ಕೊವ್ಯಾಕ್ಸಿನ್ ವಯಸ್ಕರಿಗಿಂತಲೂ ಮಕ್ಕಳ ದೇಹದಲ್ಲಿಯೇ ಉತ್ತಮ ಇಮ್ಯೂನಿಟಿ ವೃದ್ಧಿಸಬಲ್ಲದು: ಎನ್.ಕೆ.ಅರೋರಾ
ಜನವರಿ 3ರಿಂದ ದೇಶದಲ್ಲೆಡೆ 15-18ವರ್ಷದವರಿಗೆ ಕೊರೊನಾ ಲಸಿಕೆ ಹಾಕುವ ಘೋಷಣೆಯನ್ನು ಪ್ರಧಾನಿ ಮೋದಿಯವರು ಮಾಡಿದ ಬೆನ್ನಲ್ಲೇ, ಈ ವಯಸ್ಸಿನವರಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅವಕಾಶ ಕೊಟ್ಟಿದೆ.
ಕೊವ್ಯಾಕ್ಸಿನ್ ಲಸಿಕೆ (Covaxin Covid 19 Vaccine) ಮಕ್ಕಳ ದೇಹದಲ್ಲಿ ಉತ್ತಮ ರೋಗ ನಿರೋಧಕ ಪ್ರತಿಕ್ರಿಯೆಗೆ ಕಾರಣವಾಗಬಲ್ಲದು ಎಂಬುದು ಪ್ರಯೋಗದಿಂದ ಗೊತ್ತಾಗಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಪ್ರತಿರಕ್ಷಣೆ ಸಂಬಂಧ)ಯ ಕೊವಿಡ್ 19 ಕಾರ್ಯಾಕಾರಿ ಗುಂಪಿನ ಅಧ್ಯಕ್ಷ ಡಾ. ಎನ್.ಕೆ.ಅರೋರಾ ತಿಳಿಸಿದ್ದಾರೆ. ಜ.3ರಿಂದ ದೇಶದಲ್ಲಿ 15-18ವರ್ಷದವರೆಗಿನವರಿಗೆ ಕೊರೊನಾ ಲಸಿಕೆ (Corona Vaccine) ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಎನ್.ಕೆ.ಅರೋರಾ, ಈ ನಿರ್ಧಾರದಿಂದ ಏನೆಲ್ಲ ಪ್ರಯೋಜನವಾಗಲಿದೆ ಎಂಬುದನ್ನು ತಿಳಿಸಿದರು.
ವಾಸ್ತವದಲ್ಲಿ ಹೇಳಬೇಕೆಂದರೆ, 15-18ವರ್ಷದವರೂ ಕೂಡ 18ವರ್ಷ ಮೇಲ್ಪಟ್ಟ ವಯಸ್ಕರಂತೆಯೇ ಆಗಿರುತ್ತಾರೆ. ದೇಶದಲ್ಲಿ ಕೊವಿಡ್ 19ನಿಂದ ಮೃತಪಟ್ಟ ಒಟ್ಟಾರೆ 18 ವರ್ಷದ ಒಳಗಿನವರಲ್ಲಿ ಮೂರನೇ ಎರಡರಷ್ಟು ಮಂದಿ 15ವರ್ಷ ಮೇಲ್ಪಟ್ಟವರೇ ಆಗಿದ್ದಾರೆ ಎಂಬುದನ್ನು ನಮ್ಮ ಸಂಶೋಧನೆ ಹೇಳುತ್ತದೆ. ಹಾಗಾಗಿ ಹದಿಹರೆಯದವರನ್ನು ಕೊವಿಡ್ 19 ಸೋಂಕಿನಿಂದ ರಕ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರೋರಾ ಮಾಹಿತಿ ನೀಡಿದ್ದಾರೆ. ಹಾಗೇ, ಈ ಹದಿಹರೆಯದವರಿಗೆ ಲಸಿಕೆ ಕೊಟ್ಟು ಅವರಲ್ಲಿ ಪ್ರತಿರೋಧ ಹೆಚ್ಚಿಸುವುದರಿಂದ ಎರಡು ಅನುಕೂಲಗಳಿವೆ. ಈ ವಯಸ್ಸಿನವರು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಶಾಲೆ, ಕಾಲೇಜು