ನವದೆಹಲಿ: ಕೋವಿಡ್-19 (Covid-19) ವಿರುದ್ಧ ಈಗಾಗಲೇ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆದವರು ಮೂಗಿನ ಮೂಲಕ ಹಾಕುವ ಲಸಿಕೆ (Nasal Vaccine)ತೆಗೆದುಕೊಳ್ಳಬಾರದು ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ. ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಲಸಿಕೆಯನ್ನು ಕಳೆದ ವಾರ ಬಿಡುಗಡೆ ಮಾಡಲಾಗಿದ್ದು, ಕೋವಿನ್ (CoWIN) ತಾಣದಲ್ಲಿ ಲಭ್ಯವಿದೆ. ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಮೊದಲ ಬೂಸ್ಟರ್ ಡೋಸ್ ಆಗಿ ಶಿಫಾರಸು ಮಾಡಲಾಗಿದೆ. ಉದಾಹರಣೆಗೆ; ಒಬ್ಬ ವ್ಯಕ್ತಿ ಈಗಾಗಲೇ ಬೂಸ್ಟರ್ ಡೋಸ್ ಪಡೆದಿದ್ದಲ್ಲಿ ಅವರು ಮೂಗಿನ ಮೂಲಕ ಹಾಕುವ ಲಸಿಕೆ ಪಡೆಯಬಾರದು ಎಂದು ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಡಾ. ಎನ್.ಕೆ. ಅರೋರ ‘ಎನ್ಡಿ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇವರು ರಾಷ್ಟ್ರೀಯ ಲಸಿಕಾಕರಣದ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.
‘ಲಸಿಕಾಕರಣದ ಭಾಗವಾಗಿ ಕೋವಿನ್ ಪೋರ್ಟಲ್ನಲ್ಲಿ ನಾಲ್ಕನೇ ಡೋಸ್ ಆಗಿ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಆಯ್ದುಕೊಳ್ಳಲು ಅವಕಾಶವಿಲ್ಲ. ಮತ್ತೊಂದು ಡೋಸ್ ಲಸಿಕೆ ಪಡೆಯುವುದರಿಂದ ದೇಹವು ಅದಕ್ಕೆ ಪೂರಕವಾಗಿ ಸ್ಪಂದಿಸುವುದಿಲ್ಲ. ಲಸಿಕೆಯ ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ. ಹೀಗಾಗಬಾರದು ಎಂಬ ಕಾರಣಕ್ಕೆ ಆರಂಭದಲ್ಲಿ ಎಂಆರ್ಎನ್ಎ ಲಸಿಕೆಯನ್ನು ಆರು ತಿಂಗಳ ಅವಧಿಯ ನಂತರ ನೀಡಲಾಗುತ್ತದೆ. ಆದರೂ ಅದು ನಿರೀಕ್ಷೆಗಿಂತಲೂ ಹೆಚ್ಚಿನ ಪರಿಣಾಮ ಬೀರಿಲ್ಲ. ಹೀಗಾಗಿ ಸದ್ಯಕ್ಕೆ ನಾಲ್ಕನೇ ಡೋಸ್ ಲಸಿಕೆ ಪಡೆಯುವ ಅಗತ್ಯವಿಲ್ಲ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ ಪರಿಣಾಮಕಾರಿ ಎಂದು ಅರೋರ ತಿಳಿಸಿದ್ದಾರೆ. ಈ ಲಸಿಕೆಯು ನೇರವಾಗಿ ಉಸಿರಾಟ ವ್ಯವಸ್ಥೆಯ ಪ್ರವೇಶ ಬಿಂದುವನ್ನೇ ತಲುಪಿರುತ್ತದೆ. ಮೂಗು ಮತ್ತು ಬಾಯಿಯಲ್ಲಿ ನಿರೋಧಕ ಶಕ್ತಿ ಉಂಟಾಗುವುದರಿಂದ ವೈರಸ್ ಸುಲಭವಾಗಿ ದೇಹ ಪ್ರವೇಶಿಸಲಾಗದು. ಈ ಲಸಿಕೆಯು ಕೋವಿಡ್ ವಿರುದ್ಧ ಮಾತ್ರ ಹೋರಾಡುವುದಿಲ್ಲ. ಉಸಿರಾಟ ವ್ಯವಸ್ಥೆ ಮೇಲೆ ದಾಳಿ ನಡೆಸುವ ಇತರ ವೈರಸ್ಗಳಿಂದಲೂ ರಕ್ಷಣೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: Nasal Vaccine Price: ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆಗೆ ಬೆಲೆ ನಿಗದಿ: ಸರ್ಕಾರಿ, ಖಾಸಗಿ ಆಸ್ಪತ್ರೆ ದರ ವಿವರ
18 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಮೂಗಿನ ಮೂಲಕ ಹಾಕುವ ಲಸಿಕೆ ತೆಗೆದುಕೊಳ್ಳಬಹುದು. ಈ ಲಸಿಕೆ ನೀಡುವ ವಿಧಾನ ಬಹಳ ಸುಲಭವಾಗಿದೆ. ಮೂಗಿನ ಎರಡೂ ಹೊಳ್ಳೆಗಳಿಗೆ ತಲಾ ನಾಲ್ಕು ಬಿಂದು ಲಸಿಕೆ ಹಾಕಲಾಗುತ್ತದೆ. ಒಟ್ಟು 0.5 ಎಂ.ಎಲ್. ಲಸಿಕೆ ನೀಡಲಾಗುತ್ತದೆ. ಈ ಲಸಿಕೆಯಿಂದ ಕಡಿಮೆ ಅಡ್ಡ ಪರಿಣಾಮ ಇದೆ. ಸ್ವಲ್ಪ ಹೊತ್ತಿನ ಮಟ್ಟಿಗೆ ಮೂಗು ಬ್ಲಾಕ್ ಆಗಬಹುದು ಅಷ್ಟೆ. ಉಳಿದಂತೆ, ದತ್ತಾಂಶಗಳಿಂದ ತಿಳಿದುಬಂದಿರುವ ಪ್ರಕಾರ ಲಸಿಕೆ ಅತಿ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಲಸಿಕೆ ಹಾಕಿಸಿಕೊಂಡ ಬಳಿಕ ಇತರ ಲಸಿಕೆ ಹಾಕಿಸಿಕೊಂಡವರಂತೆಯೇ 15ರಿಂದ 30 ನಿಮಿಷ ಕೇಂದ್ರದಲ್ಲಿ ಉಳಿಯಬೇಕಾಗುತ್ತದೆ. ಏನಾದರೂ ತೀವ್ರತರದ ಅಡ್ಡಪರಿಣಾಮ ಕಂಡುಬಂದಲ್ಲಿ ತಕ್ಷಣ ಕಾಳಜಿ ವಹಿಸಬೇಕು. ಆದರೆ ಇಂಥ ಅಡ್ಡಪರಿಣಾಮ ಈವರೆಗೆ ಕಂಡುಬಂದಿಲ್ಲ ಎಂದು ಅರೋರ ತಿಳಿಸಿದ್ದಾರೆ.
ಮೂಗಿನ ಮೂಲಕ ನೀಡುವ ಲಸಿಕೆಗೆ ಭಾರತ್ ಬಯೋಟೆಕ್ ಕಂಪನಿ ಮಂಗಳವಾರವಷ್ಟೇ ದರ ನಿಗದಿಪಡಿಸಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ 800 ರೂ., ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂ. ದರ ನಿಗದಿಪಡಿಸಲಾಗಿದೆ.
Published On - 7:18 am, Wed, 28 December 22