ಅಯೋಧ್ಯೆಯ ‘ಧನ್ನೀಪುರ ಮಸೀದಿ’ ನೀಲನಕ್ಷೆ ಬಿಡುಗಡೆ: ಆವರಣದಲ್ಲಿ ಆಸ್ಪತ್ರೆ, ಗ್ರಂಥಾಲಯ, ಅಧ್ಯಯನ ಕೇಂದ್ರ
ಐದು ಎಕರೆ ವಿಸ್ತೀರ್ಣದಲ್ಲಿ ಮಸೀದಿಯ ಜೊತೆಗೆ 200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಭೋಜನ ಶಾಲೆ, ಇಂಡೊ-ಇಸ್ಲಾಮಿಕ್ ಅಧ್ಯಯನ ಕೇಂದ್ರ ಮುಂತಾದವುಗಳು ಸಹ ತಲೆ ಎತ್ತಲಿವೆ.
ಅಯೋಧ್ಯೆ: ಬಾಬ್ರಿ ಮಸೀದಿಯ ಬದಲಾಗಿ ಅಯೋಧ್ಯೆಯ ಧನ್ನೀಪುರದಲ್ಲಿ ನಿರ್ಮಾಣವಾಗಲಿರುವ ನೂತನ ಮಸೀದಿಯ ನೀಲನಕ್ಷೆ ಬಿಡುಗಡೆಯಾಗಿದೆ. ಆಗಸ್ಟ್ 15ರಂದು ನೂತನ ಮಸೀದಿಯ ಕಾಮಗಾರಿ ಆರಂಭವಾಗಲಿದೆ. 5 ಎಕರೆ ವಿಸ್ತೀರ್ಣದಲ್ಲಿ ಮಸೀದಿಯ ಜೊತೆಗೆ 200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಭೋಜನ ಶಾಲೆ, ಇಂಡೋ-ಇಸ್ಲಾಮಿಕ್ ಅಧ್ಯಯನ ಕೇಂದ್ರ ಸೇರಿದಂತೆ ಹಲವು ಸೌಲಭ್ಯಗಳು ತಲೆ ಎತ್ತಲಿವೆ.
ಜಾಮೀಯಾ ವಿಶ್ವವಿದ್ಯಾಲಯದ ಪ್ರೊ.ಅಖ್ತರ್ ನೂತನ ಮಸೀದಿಯ ನೀಲನಕ್ಷೆ ರೂಪಿಸಿದ್ದಾರೆ. ಏಕಕಾಲಕ್ಕೆ 2 ಸಾವಿರ ಜನರು ನಮಾಜ್ ಮಾಡಬಹುದಾದ ನೂತನ ಮಸೀದಿ ಅಂಡಾಕೃತಿ ಹೊಂದಿರಲಿದೆ. ಮಸೀದಿಯಲ್ಲಿ ಸೌರಶಕ್ತಿ ಬಳಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಆಸ್ಪತ್ರೆಯ ವಿನ್ಯಾಸವೂ ವಿಶಿಷ್ಟವಾಗಿದ್ದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಟ್ಟಡಗಳು ನಿರ್ಮಾಣವಾಗಲಿವೆ.
ನೂತನ ಮಸೀದಿಯ ಹೆಸರೇನು? ಬಾಬ್ರಿ ಮಸೀದಿಗೆ ಪರ್ಯಾಯವಾಗಿ ನಿರ್ಮಾಣವಾಗಲಿರುವ ಕಾರಣ ನೂತನ ಮಸೀದಿಗೆ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (IICF) ಯಾವ ಹೆಸರಿಡಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ಯಾವುದೇ ರಾಜ ಅಥವಾ ವಿವಾದಕ್ಕೀಡಾಗಬಲ್ಲ ಹೆಸರನ್ನು ಇಡುವ ಯೋಚನೆ IICFಗಿಲ್ಲ. ಧನ್ನೀಪುರದಲ್ಲಿ ನಿರ್ಮಾಣವಾಗಲಿರುವ ಕಾರಣ ‘ಧನ್ನೀಪುರ ಮಸೀದಿ’ ಎಂದೇ ನೂತನ ಮಸೀದಿಗೆ ಹೆಸರಿಡುವ ಸಾಧ್ಯತೆಯಿದೆ. ಭಾರತದ ಇತರ ಮಸೀದಿಗಳಿಗಿಂತ ವಿಭಿನ್ನವಾಗಿ ‘ಧನ್ನೀಪುರ ಮಸೀದಿ’ಯನ್ನು ನಿರ್ಮಿಸುವ ಕುರಿತು ಸಂಸ್ಥೆ ಯೋಜನೆ ರೂಪಿಸಿದೆ.
ಇಂದು ಬಿಡುಗಡೆಯಾಗಲಿದೆ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ನೂತನ ಮಸೀದಿಯ ಬ್ಲ್ಯೂಪ್ರಿಂಟ್