ನಿರಾಸೆ ತಂದ ತೀರ್ಪು: ಕರ್ನಾಟಕ ಹೈಕೋರ್ಟ್​​ನಿಂದ ಹಿಜಾಬ್​ ಆದೇಶ ಹೊರಬರುತ್ತಿದ್ದಂತೆ ಟ್ವೀಟ್ ಮಾಡಿದ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ ​

ಜಮ್ಮು-ಕಾಶ್ಮೀರದ ಪಿಡಿಪಿ ಪಕ್ಷದ ಮೆಹಬೂಬಾ ಮುಫ್ತಿ ಮತ್ತು ನ್ಯಾಶನಲ್​ ಕಾನ್ಫರೆನ್ಸ್ ಪಾರ್ಟಿಯ ಒಮರ್​ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ. ಇವರಿಬ್ಬರೂ ಕರ್ನಾಕಟದಲ್ಲಿ ಹಿಜಾಬ್​ ಗಲಾಟೆ ಶುರುವಾದಾಗಿನಿಂದಲೂ ಮಾತನಾಡುತ್ತಿದ್ದಾರೆ.

ನಿರಾಸೆ ತಂದ ತೀರ್ಪು: ಕರ್ನಾಟಕ ಹೈಕೋರ್ಟ್​​ನಿಂದ ಹಿಜಾಬ್​ ಆದೇಶ ಹೊರಬರುತ್ತಿದ್ದಂತೆ ಟ್ವೀಟ್ ಮಾಡಿದ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ ​
ಮೆಹಬೂಬಾ ಮುಫ್ತಿ
Edited By:

Updated on: Mar 15, 2022 | 12:57 PM

ಕರ್ನಾಟಕ ಹಿಜಾಬ್​ ವಿವಾದ (Hijab Row) ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಹಿಜಾಬ್​ ವಿವಾದಕ್ಕೆ ರಾಷ್ಟ್ರಮಟ್ಟದಲ್ಲಿ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಇಂದು ಅಂತಿಮ ತೀರ್ಪು ಹೊರಬಿದ್ದು, ಶಿಕ್ಷಣ ಸಂಸ್ಥೆಗಳಿಗೆ ಹಿಜಾಬ್​ ಧರಿಸಿ ಹೋಗುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಸ್ಪಷ್ಟವಾಗಿ ಹೇಳಿದೆ. ಅದರ ಬೆನ್ನಲ್ಲೇ ಮತ್ತೊಮ್ಮೆ ರಾಷ್ಟ್ರ ಮಟ್ಟದ ನಾಯಕರು ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಜಮ್ಮು-ಕಾಶ್ಮೀರದ ಪಿಡಿಪಿ ಪಕ್ಷದ ಮೆಹಬೂಬಾ ಮುಫ್ತಿ ಮತ್ತು ನ್ಯಾಶನಲ್​ ಕಾನ್ಫರೆನ್ಸ್ ಪಾರ್ಟಿಯ ಒಮರ್​ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ. ಇವರಿಬ್ಬರೂ ಕರ್ನಾಕಟದಲ್ಲಿ ಹಿಜಾಬ್​ ಗಲಾಟೆ ಶುರುವಾದಾಗಿನಿಂದಲೂ ಮಾತನಾಡುತ್ತಿದ್ದು, ಹಿಜಾಬ್ ಧರಿಸಿ ಹೋದ ವಿದ್ಯಾರ್ಥಿಗಳಿಗೆ ಕಾಲೇಜಿನೊಳಗೆ ಪ್ರವೇಶ ಕೊಡದೆ ಇರುವುದನ್ನು ತೀವ್ರವಾಗಿ ಖಂಡಿಸಿದ್ದರು.

ಇಂದು ತೀರ್ಪು ಹೊರಬಿದ್ದ ಬೆನ್ನಲ್ಲೇ ಟ್ವೀಟ್ ಮಾಡಿದ ಮೆಹಬೂಬಾ ಮುಫ್ತಿ, ಹಿಜಾಬ್​ ನಿಷೇಧವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪು ನಿಜಕ್ಕೂ ನಿರಾಸೆ ಮೂಡಿಸಿದೆ. ಒಂದೆಡೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಲಾಗುತ್ತಿದೆ, ಅದೇ ಇನ್ನೊಂದು ಕಡೆಯಲ್ಲಿ ಅವರ ಹಕ್ಕು, ಆಯ್ಕೆಯನ್ನು ನೆರವೇರಿಸಿಕೊಳ್ಳಲು ನಿರಾಕರಣೆ ಮಾಡಲಾಗುತ್ತಿದೆ. ಹಿಜಾಬ್ ಎಂಬುದು ಕೇವಲ ಧಾರ್ಮಿಕತೆಗೆ ಸಂಬಂಧಪಟ್ಟ ವಿಚಾರವಲ್ಲ, ಇದು ಆಯ್ಕೆ ಸ್ವಾತಂತ್ರ್ಯದ ಅಂಶವೂ ಹೌದು ಎಂದು ಹೇಳಿದ್ದಾರೆ. ಈ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಆಯ್ಕೆ ಹಕ್ಕನ್ನು ದಮನ ಮಾಡಲಾಗಿದೆ ಎಂದು ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

