ಹೋಂ ಐಸೊಲೇಶನ್ನಲ್ಲಿರುವ ದೆಹಲಿಯ ಕೋವಿಡ್-19 ರೋಗಿಗಳು ಆನ್ಲೈನ್ನಲ್ಲಿ ಆಕ್ಸಿಜನ್ಗೆ ಅಪ್ಲೈ ಮಾಡಬಹುದು
ದೆಹಲಿ ಸರ್ಕಾರವು ಮನೆಗಳಲ್ಲಿ ಪ್ರತ್ಯೇಕವಾಸದಲ್ಲಿರುವ (ಐಸೊಲೇಟ್) ರೋಗಿಗಳು ಸಹ ಆಕ್ಸಿಜನ್ ಸಿಲಿಂಡರ್ಗಳಿಗೆ ದೆಹಲಿ ಸರ್ಕಾರದ ವೆಬ್ಸೈಟ್ ಮೂಲಕ ಅಪ್ಲೈ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.
ದೆಹಲಿ: ಕೋವಿಡ್-19 ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಮನೆಗಳಲ್ಲಿ ಪ್ರತ್ಯೇಕವಾಸದಲ್ಲಿರುವ (ಐಸೊಲೇಟ್) ರೋಗಿಗಳು ಸಹ ಆಕ್ಸಿಜನ್ ಸಿಲಿಂಡರ್ಗಳಿಗೆ ದೆಹಲಿ ಸರ್ಕಾರದ ವೆಬ್ಸೈಟ್ ಮೂಲಕ ಅಪ್ಲೈ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಆಕ್ಸಿಜನ್ ಸಿಲಿಂಡರ್ಗೆ ಬೇಡಿಕೆ ಸಲ್ಲಿಸುವ ರೋಗಿಗಳು ಫೋಟೊ ಐಡಿ, ಆಧಾರ್ ಕಾರ್ಡ್ ಮತ್ತು ಇತರ ವಿವರಗಳ ಜೊತೆಗೆ ಕೋವಿಡ್-19 ಪಾಸಿಟಿವ್ ವರದಿಯನ್ನು ಅಪ್ಲೋಡ್ ಮಾಡಬೇಕು.
ದಾಸ್ತಾನು ಮತ್ತು ಲಭ್ಯತೆಗೆ ಅನುಗುಣವಾಗಿ ಜಿಲ್ಲಾಧಿಕಾರಿ ಕಚೇರಿಯು ದಿನಾಂಕ, ಸಮಯ ಮತ್ತು ಆಕ್ಸಿಜನ್ ಡೀಲರ್ ವಿಳಾಸವಿರುವ ಪಾಸ್ ನೀಡುತ್ತದೆ. ‘ಪ್ರತಿ ಜಿಲ್ಲೆಯಲ್ಲಿಯೂ ಆಕ್ಸಿಜನ್ ಸಿಲಿಂಡರ್ಗಳನ್ನು ಭರ್ತಿ ಮಾಡಿಕೊಡುವ ಕೇಂದ್ರವನ್ನು ಸ್ಥಾಪಿಸಲಾಗುವುದು. ರಿಫಿಲ್ಲರ್ಗಳಿಂದ ಅಗತ್ಯವಿರುವವರ ಮನೆಗಳಿಗೆ ಸಿಲಿಂಡರ್ ಸರಬರಾಜು ಆಗುವ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳು ನಿಗಾವಣೆ ಮಾಡುತ್ತಾರೆ’ ಎಂದು ಕೋವಿಡ್ ದತ್ತಾಂಶ ನಿರ್ವಹಣಾ ಘಟಕದ ವಿಭಾಗೀಯ ಆಯುಕ್ತರ ಹೇಳಿಕೆ ತಿಳಿಸಿದೆ.
ಈ ಪ್ರಕ್ರಿಯೆಯನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳು ಅಗತ್ಯ ಪ್ರಮಾಣದ ಕಚೇರಿ ಸಿಬ್ಬಂದಿಯನ್ನು ಒದಗಿಸಬೇಕು. ಎಲ್ಲ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಇ-ಪಾಸ್ಗಳನ್ನು ನೀಡಬೇಕು. ಇದನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕು. ನಿರ್ದಿಷ್ಟ ಮರುಭರ್ತಿ ಕೇಂದ್ರಗಳಲ್ಲಿ ಡೀಲರ್ಗಳು ಸಿಲಿಂಡರ್ಗಳನ್ನು ಭರ್ತಿ ಮಾಡಿಕೊಳ್ಳಬೇಕು. ಈ ಅಂಶವನ್ನು ಜಿಲ್ಲಾಧಿಕಾರಿಗಳು ಖಾತ್ರಿಪಡಿಸಬೇಕು ಎಂದು ಆಯುಕ್ತರ ಆದೇಶವು ತಿಳಿಸಿದೆ
ಹೋಂ ಐಸೊಲೇಶನ್ನಲ್ಲಿರುವ ಕೋವಿಡ್-19 ರೋಗಿಗಳಿಗೆ ಸೋಂಕು ದೃಢಪಟ್ಟ 24 ಗಂಟೆಗಳ ಒಳಗೆ ವೈದ್ಯರ ಜೊತೆಗೆ ಸಮಾಲೋಚನೆ ಸಿಗಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಪಿಎಂ-ಕೇರ್ಸ್ ಅನುದಾನದಲ್ಲಿ ದೆಹಲಿಯ ಏಮ್ಸ್ ಮತ್ತು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗಳಲ್ಲಿ ಎರಡು ವೈದ್ಯಕೀಯ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ಬುಧವಾರ ಹೇಳಿತ್ತು. ತಮಿಳುನಾಡಿನ ಕೊಯಮತ್ತೂರಿನಿಂದ ಏರ್ಲಿಫ್ಟ್ ಮಾಡಲಾದ ಘಟಕಗಳನ್ನು ದೆಹಲಿಯಲ್ಲಿ ಸ್ಥಾಪಿಸುವ ಕಾರ್ಯ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ದೆಹಲಿಯಲ್ಲಿ ಬುಧವಾರ ಒಂದೇ ದಿನ 19,953 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, 338 ಮಂದಿ ಮೃತಪಟ್ಟಿದ್ದಾರೆ. 18,788 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
(Covid-19 Patients in Home Isolation Can Apply for Oxygen Cylinders Through Web Portal)