AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ಪಡೆದ ನಂತರ ಮದ್ಯ ಸೇವನೆ ಮಾಡಬಹುದೇ?

ಲಸಿಕೆ ಪಡೆದ 45 ದಿನಗಳ ಒಳಗೆ ಮದ್ಯ ಸೇವನೆ ಮಾಡಿದರೆ ಕೊರೊನಾ ಲಸಿಕೆ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಹಲವು ವಾದಿಸುತ್ತಾರೆ. ಆದರೆ ಎಷ್ಟೋ ಜನರಿಗೆ ಈ ಕುರಿತು ಖಚಿತವಾಗಿ ತಿಳಿಯಬೇಕೆಂಬ ಹಂಬಲವಂತೂ ಇದೆ.

ಕೊರೊನಾ ಲಸಿಕೆ ಪಡೆದ ನಂತರ ಮದ್ಯ ಸೇವನೆ ಮಾಡಬಹುದೇ?
ಸಂಗ್ರಹ ಚಿತ್ರ
guruganesh bhat
| Updated By: ಆಯೇಷಾ ಬಾನು|

Updated on: Apr 13, 2021 | 7:39 AM

Share

ಕೊರೊನಾ ಕೊರೊನಾ ಕೊರೊನಾ. ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎಂಬ ಗಾದೆಮಾತಿಗೆ ಸಖತ್ ಉದಾಹರಣೆ ಕೊರೊನಾ ಎನ್ನಬಹುದೇನೋ. ಸದ್ಯ ಭಾರತದಲ್ಲಿ ಕೊವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಉಪಯೋಗಿಸಲಾಗುತ್ತಿದೆ. ಆದರೆ ಲಸಿಕೆ ಪಡೆದ ನಂತರ ಮುಂದೇನು ಮಾಡಬೇಕು, ಏನು ಮಾಡಬಾರದು ಎಂಬ ಸ್ಪಷ್ಟ ತಿಳಿವಳಿಕೆ ಇದ್ದಂತಿಲ್ಲ. ಲಸಿಕೆ ಪಡೆದು ಮನೆಗೆ ಬಂದು ಬೇಕಾಬಿಟ್ಟಿ ಉಳಿಯುವಂತಿಲ್ಲ. ಆದರೆ ಲಸಿಕೆ ಪಡೆದ ನಂತರ ಏನು ಮಾಡಬೇಕು ಎಂದು ಹೆಚ್ಚಿನವರಿಗೆ ಸ್ಪಷ್ಟ ಅರಿವು ಇಲ್ಲ. ಇನ್ನು ಮದ್ಯಪ್ರಿಯರಿಗಂತೂ ಕೊರೊನಾ ಲಸಿಕೆ ಪಡೆದ ನಂತರ ಮದ್ಯ ಸೇವಿಸಬೇಕೆ ಬೇಡವೇ ಎಂಬುದೇ ದೊಡ್ಡ ಪ್ರಶ್ನೆ. ಪರಿಚಯದ ವೈದ್ಯರು ಬೇಡ, ಈಗಲೂ ಯಾಕೆ ಕುಡಿಯಬೇಕು ಎಂದು ಪ್ರಶ್ನಿಸಿ ಕುಡಿಯದಿರುವಂತೆ ಸಲಹೆ ನೀಡಿರಬಹುದು. ಆದರೆ ಮನಸು ತಾಳಬೇಕಲ್ಲವೇ? ಚೂರು ಚೂರು ಕುಡಿಯುತ್ತ ಮದ್ಯ ಸೇವನೆಯೇ ಹೆಚ್ಚಾದರೆ ಕೊಡೊನಾ ಲಸಿಕೆಗೆ ತನ್ನ ಕೆಲಸ ಮಾಡಲು ಏನೂ ತೊಂದರೆಯಾಗುವುದಿಲ್ಲವೇ?

ಸದ್ಯ ಅಭಿವೃದ್ಧಿಪಡಿಸಲಾಗಿರುವ ಕೊರೊನಾ ಲಸಿಕೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಇಲ್ಲದಿದ್ದರೆ ಅದನ್ನು ಸೃಷ್ಟಿಸುತ್ತದೆ. ಮುಂಚಿನಿಂದಲೂ ಇರುವ ರೋಗನಿರೋಧಕ ಶಕ್ತಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತದೆ. ಆದರೆ ಲಸಿಕೆ ಪಡೆದ 45 ದಿನಗಳ ಒಳಗೆ ಮದ್ಯ ಸೇವನೆ ಮಾಡಿದರೆ ಕೊರೊನಾ ಲಸಿಕೆ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಹಲವರು ವಾದಿಸುತ್ತಾರೆ. ಆದರೆ ಎಷ್ಟೋ ಜನರಿಗೆ ಈ ಕುರಿತು ಖಚಿತವಾಗಿ ತಿಳಿಯಬೇಕೆಂಬ ಹಂಬಲವಂತೂ ಇದೆ.

