ಕರ್ನಾಟಕ ಹೈಕೋರ್ಟ್ ನೀಡಿದ ಹಿಜಾಬ್ ನಿಷೇಧ​ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರುವಂತೆ ಕರೆಕೊಟ್ಟ ಅಸಾದುದ್ದೀನ್​ ಓವೈಸಿ

ಹಿಜಾಬ್​ ಕುರಿತಾಗಿ ಕರ್ನಾಟಕ ಹೈಕೋರ್ಟ್​ ನೀಡಿರುವ ತೀರ್ಪನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದವರು, ಮುಂದೆ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸುತ್ತಾರೆ ಎಂಬ ಆಶಯ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಕರ್ನಾಟಕ ಹೈಕೋರ್ಟ್ ನೀಡಿದ ಹಿಜಾಬ್ ನಿಷೇಧ​ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರುವಂತೆ ಕರೆಕೊಟ್ಟ ಅಸಾದುದ್ದೀನ್​ ಓವೈಸಿ
ಅಸಾದುದ್ದೀನ್​ ಓವೈಸಿ
Follow us
TV9 Web
| Updated By: Lakshmi Hegde

Updated on:Mar 15, 2022 | 1:41 PM

ಕರ್ನಾಟಕದಲ್ಲಿ ಕಳೆದ ಒಂದೆರಡು ತಿಂಗಳಿಂದಲೂ ಚಾಲ್ತಿಯಲ್ಲಿದ್ದ ಹಿಜಾಬ್​ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ಅಂತಿಮ ತೀರ್ಪು ನೀಡಿದೆ. ಹಿಜಾಬ್ ಧರಿಸಬೇಕು ಎನ್ನುವುದು​ ಇಸ್ಲಾಂನ ಅತ್ಯಗತ್ಯ ಭಾಗವಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಹೋಗುವಂತಿಲ್ಲ. ಸರ್ಕಾರ ಕಡ್ಡಾಯ ಮಾಡಿರುವ ವಸ್ತ್ರ ಸಂಹಿತೆಯನ್ನೇ ಪಾಲನೆ ಮಾಡಬೇಕು ಎಂದು ಹೇಳಿದೆ. ಅದರ ಬೆನ್ನಲ್ಲೇ ಮುಸ್ಲಿಂ ಮುಖಂಡರು ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬರೀ ರಾಜ್ಯದವರಷ್ಟೇ ಅಲ್ಲ, ಬೇರೆ ರಾಜ್ಯಗಳ ಮುಸ್ಲಿಂ ಪ್ರಮುಖರೂ ಕೂಡ ಟ್ವೀಟ್​ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿ AIMIM ಮುಖ್ಯಸ್ಥ, ಹೈದರಾಬಾದ್ ಎಂಪಿ ಅಸಾದುದ್ದೀನ್ ಓವೈಸಿ ಕೂಡ ಒಬ್ಬರು.

ಎರಡು ವಿಚಾರಗಳನ್ನು ಟ್ವೀಟ್​ ಮಾಡಿರುವ ಓವೈಸಿ, ಹಿಜಾಬ್​ ಕುರಿತಾಗಿ ಕರ್ನಾಟಕ ಹೈಕೋರ್ಟ್​ ನೀಡಿರುವ ತೀರ್ಪನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದವರು, ಮುಂದೆ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸುತ್ತಾರೆ ಎಂಬ ಆಶಯ ಹೊಂದಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಮತ್ತು ಇತರ ಮುಸ್ಲಿಂ ಧಾರ್ಮಿಕ ಸಂಘಟನೆಗಳೂ ಕೂಡ ಹೈಕೋರ್ಟ್​ನ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಬೇಕು ಎಂದೂ ಕರೆ ಕೊಟ್ಟಿದ್ದಾರೆ. ಅಸಾದುದ್ದೀನ್ ಓವೈಸಿ ಕೂಡ ಈ ಮೊದಲೂ ಕರ್ನಾಟಕ ಹಿಜಾಬ್​ ವಿವಾದದ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ, ಮುಂದೊಂದು ದಿನ ಹಿಜಾಬ್ ಧರಿಸುವ ಹುಡುಗಿಯೇ ದೇಶದ ಪ್ರಧಾನಮಂತ್ರಿಯಾಗುತ್ತಾಳೆ ಎಂದೂ ಹೇಳಿದ್ದರು.

ಕರ್ನಾಟಕ ಹಿಜಾಬ್​ ವಿವಾದಕ್ಕೆ ಸಂಬಂಧಪಟ್ಟಂತೆ ಕೋರ್ಟ್​ ನೀಡಿರುವ ತೀರ್ಪಿಗೆ ಪ್ರತಿಕ್ರಿಯೆ ನೀಡಿದ ಸುನ್ನಿ ಧರ್ಮಗುರು ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಲಿ, ನಾವು ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಆದರೆ ಇಸ್ಲಾಂನಲ್ಲಿ ಹಿಜಾಬ್​ ಅತ್ಯಗತ್ಯ ಭಾಗವಲ್ಲ ಎಂದು ಹೇಳಿರುವ ಅಂಶವನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಇಸ್ಲಾಮಿಕ್​ ಸೆಮಿನರಿ ದಾರುಲ್​ ಊಲುಮ್​ ದೇವಬಂದ್​​ನ ವಕ್ತಾರ, ಮೌಲಾನಾ ಸೂಫಿಯಾನ್ ನಿಜಾಮಿ ಕೂಡ ಇದೇ ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ಹೈಕೋರ್ಟ್​ ಸ್ಪಷ್ಟ ತೀರ್ಪು ಹೊರತಾಗಿಯೂ ಪರೀಕ್ಷೆ ಬಹಿಷ್ಕರಿಸಿ ಕಾಲೇಜಿನಿಂದ ಹೊರನಡೆದ 35 ವಿದ್ಯಾರ್ಥಿನಿಯರು!

Published On - 1:41 pm, Tue, 15 March 22