಸುವಂತೆ ನೋಡಿಕೊಂಡು ಮುಂದಿನ ಅಪಾಯವನ್ನು ತಡೆಗಟ್ಟುವ ಹೊಣೆ ಸರ್ಕಾರದ ಮೇಲಿದೆ.

ಇಂತಹ ಸಂದರ್ಭದಲ್ಲಿ ಉತ್ತರಪ್ರದೇಶದ ಸೈಫೈ ನಗರದ ಬಾರ್‌ಗಳಲ್ಲಿ ವಿಶೇಷ ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ಅದೇನೆಂದರೆ, ಲಸಿಕೆ ಹಾಕಿಸಿಕೊಳ್ಳದವರಿಗೆ ಮದ್ಯ ಕೊಡಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಾರ್ ಮಾಲೀಕರು ಬಂದಿದ್ದಾರೆ. ಲಸಿಕೆ ಪಡೆದ ಸರ್ಟಿಫಿಕೇಟ್ ತೋರಿಸಿದರೆ ಮಾತ್ರ ಮದ್ಯ ನೀಡಲಾಗುವುದು ಅದನ್ನು ತೋರಿಸದೇ ಇದ್ದಲ್ಲಿ ಮದ್ಯ ಕೊಡಲಾಗುವುದಿಲ್ಲ ಎಂಬ ನಿಲುವನ್ನು ತೆಗೆದುಕೊಂಡಿದ್ದಾರೆ. ಈ ಸಂಬಂಧ ಬಾರ್ ಮುಂಭಾಗ ಗೋಡೆಗಳ ಮೇಲೆ ಚೀಟಿ ಅಂಟಿಸಿರುವ ಮಾಲೀಕರು ಲಸಿಕೆ ಪಡೆದವರಷ್ಟೇ ಮದ್ಯ ಖರೀದಿಗೆ ಅರ್ಹರು ಎಂದಿದ್ದಾರೆ.

ಅಂದಹಾಗೆ, ಈ ನಿರ್ಧಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಅಲ್ಲಿನ ಮ್ಯಾಜಿಸ್ಟ್ರೇಟ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ವತಿಯಿಂದ ಈ ತೆರನಾದ ಆದೇಶ ಹೊರಡಿಸಲಾಗಿಲ್ಲ. ಬಹುಶಃ ಬಾರ್ ಮಾಲೀಕರೇ ಲಸಿಕೆ ವಿತರಣೆಯನ್ನು ಪ್ರೇರೇಪಿಸುವ ಸಲುವಾಗಿ ಈ ನಿಯಮವನ್ನು ರೂಪಿಸಿರಬಹುದು. ಲಸಿಕೆ ಪಡೆಯಲು ಪ್ರೇರಣೆಗೆ ಇಂತಹ ಪೋಸ್ಟರ್ ಹಾಕಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಲಸಿಕೆ ಪಡೆಯಿರಿ, ಮೂರನೇ ಅಲೆ ತಡೆಗಟ್ಟಿ ಎಂದು ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ತಲೆ ಕೆಡಿಸಿಕೊಂಡಿರದಿದ್ದ ಜನ ಇದೀಗ ಮದ್ಯಕ್ಕಾಗಿಯಾದರೂ ಲಸಿಕೆ ತೆಗೆದುಕೊಳ್ಳುತ್ತಾರಾ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ಇದು ಯಶಸ್ವಿಯಾದಲ್ಲಿ ಎಲ್ಲಾ ರಾಜ್ಯಗಳಲ್ಲೂ ಲಸಿಕೆ ವಿತರಣೆ ಸುಲಭವಾಗಿಸಲು ಇಂತಹದ್ದೇ ತಂತ್ರಗಾರಿಕೆಯ ಮೊರೆ ಹೋದರೂ ಅಚ್ಚರಿಯಿಲ್ಲ. ಅಂದಹಾಗೆ, ಲಸಿಕೆ ತೆಗೆದುಕೊಂಡ ಕೆಲ ದಿನಗಳ ತನಕ ಮದ್ಯಪಾನ ನಿಷೇಧಿಸಲಾಗಿದೆ. ಏನಿದ್ದರೂ ಆ ಅವಧಿ ಮುಗಿದ ಬಳಿಕವಷ್ಟೇ ಮದ್ಯ ಸೇವನೆ ಮಾಡುವುದು ಸೂಕ್ತ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೊರೊನಾ ಲಸಿಕೆ ಪಡೆದ ನಂತರ ಮದ್ಯ ಸೇವನೆ ಮಾಡಬಹುದೇ? ಎಂದು ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:
ಮದ್ಯಪಾನ ಏನು ಪರಿಣಾಮ ಬೀರುತ್ತದೆ? ಕುಡಿದ ಮೇಲೆ ದೇಹದೊಳಗೆ ಏನಾಗುತ್ತದೆ? 

ಕೊರೊನಾ ಲಸಿಕೆ ಪಡೆದ ನಂತರ ಮದ್ಯ ಸೇವನೆ ಮಾಡಬಹುದೇ?

Published On - 11:00 am, Mon, 31 May 21