ಇಂಗ್ಲೆಂಡ್ನಲ್ಲಿ ಕೊರೊನಾ ವೈರಸ್ ಸೋಂಕು ನಿರೋಧಕ ಲಸಿಕೆ ನೀಡುವ ಅಭಿಯಾನಕ್ಕೆ ನಾಳೆಯಿಂದ (ಡಿ.8) ಚಾಲನೆ ಸಿಗಲಿದೆ. ಫೈಝರ್ ಬಯೋಎನ್‌ಟೆಕ್ ಕಂಪನಿ ಸಿದ್ಧಪಡಿಸಿರುವ ಲಸಿಕೆಯನ್ನು ಇಂಗ್ಲೆಂಡ್ನಲ್ಲಿ ಜನರ ಬಳಕೆಗೆ ನೀಡಲು ಸರ್ಕಾರ ಅನುಮತಿ ನೀಡಿದೆ. ನ್ಯಾಷನಲ್ ಹೆಲ್ತ್ ಸರ್ವೀಸ್ನ 60 ಆಸ್ಪತ್ರೆಗಳಲ್ಲಿ ಲಸಿಕೆ ನೀಡಿಕೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಇಂಗ್ಲೆಂಡ್‌ನ ರಾಣಿ 2ನೇ ಎಲಿಜೆಬೆತ್ ಹಾಗೂ ಪತಿ ಪ್ರಿನ್ಸ್ ಫಿಲಿಪ್ಗೆ ಮೊದಲು ಲಸಿಕೆ ನೀಡುವ ಮೂಲಕ ಜನರಲ್ಲಿ ಲಸಿಕೆಯ ಬಗ್ಗೆ ಭರವಸೆ, ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂಗ್ಲೆಂಡ್ನಲ್ಲಿ ನಾಳೆಯಿಂದ ಲಸಿಕೆ ನೀಡಿಕೆ ಆರಂಭವಾಗುವುದರಿಂದ ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ನಾಳೆ ಮಹತ್ವದ ದಿನ ಎಂದು ಪರಿಗಣಿಸಲಾಗುತ್ತದೆ.
ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೋರಿಕೆ
ಭಾರತದಲ್ಲೂ ಈಗಾಗಲೇ ಎರಡು ಲಸಿಕೆ ತಯಾರಕ ಕಂಪನಿಗಳು ಕೊರೊನಾ ವೈರಸ್ ನಿರೋಧಕ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿವೆ. ಡಿ.4ರಂದು ಆಮೆರಿಕದ ಫೈಝರ್ ಕಂಪನಿಯು ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಅರ್ಜಿ ಸಲ್ಲಿಸಿದೆ.
ಆಕ್ಸ್ಫರ್ಡ್ ವಿವಿ-ಅಸ್ಟ್ರಾಜೆನೆಕ ಕಂಪನಿ ಸಿದ್ಧಪಡಿಸಿರುವ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಮುಂದಾಗಿರುವ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕೂಡ ತನ್ನ ಕೋವಿಶೀಲ್ಡ್ ಲಸಿಕೆಯನ್ನು ಜನರ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ಕೋರಿ ನಿನ್ನೆ (ಡಿ.6) ಅರ್ಜಿ ಸಲ್ಲಿಸಿದೆ.
ಫೈಝರ್ ಕಂಪನಿಯ ಲಸಿಕೆಗೆ ಅನುಮತಿ ನೀಡಲು ಶಿಫಾರಸ್ಸು ಮಾಡುವ ವಿಷಯತಜ್ಞರ ಸಮಿತಿಯ ಸಭೆಯು ಇದೇ ವಾರ ನಡೆಯಲಿದೆ. ಈ ವಿಷಯತಜ್ಞರ ಸಮಿತಿಯು ಲಸಿಕೆಯ ಸುರಕ್ಷತೆ ಮತ್ತು ಅದರ ಕಾರ್ಯಕ್ಷಮತೆಯ ಬಗ್ಗೆ ಪರಿಶೀಲನೆ ನಡೆಸಲಿದೆ. ಬಳಿಕ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ವಿ.ಜಿ. ಸೋಮಾನಿ ಅಧ್ಯಕ್ಷತೆಯ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ತೀರ್ಮಾನ ಕೈಗೊಳ್ಳಲಿದೆ.
