ಅಸಂಭವನೀಯ ಲೈಂಗಿಕ ದೌರ್ಜನ್ಯದ ಅರೋಪಗಳಿಂದ ಇಖ್ಲಾಕ್ ಗೆ ನ್ಯಾಯಾಲಯದಿಂದ ಮುಕ್ತಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 25, 2022 | 1:34 AM

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಟ್ಟುನಿಟ್ಟಿನ ಕಾನೂನಿನಡಿಯಲ್ಲಿ ನ್ಯಾಯಾಲಯವು ಇಖ್ಲಾಕ್ ನನ್ನು ಆರೋಪ ಮುಕ್ತಗೊಳಿಸಿದೆ ಮತ್ತು ಪ್ರಾಸಿಕ್ಯೂಟರ್ ನಡೆಸಿದ ವಾದಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಅಸಂಭವನೀಯ ಲೈಂಗಿಕ ದೌರ್ಜನ್ಯದ ಅರೋಪಗಳಿಂದ ಇಖ್ಲಾಕ್ ಗೆ ನ್ಯಾಯಾಲಯದಿಂದ ಮುಕ್ತಿ
ಇಖ್ಲಾಕ್ ಸಲ್ಮಾನಿ
Follow us on

ಚಂಡೀಗಡ್: ಬಾಲಕನೊಬ್ಬನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ (sexual assault) ನಡೆಸಿದ ಅರೋಪ ಎದುರಿಸುತ್ತಿದ್ದ ಮತ್ತು ಹರಿಯಾಣನಲ್ಲಿ ಧಾರ್ಮಿಕ ದ್ವೇಷವೊಂದರ (religious hatred) ಪ್ರಕರಣದಲ್ಲಿ ಬಲಗೈ ಕತ್ತರಿಸಲ್ಪಟ್ಟ ಉತ್ತರ ಪ್ರದೇಶದ (Uttar Pradesh) 29-ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಇಖ್ಲಾಕ್ ಸಲ್ಮಾನಿಯ ಸಂಬಂಧಿಕರು ಹೇಳುವ ಪ್ರಕಾರ ಹರಿಯಾಣದ ಪಾನಿಪಟ್ ನಲ್ಲಿ ಅವನ ಕೈಮೇಲೆ ‘786’ ಟ್ಯಾಟೂ ಇದ್ದಿದನ್ನು ಗಮನಿಸಿದ ದುಷ್ಕರ್ಮಿಗಳು ಕೈಯನ್ನೇ ಕತ್ತರಿಸಿದರು.

ಸೆಪ್ಟೆಂಬರ್ 2020 ರಲ್ಲಿ ಅವನು ನೌಕರಿ ಅರಸಿಕೊಂಡು ಪಾನಿಪಟ್ ಗೆ ಹೋಗಿದ್ದ. ಅವನು ದೂರು ನೀಡಿದ ನಂತರ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರು.

ಆದರೆ, ಅದೇ ದಿನ ಅವನ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಇಖ್ಲಾಕ್ ವಿರುದ್ಧ ಒಬ್ಬ ಬಾಲಕನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ದೂರು ದಾಖಲಿಸಿದ್ದರು.

ದೂರು ದಾಖಲಿಸಿದ ಅರೋಪಿಗಳು ಸಂತ್ರಸ್ತ ತಮ್ಮ ಕುಟುಂಬಕ್ಕೆ ಸೇರಿದವನಾಗಿದ್ದಾನೆ ಎಂದು ಹೇಳಿದ್ದರಲ್ಲದೆ, ಇಖ್ಲಾಕ್ ಅಪರಾಧವೆಸಗಿ ತಪ್ಪಿಸಿಕೊಂಡು ಓಡುವಾಗ ರೇಲ್ವೇ ಹಳಿಗಳ ಮೇಲೆ ಬಿದ್ದಿದ್ದರಿಂದ ಅವನ ಕೈ ಕಟ್ ಆಯಿತು ಅಂತ ಹೇಳಿದ್ದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಟ್ಟುನಿಟ್ಟಿನ ಕಾನೂನಿನಡಿಯಲ್ಲಿ ನ್ಯಾಯಾಲಯವು ಇಖ್ಲಾಕ್ ನನ್ನು ಆರೋಪ ಮುಕ್ತಗೊಳಿಸಿದೆ ಮತ್ತು ಪ್ರಾಸಿಕ್ಯೂಟರ್ ನಡೆಸಿದ ವಾದಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಲೈಂಗಿಕ ದೌರ್ಜನ್ಯದ ಆರೋಪಗಳು ‘ಯಾವುದೇ ವೈದ್ಯಕೀಯ ಪುರಾವೆಗಳಿಂದ ದೃಢೀಕರಿಸಲ್ಪಟ್ಟಿಲ್ಲ, ಇದು ಸಂತ್ರಸ್ತ ನೀಡಿದ ಹೇಳಿಕೆಗಳಿಗೆ ವಿರುದ್ಧವಾಗಿದೆ,’ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

