ಬಿಎಸ್ಎಫ್ ಯೋಧನನ್ನು ಹೊಡೆದು ಕೊಂದ ಪ್ರಕರಣದಲ್ಲಿ 7 ಮಂದಿ ಬಂಧನ; ಭಯಾನಕ ಕೃತ್ಯವನ್ನು ವಿವರಿಸಿದ ಪುತ್ರ
ಮೆಲ್ಜಿಭಾಯ್ ವಘೇಲಾ ತನ್ನ ಮಗ ಮತ್ತು ಸಂಬಂಧಿಕರೊಂದಿಗೆ ಶೈಲೇಶ್ ಅವರ ಮನೆಗೆ ತಲುಪಿದರು. ಅಲ್ಲಿ ಆರೋಪಿಯ ತಂದೆ ದಿನೇಶ್ ಜಾದವ್ ಜತೆ ಜಗಳ ಪ್ರಾರಂಭವಾಯಿತು. ಚಿಕ್ಕಪ್ಪ ಅರವಿಂದ್ ಜಾದವ್ ಮತ್ತು ಇತರ ಕುಟುಂಬ ಸದಸ್ಯರು ಅವನ ಮೇಲೆ ಹಲ್ಲೆ ನಡೆಸಿದರು.
ಅಹಮದಾಬಾದ್: ತನ್ನ ಮಗಳ ಅಶ್ಲೀಲ ವಿಡಿಯೊ ಪ್ರಸಾರ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಗಡಿ ಭದ್ರತಾ ಪಡೆ (BSF) ಯೋಧನನ್ನು ಕೊಂದ ಆರೋಪದಲ್ಲಿ ಗುಜರಾತ್ ಪೊಲೀಸರು (Gujarat Police) ಮಂಗಳವಾರ ಏಳು ಜನರನ್ನು ಬಂಧಿಸಿದ್ದಾರೆ. ರಾಜ್ಯದ ನಾಡಿಯಾದ್ ನಗರದಲ್ಲಿ ಶನಿವಾರ ನಡೆದ ಭಯಾನಕ ಕೃತ್ಯ ಕುರಿತು ಬಿಎಸ್‌ಎಫ್ ಯೋಧನ ಮಗ ಸುದ್ದಿ ಸಂಸ್ಥೆ ಎಎನ್‌ಐಗೆ ವಿವರಿಸಿದ್ದಾರೆ. ವಿಡಿಯೊ ವೈರಲ್ ಮಾಡಿದವರನ್ನು ಮಾತನಾಡಿಸಲು ನನ್ನ ತಂದೆ-ತಾಯಿ ಮತ್ತು ಸಹೋದರ ಹೋದಾಗ ಹಿಂದಿನಿಂದ ಬಂದ ಕೆಲವರು ನನ್ನ ತಂದೆಯ ತಲೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ.ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು 45 ವರ್ಷದ ಮೆಲ್ಜಿಭಾಯ್ ವಘೇಲಾ ಅವರ ಪುತ್ರ ಪ್ರತೀಕ್ ಹೇಳಿದ್ದಾರೆ. ವಘೇಲಾ ತನ್ನ ಅಪ್ರಾಪ್ತ ಮಗಳ ಅಶ್ಲೀಲ ವಿಡಿಯೊ ಕುರಿತು ಆರೋಪಿಗಳಲ್ಲಿ ಒಬ್ಬನಾದ ಶೈಲೇಶ್ ಜಾದವ್‌ನನ್ನು ಪ್ರಶ್ನಿಸಿದಾಗ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಘೇಲಾ ಅವರು ಜಾದವ್ ಅವರ ಮನೆಗೆ ಹೋದ ನಂತರ ಚಕ್ಲಾಸಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ಆತನ ಸಂಬಂಧಿಕರು ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶೈಲೇಶ್ ಅವರ ಮನೆಯಲ್ಲಿ ಘಟನೆ ನಡೆದಾಗ, ಆತ ಸ್ಥಳದಲ್ಲಿ ಇರಲಿಲ್ಲ.
ಮೆಲ್ಜಿಭಾಯ್ ವಘೇಲಾ ತನ್ನ ಮಗ ಮತ್ತು ಸಂಬಂಧಿಕರೊಂದಿಗೆ ಶೈಲೇಶ್ ಅವರ ಮನೆಗೆ ತಲುಪಿದರು. ಅಲ್ಲಿ ಆರೋಪಿಯ ತಂದೆ ದಿನೇಶ್ ಜಾದವ್ ಜತೆ ಜಗಳ ಪ್ರಾರಂಭವಾಯಿತು. ಚಿಕ್ಕಪ್ಪ ಅರವಿಂದ್ ಜಾದವ್ ಮತ್ತು ಇತರ ಕುಟುಂಬ ಸದಸ್ಯರು ಅವನ ಮೇಲೆ ಹಲ್ಲೆ ನಡೆಸಿದರು. ವಘೇಲಾ ಸ್ಥಳದಲ್ಲೇ ಸಾವನ್ನಪ್ಪಿದರು. ಮಗ ಗಾಯಗೊಂಡಿದ್ದಾರೆ ಎಂದು ನಾಡಿಯಾಡ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಆರ್ ಬಾಜ್‌ಪೇಯ್ ಹೇಳಿದ್ದಾರೆ.
ಇದನ್ನೂ ಓದಿ: Covid variant BF.7 : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್: ಹುಬ್ಬಳ್ಳಿಯ ಕಿಮ್ಸ್ಗೆ ಸುಧಾಕರ್ ಭೇಟಿ
ವಘೇಲಾ ಬಿಎಸ್‌ಎಫ್ 56 ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದರು. ತಲೆಗೆ ಗಾಯಗೊಂಡ ಮಗ ನವದೀಪ್ ವಘೇಲಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಾಜ್‌ಪೇಯ್ ಹೇಳಿದರು.
ವಾಣಿಪುರ ಗ್ರಾಮದ ಸುನೀಲ್ ಯಾದವ್ ಅಲಿಯಾಸ್ ಶೈಲೇಶ್ ಎಂಬಾತ ಯುವತಿಯ ವಿಡಿಯೊ ಮಾಡಿದ್ದಾನೆ ಎಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಹೇಳಿದೆ. ಶೈಲೇಶ್ ಮತ್ತು ಯೋಧನ ಪುತ್ರಿ ಸಹಪಾಠಿಗಳು ಆಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹತ್ಯೆ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಎಲ್ಲಾ ಏಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