ಹಾಗೇ, ಎನ್​ಸಿ ಪಕ್ಷದ ನಾಯಕ ಒಮರ್​ ಅಬ್ದುಲ್ಲಾ ಟ್ವೀಟ್ ಮಾಡಿ, ಹಿಜಾಬ್​ಗೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್​ ವರದಿ ತೀವ್ರ ನಿರಾಸೆ ಮೂಡಿಸಿದೆ. ಹಿಜಾಬ್​ ಎಂಬುದು ಒಂದು ಬಟ್ಟೆಯ ತುಂಡು ಎಂದು ನೀವೆಲ್ಲ ಭಾವಿಸಬಹುದು. ಆದರೆ ಅದನ್ನು ಧರಿಸಲು ಮಹಿಳೆ ಇಷ್ಟಪಡುತ್ತಾಳೆ ಎಂದರೆ ಅದು ಆಕೆಯ ಆಯ್ಕೆಯಾಗಿರುತ್ತದೆ. ಇಂಥ ಒಂದು ಮೂಲಭೂತ ಹಕ್ಕನ್ನೂ ಕೋರ್ಟ್ ಎತ್ತಿ ಹಿಡಿಯದೆ ಇರುವುದು ನಿಜಕ್ಕೂ ಹಾಸ್ಯಾಸ್ಪದ ಎಂದಿದ್ದಾರೆ.

ಇವರಿಬ್ಬರೂ ಆರಂಭದಿಂದಲೇ ಹಿಜಾಬ್​ ಬಗ್ಗೆ ಮಾತನಾಡುತ್ತ ಬಂದಿದ್ದಾರೆ. ಭಾರತದಲ್ಲಿ ಈಗ ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುವುದು ಸಾಮಾನ್ಯವಾಗಿಬಿಟ್ಟಿದೆ ಮತ್ತು ಅದು ಬಹಿರಂಗವಾಗಿ ನಡೆಯುತ್ತಿದೆ. ತನ್ನ ವೈವಿದ್ಯತೆಯನ್ನು ಸಂಭ್ರಮಿಸುವ ರಾಷ್ಟ್ರವಾಗಿ ಭಾರತ ಉಳಿದಿಲ್ಲ ಎಂದು ಒಮರ್​ ಅಬ್ದುಲ್ಲಾ ಈ ಹಿಂದೆ ಹೇಳಿದ್ದರು. ಅಲ್ಲದೆ, ತಿ ವ್ಯಕ್ತಿಯೂ ತನಗಿಷ್ಟವಾದ ಉಡುಪು ಧರಿಸಲು ಸ್ವತಂತ್ರ. ಇನ್ನೊಬ್ಬರು ಅದನ್ನು ಇಷ್ಟಪಡಲಿ, ಬಿಡಲಿ ಅದು ಅವರ ಹಕ್ಕು ಆಗಿರುತ್ತದೆ. ಜನಪ್ರತಿನಿಧಿಗಳು ಕೇಸರಿ ಬಟ್ಟೆ ಧರಿಸುತ್ತಾರೆ ಎಂದಾದ ಮೇಲೆ ಈ ಹುಡುಗಿಯರು ಯಾಕೆ ಹಿಜಾಬ್ ಧರಿಸಬಾರದು. ಮುಸ್ಲಿಮರು ಎರಡನೇ ದರ್ಜೆ ನಾಗರಿಕರಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಕೇಸರಿ ಖಾವಿ ಧರಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮತ್ತು ಬಿಜೆಪಿ ನಾಯಕಿ ಉಮಾಭಾರತಿ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದರು.

ಈ ಹಿಂದೆ ಟ್ವೀಟ್ ಮಾಡಿದ್ದ ಮೆಹಬೂಬಾ ಮುಫ್ತಿ, ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದು ಸರ್ಕಾರದ ಮತ್ತೊಂದು ಪೊಳ್ಳು ಘೋಷಣೆಯಾಗಿದೆ. ಮುಸ್ಲಿಮ್​ ಹೆಣ್ಣು ಮಕ್ಕಳು ತಮ್ಮ ಉಡುಗೆಯ ಕಾರಣದಿಂದ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ. ಮುಸ್ಲಿಮರ ಕಡೆಗಣಿಸುವುದನ್ನು ಕಾನೂನು ಬದ್ಧಗೊಳಿಸುವ ಮೂಲಕ ಗಾಂಧಿಯವರ ಭಾರತವನ್ನು, ಗೋಡ್ಸೆ ಭಾರತವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Karnataka Hijab Verdict: ಹಿಜಾಬ್ ವಿವಾದ ಹಿಂದೂ-ಮುಸ್ಲಿಮರ ಬಿಕ್ಕಟ್ಟಲ್ಲ, ಸಾಂವಿಧಾನಿಕ ಬಿಕ್ಕಟ್ಟು: ಶಫಿ ಸಅದಿ

Published On - 12:57 pm, Tue, 15 March 22