Covaxin: ಕೋವ್ಯಾಕ್ಸಿನ್​ಗೆ ಅನುಮೋದನೆ ನೀಡುವ ಬಗ್ಗೆ WHO ಸಭೆ; ಸದ್ಯದಲ್ಲೇ ಅಂತಿಮ ನಿರ್ಧಾರ ಸಾಧ್ಯತೆ

| Updated By: ಸುಷ್ಮಾ ಚಕ್ರೆ

Updated on: Oct 05, 2021 | 5:49 PM

ವಿಶ್ವ ಆರೋಗ್ಯ ಸಂಸ್ಥೆ ನಾಳೆ ಅಥವಾ ಈ ತಿಂಗಳೊಳಗೆ ಕೊವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

Covaxin: ಕೋವ್ಯಾಕ್ಸಿನ್​ಗೆ ಅನುಮೋದನೆ ನೀಡುವ ಬಗ್ಗೆ WHO ಸಭೆ; ಸದ್ಯದಲ್ಲೇ ಅಂತಿಮ ನಿರ್ಧಾರ ಸಾಧ್ಯತೆ
ಕೊವ್ಯಾಕ್ಸಿನ್ ಲಸಿಕೆ
Follow us on

ನವದೆಹಲಿ: ಭಾರತದ ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ನೀಡುವ ಬಗ್ಗೆ ಇಂದು ವಿಶ್ವ ಆರೋಗ್ಯ ಸಂಸ್ಥೆ ಸಭೆ ನಡೆಸಲಿದೆ. ನಾಳೆ ಅಥವಾ ಈ ತಿಂಗಳೊಳಗೆ ಕೊವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಸಿಕ್ಕರೇ, ಈ ಲಸಿಕೆ ಪಡೆದವರು ವಿಶ್ವದಲ್ಲಿ ಬೇರೆ ಬೇರೆ ದೇಶಗಳಿಗೆ ಮುಕ್ತವಾಗಿ ಸಂಚಾರ ಮಾಡಲು ಅವಕಾಶ ಸಿಗುತ್ತದೆ.

