ದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ತಗ್ಗಿದ್ದರೂ, ಎರಡನೇ ಅಲೆಯ ಭಯವಿನ್ನೂ ಹೋಗಿಲ್ಲ. ಇನ್ನೊಮ್ಮೆ ಕೊರೊನಾ ಸೋಂಕಿತರ ಸಂಖ್ಯೆ ಉತ್ತುಂಗಕ್ಕೇರಬಹುದಾ? ವೈರಸ್ ಪ್ರಸರಣದ ಪ್ರಮಾಣ ಹೆಚ್ಚಾಗಬಹುದಾ ಎಂಬ ಆತಂಕ ಕಾಡುತ್ತಲೇ ಇದೆ. ಹೀಗಿರುವಾಗ ಆರೋಗ್ಯ ತಜ್ಞರು ಒಂದು ಸಮಾಧಾನಕರ ಸಂಗತಿಯನ್ನು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಕೋಟಿ ದಾಟಿದೆ. ಆದರೆ ಒಂದು ದಿನ ಪತ್ತೆಯಾಗುವ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ನಿರಂತರವಾಗಿ ಕುಸಿಯುತ್ತಲೇ ಇದೆ. ಇತ್ತೀಚೆಗೆ ಜನಜೀವನದ ಬಹುತೇಕ ಮೊದಲಿನಂತೇ ಆಗಿಬಿಟ್ಟಿದೆ. ಗುಂಪುಗೂಡುವುದು, ಶುಭ ಸಮಾರಂಭಗಳೆಲ್ಲ ನಡೆಯುತ್ತಿವೆ. ಆದರೂ ಕೊರೊನಾ ಅಲೆ ಮತ್ತೊಮ್ಮೆ ಉತ್ತುಂಗಕ್ಕೆ ಏರಲಾರದು, ಒಮ್ಮೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾದರೂ ಮೊದಲಿನಷ್ಟು ಹೆಚ್ಚಾಗಲಾರದು ಎಂದು ವೈರಾಲಜಿಸ್ಟ್ (ಸೂಕ್ಷ್ಮರೋಗಾಣುತಜ್ಞ) ಡಾ.ಶಾಹೀದ್ ಜಮೀಲ್ ತಿಳಿಸಿದ್ದಾರೆ.
ಸೆಪ್ಟೆಂಬರ್ ಮಧ್ಯ ಅವಧಿಯವರೆಗೆ ಪ್ರತಿದಿನ ಏನಿಲ್ಲವೆಂದರೂ 93,000ಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗುತ್ತಿದ್ದವು. ಆದರೆ ನಂತರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿ ಒಂದು ದಿನಕ್ಕೆ 25,500 ಪ್ರಕರಣಗಳಷ್ಟೇ ಪತ್ತೆಯಾಗಲು ಪ್ರಾರಂಭವಾಯಿತು. ಅದೇ ನವೆಂಬರ್ ಕೊನೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮತ್ತೆ ಏರಿಕೆಯಾಯಿತು. ಆದರೆ ಮತ್ತೆ ಇಳಿಕೆಯಾಗುತ್ತ ಬಂತು. ನನಗನ್ನಿಸುವ ಪ್ರಕಾರ ಕೊರೊನಾದ ಕೆಟ್ಟ ಭಾಗ ಮುಕ್ತಾಯವಾಯಿತು. ಹಾಗಂತ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಭವಿಷ್ಯದಲ್ಲಿ ಸೋಂಕು ತುಸು ಹೆಚ್ಚಾಗಬಹುದು. ಆದರೆ ದಿಗಿಲು ಉಂಟುಮಾಡುವಷ್ಟು ಉತ್ತುಂಗಕ್ಕೆ ಏರಲಾರದು ಎಂದು ತಿಳಿಸಿದ್ದಾರೆ.
ದಸರಾ, ದೀಪಾವಳಿ, ಚುನಾವಣೆಗಳೆಲ್ಲ ನಡೆದವು. ಜನರು ಗುಂಪುಗೂಡುವ ಕಾರಣ ಕೊರೊನಾ ಅತಿಯಾಗಿ ಬಾಧಿಸಬಹುದು ಎಂದುಕೊಳ್ಳಲಾಗಿತ್ತು. ಆದರೆ ಹಾಗೇನೂ ಆಗಲಿಲ್ಲ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರು ಅತಿ ಬೇಗನೇ ಸೋಂಕಿಗೆ ಒಳಗಾಗುತ್ತಾರೆ. ಈಗ ವ್ಯಾಕ್ಸಿನ್ಗಳು ಹೊರಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಖ್ಯಾತ ಕ್ಲಿನಿಕಲ್ ವಿಜ್ಞಾನಿ ಡಾ.ಗಗನ್‌ದೀಪ್ ಕಾಂಗ್ ಅವರೂ ಸಹ ಇದೇ ಅಭಿಪ್ರಾಯ ಹೊರಹಾಕಿದ್ದಾರೆ. ಕೊರೊನಾ ಎರಡನೇ ಅಲೆ ಶುರುವಾದರೂ ಮೊದಲಿನಷ್ಟು ಅಬ್ಬರ ಇರುವುದಿಲ್ಲ. ಎರಡನೇ ಬಾರಿಗೆ ಯಾರಿಗೂ ಕೊರೊನಾ ತಗುಲುವುದಿಲ್ಲ, ನಮ್ಮೊಳಗಿನ ಇಮ್ಯೂನಿಟಿ ಅದನ್ನು ತಡೆಯುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ ಎರಡನೇ ಬಾರಿ ಪ್ರಸರಣ ಆಗುವ ವೇಗ ಮೊದಲಿನಷ್ಟು ಇರುವುದಿಲ್ಲ. ಹಾಗಾಗಿ ಮತ್ತೊಮ್ಮೆ ಕೊರೊನಾ ಉತ್ತುಂಗಕ್ಕೇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬಲ್ಲೆ ಎಂದು ತಿಳಿಸಿದ್ದಾರೆ.
ಹಾಗೇ, ಇನ್ನುಳಿದ ಹಲವು ಆರೋಗ್ಯ ತಜ್ಞರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೋಗನಿರೋಧಕ ಶಕ್ತಿ ಇದೆ ಎಂದು ನಿರ್ಲಕ್ಷ್ಯ ಬೇಡ. ಕೊವಿಡ್-19 ನಿಯಂತ್ರಣಾ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸೋಣೆ ಎಂಬ ಕರೆಯನ್ನೂ ಕೊಟ್ಟಿದ್ದಾರೆ.
ರಾಜ್ಯಕ್ಕೆ ಕಾದಿದೆಯಂತೆ 12 ದಿನಗಳ ಗಂಡಾಂತರ.. ಕೊರೊನಾ ಬಗ್ಗೆ ತಜ್ಞರಿಂದ ಎಚ್ಚರಿಕೆ