Corona Vaccine: 40 ಕೋಟಿ ಡೋಸ್ ಸಮೀಪಿಸಿದ ಭಾರತದ ಕೊವಿಡ್19 ಲಸಿಕೆ ನೀಡಿಕೆ ಪ್ರಮಾಣ

| Updated By: ganapathi bhat

Updated on: Jul 17, 2021 | 6:53 PM

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 3,02,27,792 ಜನರು ಕೊವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲೇ 43,916 ರೋಗಿಗಳು ಚೇತರಿಸಿಕೊಂಡಿದ್ದಾರೆ.

Corona Vaccine: 40 ಕೋಟಿ ಡೋಸ್ ಸಮೀಪಿಸಿದ ಭಾರತದ ಕೊವಿಡ್19 ಲಸಿಕೆ ನೀಡಿಕೆ ಪ್ರಮಾಣ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ನಡೆಯುತ್ತಿರುವ ಬೃಹತ್ ಕೊವಿಡ್-19 ಲಸಿಕಾ ಅಭಿಯಾನವು ಮಹತ್ವದ ಮೈಲಿಗಲ್ಲು ಸ್ಥಾಪನೆಯತ್ತ ಹೆಜ್ಜೆ ಇಟ್ಟಿದ್ದು, ಒಟ್ಟು ಲಸಿಕೆ ನೀಡಿಕೆ ಪ್ರಮಾಣವು 40 ಕೋಟಿ ಡೋಸ್ ಸಮೀಪಿಸುತ್ತಿದೆ. ದೇಶಾದ್ಯಂತ ಇದುವರೆಗೆ 39,96,95,879 ಡೋಸ್ ಲಸಿಕೆ ಹಾಕಲಾಗಿದೆ. 50,09,914 ಆಂದೋಲನಗಳಲ್ಲಿ ಈ ಸಾಧನೆ ಮಾಡಲಾಗಿದೆ ಎಂಬ ಗಮನಾರ್ಹ ಸಂಗತಿ ಇಂದು ಬೆಳಗ್ಗೆ 7 ಗಂಟೆಗೆ ಬಿಡುಗಡೆ ಆಗಿರುವ ವರದಿಯಿಂದ ದೃಢಪಟ್ಟಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 42,12,557 ಜನರಿಗೆ ಲಸಿಕೆ ನೀಡಲಾಗಿದೆ.

ಬೃಹತ್ ಕೊವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮದ ಗತಿಗೆ ವೇಗ ನೀಡಲು ಬದ್ಧವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಸುತ್ತಿದೆ.

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 3,02,27,792 ಜನರು ಕೊವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲೇ 43,916 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರ ಫಲವಾಗಿ ಒಟ್ಟಾರೆ ಚೇತರಿಕೆ ದರ ಈಗ ಶೇಕಡಾ 97.13 ಗೆ ಸುಧಾರಣೆ ಕಂಡಿದ್ದು, ಚೇತರಿಕೆ ದರವು ಸುಸ್ಥಿರವಾಗಿ ಏರಿಕೆ ಪ್ರವೃತ್ತಿ ಮುಂದುವರಿಸಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 38,079 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕಳೆದ 20 ದಿನಗಳಿಂದ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 50 ಸಾವಿರ ಮಟ್ಟದಿಂದ ಕೆಳಗೆ ವರದಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ ಕೊರೊನಾ ಹೊಸ ಪ್ರಕರಣಗಳು ತಗ್ಗುತ್ತಿವೆ.

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 4,24,025ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ ಶೇಕಡಾ 1.36 ಇದೆ. ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲೇ 19,98,715 ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೆ ಒಟ್ಟಾರೆ 44.20 ಕೋಟಿಗಿಂತ ಹೆಚ್ಚಿನ ಅಂದರೆ 44,20,21,954 ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಕೊವಿಡ್-19 ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ, ವಾರದ ಪಾಸಿಟಿವಿಟಿ ದರ ಗಣನೀಯವಾಗಿ ತಗ್ಗುತ್ತಿದೆ.ಪ್ರಸ್ತುತ ಅದು ಶೇಕಡಾ 2.10ಗೆ ಇಳಿದಿದೆ. ದೈನಂದಿನ ಪಾಸಿಟಿವಿಟಿ ದರ ಇಂದು ಶೇಕಡಾ 1.91ಗೆ ಕುಸಿದಿದೆ. ನಿರಂತರ 40 ದಿನಗಳಿಂದ ಅದು ಶೇಕಡಾ 5 ಮಟ್ಟದಿಂದ ಕೆಳಗೆ ಹಾಗೂ ಸತತ 26ನೇ ದಿನದಲ್ಲಿ ಶೇಕಡಾ 3 ಮಟ್ಟದ ಒಳಗಿದೆ.

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ಘೋಷಣೆ ಹಿನ್ನೆಲೆ; 2 ತಿಂಗಳ ಹಿಂದೆ ತೀರಿಕೊಂಡ ಮಹಿಳೆಗೆ ಈಗ ಕೊವಿಡ್ ಪಾಸಿಟಿವ್ ವರದಿ ತಯಾರಿ

Delta Variant: ಕೊರೊನಾ ಲಸಿಕೆ ಪಡೆದ ನಂತರವೂ ಹಬ್ಬಿದ ಸೋಂಕಿನಲ್ಲಿ ಶೇ.86.09 ಪಾಲು ಡೆಲ್ಟಾ ತಳಿಯದ್ದು – ಐಸಿಎಂಆರ್