ಮುಂಬೈನ ಪ್ರಸಿದ್ಧ Wockhardt  ಆಸ್ಪತ್ರೆಯ ಡಾ.ಬಿಪಿನ್ ಅವರು ಹೇಳುವ ಪ್ರಕಾರ, ಮದ್ಯದಲ್ಲಿರುವ ಆಲ್ಕೋಹಾಲ್ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಉತ್ಪಾದನೆಯ ಮೇಲೆ ಯಾವುದೇ ಸಂಬಂಧ ಹೊಂದಿಲ್ಲ. ದೇಹದಲ್ಲಿ ಆ್ಯಂಟಿಬಾಡಿಗಳು ಉತ್ಪಾದನೆಯಾಗಲು ಸುಮಾರು ಮೂರು ವಾರಗಳಾದರೂ ಬೇಕು. ಅಷ್ಟು ದಿನಗಳ ಒಳಗೆ ಮದ್ಯ ಅಥವಾ ಆಲ್ಕೋಹಾಲ್ ಯಾವುದೇ ರೀತಿಯಲ್ಲಿ ನಿಮ್ಮ ದೇಹವನ್ನು ಪ್ರವೇಶಿಸಿದರೂ ಉಂಟಾಗುವ ಪರಿಣಾಮದ ಕುಡಿತು ಈವರೆಗೂ ಖಚಿತ ಮಾಹಿತಿ ದೊರೆತಿಲ್ಲ. ಆದರೆ ಲಸಿಕೆ ಪಡೆದ ನಂತರ ಮದ್ಯ ಸೇವನೆ ಮಾಡುವುದನ್ನು ಸಹ ಅವರು ವಿರೋಧಿಸುತ್ತಾರೆ. ಮದ್ಯ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುವುದಂತೂ ಖಚಿತ. ಅದು ಕೊರೊನಾ ಲಸಿಕೆ ಪಡೆದ ಮೊದಲಾಗಲೀ, ನಂತರವಾಗಲೀ ಮದ್ಯ ಎಂದಿಂದಿಗೂ ದೇಹದ ಆರೋಗ್ಯಕ್ಕೆ ಅಪಾಯಕಾರಿಯೇ. ಅದು ದೇಹವನ್ನು ಡಿಹೈಡ್ರೇಟ್ ಮಾಡುತ್ತದೆ. ನಿಮ್ಮ ಕರುಳಿಗೆ ತೊಂದರೆ ನೀಡುತ್ತದೆ. ಕೇವಲ ದೈಹಿಕ ಆರೋಗ್ಯದ ಮೇಲೆ ಒಂದೇ ಅಲ್ಲದೇ ಮಾನಸಿಕ ಆರೋಗ್ಯದ ಮೇಲು ಮದ್ಯ ದುಷ್ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅವರು.

ಈವರೆಗೂ ಕೊರೊನಾ ಲಸಿಕೆ ಉತ್ಪಾದಿಸಿ ಯಾವುದೇ ಕಂಪನಿಗಳು ಸಹ ಈ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆಗಳನ್ನು ಪಡೆದ ನಂತರ ಮದ್ಯ ಸೇವನೆ ಮಾಡುವುದು ಒಳ್ಳೆಯದಲ್ಲ ಎಂದು ತಿಳಿಸಿದರೂ, ಮದ್ಯ ಸೇವನೆ ಮಾಡಲೇಬಾರದು ಎಂದೇನೂ ಈ ಕಂಪನಿಗಳು ಸ್ಪಷ್ಟ ನಿಯಮ ರೂಪಿಸಿಲ್ಲ. ಆದರೆ ರಷ್ಯಾ ಮೂಲದ ಲಸಿಕೆ ಸ್ಪುಟ್ನಿಕ್-ವಿ ಮಾತ್ರ ಲಸಿಕೆ ಪಡೆದ ನಂತರ ಮದ್ಯ ಸೇವನೆ ಮಾಡಬಾರದು ಎಂದು ಹೇಳಿದೆ. ಆದರೆ ಈ ಕುರಿತು ಇನ್ನಷ್ಟು ಆಳವಾದ ಸಂಶೊಧನೆಗಳು ನಡೆಯಬೇಕಿದೆ. ಆನಂತರವಷ್ಟೇ ಕೊರೊನಾ ಲಸಿಕೆ ನಂತರ ಏನು ಮಾಡಬೇಕು ಏನು ಮಾಡಬಾರದು ಎಂದು ಖಚಿತವಾಗಿ ಹೇಳಬಹುದಷ್ಟೆ. ಆದರೆ, ಈ ಎಲ್ಲ ಮಾಹಿತಿಗಳೂ ಸಾಮಾನ್ಯ ಮಾಹಿತಿಯಾಗಿದ್ದು ಪ್ರತಿಯೊಬ್ಬರೂ ಅವರ ಪರಿಚಿತ ಮತ್ತು ಖಾಯಂ ವೈದ್ಯರ ಬಳಿ ಸಲಹೆ ಪಡೆದ ನಂತರವೇ ಈ ಕುರಿತು ಅನುಷ್ಠಾನಕ್ಕೆ ಬರುವುದು ಒಳಿತು.

ಇದನ್ನೂ ಓದಿ: ಇಂಥ ಲಕ್ಷಣಗಳಿದ್ದರೆ ಕೊರೊನಾ ಬಂದಿರುವ ಸಾಧ್ಯತೆಯಿದೆ, ಒಮ್ಮೆ ಟೆಸ್ಟ್ ಮಾಡಿಸಿ

ಕೊವಿಡ್ ವಿರುದ್ಧದ ಹೋರಾಟಕ್ಕೆ ಲಸಿಕೆ ಮಾತ್ರ ಸಾಕಾಗುವುದಿಲ್ಲ; ಹೊಸ ರೂಪಾಂತರಿ ವೈರಸ್ ಆಟವೇ ಬೇರೆ

(After getting covid 19 vaccine alcohol consumption is safe or not here is the details)