ಫೈಝರ್ ಕಂಪನಿಯ ಲಸಿಕೆಯನ್ನು ಭಾರತದಲ್ಲಿ ಜನರ ಮೇಲೆ ಪ್ರಯೋಗಿಸಿಲ್ಲ. ಆದರೂ ಲಸಿಕೆಯನ್ನು ಜನರ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಫೈಝರ್ ಕಂಪನಿಯ ಲಸಿಕೆಯನ್ನು ಮೈನಸ್ 70 ರಿಂದ 80 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂಗ್ರಹಿಸಿಡಬೇಕು. ಇದು ಭಾರತದ ಪಾಲಿಗೆ ದೊಡ್ಡ ಸವಾಲು. ಫೈಝರ್ ಕಂಪನಿಯ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಶೇ 95ರಷ್ಟು ಪರಿಣಾಮಕಾರಿ ಎಂದು ಕಂಪನಿ ಹೇಳಿದೆ. 21 ದಿನಗಳ ಅಂತರದಲ್ಲಿ ಈ ಲಸಿಕೆಯನ್ನು ಎರಡು ಡೋಸ್ ನೀಡಬೇಕು.
ಇನ್ನೆರೆಡು ಲಸಿಕೆಯ ನಿರೀಕ್ಷೆ
ಕೇಂದ್ರ ಸರ್ಕಾರವು ಜನವರಿ ವೇಳೆಗೆ ಭಾರತದಲ್ಲಿ ಇನ್ನೂ ಎರಡು ಲಸಿಕೆಗಳು ಜನರ ಬಳಕೆಗೆ ಸಿಗುವ ನಿರೀಕ್ಷೆ ಇಟ್ಟುಕೊಂಡಿದೆ. ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆ ಹಾಗೂ ಹೈದರಾಬಾದ್ನ ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಯು ಜನವರಿಯಲ್ಲಿ ಜನರ ಬಳಕೆಗೆ ಸಿಗಬಹುದು ಎನ್ನುವುದು ಕೇಂದ್ರ ಸರ್ಕಾರದ ನಿರೀಕ್ಷೆ.
ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಇನ್ನೂ ನಾಲ್ಕು ಕಂಪನಿಯ ಲಸಿಕೆಗಳು ಜನರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಹೀಗಾಗಿ ದೇಶದಲ್ಲಿ ಜುಲೈ ವೇಳೆಗೆ 30 ಕೋಟಿ ಜನರಿಗೆ ಲಸಿಕೆ ನೀಡಿಕೆಗೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಬೇರೆಬೇರೆ ರೋಗದಿಂದ ಬಳಲುತ್ತಿರುವವರು ತಾವಾಗಿಯೇ ರಿಜಿಸ್ಟರ್ ಮಾಡಿಸಿ ಲಸಿಕೆ ಪಡೆಯಲು ಕೂಡ ಅವಕಾಶ ನೀಡುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಕೋವಿನ್ ಆ್ಯಪ್ಗೆ ರಿಜಿಸ್ಟರ್ ಮಾಡಿಸಿ ಜನರು ಲಸಿಕೆ ಪಡೆಯಲು ಅವಕಾಶ ನೀಡುವ ಸಾಧ್ಯತೆ ಇದೆ.
– ಚಂದ್ರಮೋಹನ್
ಕೊರೊನಾ ಲಸಿಕೆ ತಯಾರಿಯಲ್ಲಿ ತೊಡಗಿರುವ ಅದಾರ್ ಪೂನಾವಾಲಾ.. ಏಷಿಯನ್ ಆಫ್ ದಿ ಇಯರ್
Published On - 9:16 pm, Mon, 7 December 20