ಎಂದುಕೊಂಡು ಓಡಾಡುತ್ತಿರುತ್ತಾರೆ. ಹೀಗಾಗಿ ಕೊರೊನಾ ಸೋಂಕು ತಗುಲುವ ಅಪಾಯ ಜಾಸ್ತಿ ಇರುತ್ತದೆ. ಅದರಲ್ಲೂ ಈಗ ಒಮಿಕ್ರಾನ್ ವೈರಾಣು ಹರಡುತ್ತಿರುವುದರಿಂದ ಲಸಿಕೆ ಕೊಡುವುದು ತುಂಬ ಉಪಯೋಗ. ಹಾಗೇ, ಎರಡನೇಯದಾಗಿ 15-18ನೇ ವಯಸ್ಸಿನವರು ಶಾಲೆ-ಕಾಲೇಜು, ಟ್ಯೂಷನ್ ಮತ್ತಿತರ ಕಾರಣಕ್ಕೆ ಹೊರಗೆ ಹೋಗಿ, ಸೋಂಕು ತಗುಲಿಸಿಕೊಂಡು ಮನೆಗೆ ಬಂದರೆ, ಮನೆಯಲ್ಲಿ ಇದ್ದ ಹಿರಿಯರಿಗೂ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಇವರಿಗೇ ಲಸಿಕೆ ಹಾಕಿದರೆ ಅಪಾಯ ತಪ್ಪಿಸಬಹುದು. ಸೋಂಕಿನ ತೀವ್ರತೆ ಕಡಿಮೆ ಮಾಡಬಹುದು ಎಂದು ಅರೋರಾ ವಿಶ್ಲೇಷಿಸಿದ್ದಾರೆ.
ಜನವರಿ 3ರಿಂದ ದೇಶದಲ್ಲೆಡೆ 15-18ವರ್ಷದವರಿಗೆ ಕೊರೊನಾ ಲಸಿಕೆ ಹಾಕುವ ಘೋಷಣೆಯನ್ನು ಪ್ರಧಾನಿ ಮೋದಿಯವರು ಮಾಡಿದ ಬೆನ್ನಲ್ಲೇ, ಈ ವಯಸ್ಸಿನವರಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅವಕಾಶ ಕೊಟ್ಟಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು 12-18ವರ್ಷದವರಿಗೆ ಹಾಕಬಹುದು ಎಂದು ಡಿಸಿಜಿಐ ತಿಳಿಸಿದ್ದರೂ, ಸದ್ಯದ ಮಟ್ಟಿಗೆ 15-18ವರ್ಷದವರಿಗೆ ನೀಡಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರೋರಾ, ಮಕ್ಕಳಿಗೆ ಕೊಡಬಹುದಾದ ಕೊವಿಡ್ 19 ಲಸಿಕೆ ನಮ್ಮ ಬಳಿಯೇ ಇದೆ ಎಂಬುದು ನಿಜಕ್ಕೂ ನೆಮ್ಮದಿಯ ವಿಚಾರ. ಅದರಲ್ಲೂ ಕೊವ್ಯಾಕ್ಸಿನ್ ಮಕ್ಕಳ ಮೇಲಿನ ಪ್ರಯೋಗದ ವೇಳೆ ತುಂಬ ಸಕಾರಾತ್ಮಕ ಫಲಿತಾಂಶ ನೀಡಿದೆ. 18 ವರ್ಷ ಮೇಲ್ಪಟ್ಟವರಿಗಿಂತಲೂ ಮಕ್ಕಳ ದೇಹದಲ್ಲಿ ಇದು ಉಂಟು ಮಾಡುವ ಪ್ರತಿರೋಧ ಶಕ್ತಿ ಹೆಚ್ಚು. ಅದಕ್ಕೂ ಮಿಗಿಲಾಗಿ ಕೊವ್ಯಾಕ್ಸಿನ್ ತುಂಬ ಸುರಕ್ಷಿತವಾದ ಲಸಿಕೆ. ಇದರಿಂದ ನಮ್ಮ ಹದಿಹರೆಯದವರ ರಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.