ಒಡಿಶಾ: ಪುರಿ ಜಗನ್ನಾಥ ರಥ ಯಾತ್ರೆ ಇಡೀ ವಿಶ್ವದ ಗಮನ ಸೆಳೆಯುವ ವಾರ್ಷಿಕ ಆಚರಣೆ. ಸಂಭ್ರಮ ಸಡಗರ, ಭಕ್ತಿ ಭಾವದಿಂದ ಲಕ್ಷಾಂತರ ಮಂದಿ ಸೇರುವ ಪುಣ್ಯ ದಿನವಿದು. ಈ ಬಾರಿ ಜೂನ್ 23 ಮಂಗಳವಾರದಂದು ನಡೆಯಬೇಕಿದೆ. ಆದರೆ ಈ ಬಾರಿ ನಡೆಯುತ್ತದಾ ಎಂಬ ಅನುಮಾನ ಕಾಡತೊಡಗಿದೆ..
ಇದಕ್ಕೆ ಬಾಧಕವಾಗಿರುವುದು ಮಹಾಮಾರಿ ಕೊರೊನಾ ಸೋಂಕು. ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕಾರು ಮಂದಿಯೂ ಗುಂಪು ಸೇರಬಾರದು, ಸಣ್ಣಪುಟ್ಟ ಧಾರ್ಮಿಕ ಕಾರ್ಯಗಳನ್ನೂ ನಡೆಸಬಾರದು ಎಂಬ ಆದೇಶ ದೇಶದಲ್ಲಿ ಜಾರಿಯಲ್ಲಿದೆ. ಹೀಗಿರುವಾವ ಇನ್ನೆರಡು ತಿಂಗಳಲ್ಲಿ ಪರಿಸ್ಥಿತಿ ತಿಳಿಗೊಂಡು ಯಾವುದೇ ಅಡಚಣೆಯಿಲ್ಲದೆ ಜಗನ್ನಾಥ ನ ರಥ ಯಾತ್ರೆ ಸುಲಲಿತವಾಗಿ ನಡೆಯುತ್ತದಾ? ಎಂಬುದೇ ಆತಂಕದ ವಿಚಾರವಾಗಿದೆ..
ಇದೇ ಕೊರೊನಾ ಸೋಂಕು ಆತಂಕದ ನಡುವೆ ಕೇಂದ್ರ ಸರ್ಕಾರ ಈಗಾಗಲೇ ಎಚ್ಚೆತ್ತುಕೊಂಡಿದೆ. ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಒಡಿಶಾ ಮುಖ್ಯಮಂತ್ರಿಗೆ ಪತ್ರ ಬರೆದು ರಥ ಯಾತ್ರೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ದೇವಸ್ಥಾನದ ಸಂಬಂಧಪಟ್ಟ ಆಚಾರ್ಯರುಗಳ ಜೊತೆ ಕೂಲಂಕಶವಾಗಿ ಚರ್ಚಿಸುವಂತೆ ಸೂಚಿಸಿದ್ದಾರೆ. ರಥ ಯಾತ್ರೆ ಪರಂಪರೆಗೆ ಯಾವುದೇ ಅಪಚಾರವಾಗದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿದ್ದಾರೆ.
Published On - 1:06 pm, Sat, 18 April 20