‘ನ್ಯಾಯಾಲಯವು ಸಂತ್ರಸ್ತ, ಅವನ ತಂದೆ ಮತ್ತು ಚಿಕ್ಕಪ್ಪ (ದೂರುದಾರರು) ನೀಡಿದ ಸಾಕ್ಷ್ಯಗಳಲ್ಲಿ ವ್ಯಕ್ತವಾದ ಅಸ್ಥಿರತೆ, ವಿರೋಧಾಭಾಸಗಳು ಮತ್ತು ಅಸಂಭಾವ್ಯತೆಗಳ ಹಿನ್ನೆಲೆಯಲ್ಲಿ ಕಪೋಕಲ್ಪಿತ ಆರೋಪಗಳನ್ನು ತಳ್ಳಿಹಾಕಲಾಗಿದೆ ಎಂಬ ನಿಲುವು ತಳೆದಿದೆ. ಇದರ ಪರಿಣಾಮವಾಗಿ, ಸಂತ್ರಸ್ತನ ಸಾಕ್ಷ್ಯ, ಅವನ ತಂದೆ ಮತ್ತು ಚಿಕ್ಕಪ್ಪ ನೀಡಿದ ಸಾಕ್ಷ್ಯಗಳು ಅರೋಪವನ್ನು ಸಾಬೀತು ಮಾಡಲು ಸಾಕಾಗುವುದಿಲ್ಲ ಮತ್ತು ಇವುಗಳ ಅಧಾರದಲ್ಲಿ ಆರೋಪಿಗೆ ಶಿಕ್ಷೆ ವಿಧಿಸುವುದು ಸಾಧ್ಯವಿಲ್ಲ,’ ಎಂದು ಹೇಳಿದೆ.

ಅಷ್ಟು ಮಾತ್ರವಲ್ಲದೆ ನ್ಯಾಯಾಲಯವು ಆರೋಪಿತ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ಸಲ್ಲಿಸಲು ವಿಳಂಬ ಮಾಡಿದ್ದನ್ನು ಸಹ ಪ್ರಶ್ನಿಸಿತು. ನ್ಯಾಯಾಲಯದ ಈ ಪ್ರಶ್ನೆಗೆ ದೂರುದಾರರು ನಾವು ಆರೋಪಿಯ ಹುಡುಕಾಟದಲ್ಲಿದ್ದೆವು ಅಂತ ಹೇಳಿದರು. ನ್ಯಾಯಾಲಯ ಅವರು ವಾದವನ್ನು ತಿರಸ್ಕರಿಸಿತು.

ಸ್ಥಳದಿಂದ ಓಡಿಹೋಗುವ ಮೊದಲು ಅರೋಪಿ ತನ್ನ ಹೆಸರು ಮತ್ತು ವಿಳಾಸ ತಿಳಿಸಿದ್ದ ಎಂದು ಖುದ್ದು ದೂರುದಾರ ತನ್ನ ದೂರಿನಲ್ಲಿ ಹೇಳಿದ್ದಾನೆ. ಅವರು ಕೂಡಲೇ ಪೊಲೀಸ್ ಠಾಣೆಯಲ್ಲಿ ಯಾಕೆ ದೂರು ದಾಖಲಿಸಲಿಲ್ಲ? ತಾವೇ ಖುದ್ದಾಗಿ ಅರೋಪಿಯನ್ನು ಹುಡುಕುವ ಅಗತ್ಯವೇನಿತ್ತು, ಎಂದು ನ್ಯಾಯಾಲಯ ಪ್ರಶ್ನಿಸಿತು.

‘ಪ್ರಾಸಿಕ್ಯೂಷನ್ ಕಟ್ಟಿರುವ ಕತೆಯ ಮೇಲೆ ಅನುಮಾನ ಹುಟ್ಟುತ್ತದೆ, ಯಾಕೆಂದರೆ ವಿಳಂಬ ಯಾಕಾಯಿತು ಅನ್ನೋದಿಕ್ಕೆ ನೀಡಿರುವ ಉತ್ತರ ತೃಪ್ತಿದಾಯಕವಾಗಿಲ್ಲ. ಅಸಲಿಗೆ, ಪ್ರಾಸಿಕ್ಯೂಷನ್‌ನ ಸಂಪೂರ್ಣ ವಾದಮಂಡನೆ ಅಸಂಭವನೀಯವಾಗಿದೆ ಮತ್ತು ಅದು ಅನೇಕ ಅಂಶಗಳನ್ನು ದೃಢೀಕರಿಸದೆ ಮತ್ತು ವಿವರಿಸಲಾಗದೆ ಉಳಿಸಿ ಬಿಡುತ್ತದೆ’ ಎಂದು ನ್ಯಾಯಾಲಯ ಹೇಳಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.