ಭಾರತದ ಕೊವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ನೀಡುವ ಬಗ್ಗೆ ಇಂದು ವಿಶ್ವ ಆರೋಗ್ಯ ಸಂಸ್ಥೆಯ ಸ್ಟ್ರಾಟಜಿಕ್ ಅಡ್ಲೈಸರಿ ಗ್ರೂಪ್ ಆಫ್ ಎಕ್ಸ್ ಫರ್ಟ್ ಸಭೆ ನಡೆಯಲಿದೆ. ಈ ಎಕ್ಸ್ ಫರ್ಟ್ ಸಭೆಯೇ ಕೊವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸ್ಸು ಮಾಡಲಿದೆ. ಇದರ ಶಿಫಾರಸ್ಸಿನ ಆಧಾರದ ಮೇಲೆ ವಿಶ್ವ ಆರೋಗ್ಯ ಸಂಸ್ಥೆಯು ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಇಂದು ವಿಶ್ವ ಆರೋಗ್ಯ ಸಂಸ್ಥೆಯ ಸ್ಟ್ರಾಟಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್ ಫರ್ಟ್ ಸಭೆಯಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಿರುವ ಭಾರತ್ ಬಯೋಟೆಕ್ ಕಂಪನಿಯ ಪ್ರತಿನಿಧಿಗಳು ಲಸಿಕೆಯ ಬಗ್ಗೆ ಪ್ರಸಂಟೇಷನ್ ನೀಡುವರು. ಭಾರತ್ ಬಯೋಟೆಕ್ ಕಂಪನಿಯ ಪ್ರತಿನಿಧಿಗಳು ಕೊವ್ಯಾಕ್ಸಿನ್ ಲಸಿಕೆಯ ಸುರಕ್ಷತೆ, ಕೊರೊನಾ ವೈರಸ್ ವಿರುದ್ದ ಪರಿಣಾಮಕಾರಿತನ ಹಾಗೂ 1ರಿಂದ 3ನೇ ಹಂತದ ಪ್ರಯೋಗದವರೆಗಿನ ಫಲಿತಾಂಶದ ಡಾಟಾ ಬಗ್ಗೆ ಪ್ರಸಂಟೇಷನ್ ನೀಡುವರು. ಭಾರತೀಯ ಕಾಲಮಾನ ಇಂದು ಸಂಜೆ 4.45ಕ್ಕೆ ಆರಂಭವಾಗಿರುವ ಸಭೆಯು ಸುಮಾರು 90 ನಿಮಿಷಗಳ ಕಾಲ ನಡೆಯಲಿದೆ. ಸಭೆಯಲ್ಲಿ ಲಸಿಕೆಯ ರಿಸ್ಕ್ ಮ್ಯಾನೇಜ್ ಮೆಂಟ್ ಮತ್ತು ಇತರೆ ಕೆಲ ಅಂಶಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಸ್ಟ್ರಾಟಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್ ಫರ್ಟ್ ಸದಸ್ಯರುಗಳು ಲಸಿಕೆಗಳ ಜಾಗತಿಕ ನೀತಿ, ಕಾರ್ಯತಂತ್ರ, ತಂತ್ರಜ್ಞಾನ, ಸಂಶೋಧನೆ, ಅಭಿವೃದ್ದಿ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ಸಲಹೆ, ಶಿಫಾರಸ್ಸುಗಳನ್ನು ಮಾಡುತ್ತಾರೆ. ಇಂದಿನ ಸಭೆಯಲ್ಲೂ ಕೊವ್ಯಾಕ್ಸಿನ್ ಲಸಿಕೆಯ 1ರಿಂದ 3ನೇ ಹಂತದವರೆಗಿನ ಲಸಿಕೆಯ ವೈದ್ಯಕೀಯ ಪ್ರಯೋಗದ ಅಂಕಿಅಂಶಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಮಾರ್ಕೆಟಿಂಗ್ ನಂತರದ ಅಧ್ಯಯನಗಳಲ್ಲಿ ಕಂಡು ಬಂದ ಸುರಕ್ಷತೆ, ರೋಗ ನಿರೋಧಕ ಶಕ್ತಿ ವೃದ್ದಿ, ಲಸಿಕೆಯ ಪರಿಣಾಮಕಾರಿತನದ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಲಸಿಕೆಯ ಜಾಗತಿಕ, ಪ್ರಾದೇಶಿಕ, ದೇಶವಾರು ಲಸಿಕೆಯ ಸುರಕ್ಷತೆಯ ಬಗ್ಗೆ ಮಾನಿಟರಿಂಗ್ ಮಾಡುವ ಬಗ್ಗೆ ಸ್ಟ್ರಾಟಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್ ಫರ್ಟ್ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಸ್ಟ್ರಾಟಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್ ಫರ್ಟ್ ಸದಸ್ಯ ಹನ್ನಾ ನೋಯೆನೆಕ್ ಅವರು, ಕೊವ್ಯಾಕ್ಸಿನ್ ಲಸಿಕೆಯ ದಾಖಲೆಗಳನ್ನು ಪರಿಶೀಲನೆ ನಡೆಸಿ ಕರಡು ಶಿಫಾರಸ್ಸನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಮಾಡುವರು. ಭಾರತ್ ಬಯೋಟೆಕ್ ಕಂಪನಿಯು ಕೂಡ ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯ ಜೊತೆ ಸೇರಿ ಕೊವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ಪಡೆಯಲು ಕೆಲಸ ಮಾಡುತ್ತಿರುವುದಾಗಿ ಹೇಳಿದೆ. ಆದರೆ, ಯಾವಾಗ ಕೊವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ಸಿಗುತ್ತೆ ಎಂದು ಊಹಿಸುವುದು ಸರಿಯಲ್ಲ ಎಂದು ಭಾರತ್ ಬಯೋಟೆಕ್ ಕಂಪನಿಯು ಹೇಳಿದೆ. ಸೂಕ್ತ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ಸಿಗುವ ಬಗ್ಗೆ ಕಂಪನಿಯು ಘೋಷಣೆ ಮಾಡಲಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಹೇಳಿದೆ.

ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮೋದನೆ ಸಿಕ್ಕರೇ, ಕೊವ್ಯಾಕ್ಸಿನ್ ಲಸಿಕೆ ಪಡೆದವರು, ವಿಶ್ವದಲ್ಲಿ ಯಾವುದೇ ನಿರ್ಬಂಧ ಇಲ್ಲದೇ ಸಂಚಾರ ಮಾಡಬಹುದು. ಈ ಕಾರಣಕ್ಕಾಗಿ ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಭಾರತ್ ಬಯೋಟೆಕ್ ಕಂಪನಿಯು ಕಳೆದ ಜೂನ್ ತಿಂಗಳಲ್ಲೇ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ವೈದ್ಯಕೀಯ ಪರೀಕ್ಷೆಯ ಅಂಕಿಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದೆ. ಈಗ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡುವ ಮುನ್ನ ಕಠಿಣವಾಗಿ ವೈದ್ಯಕೀಯ ಪ್ರಯೋಗದ ಅಂಕಿಅಂಶಗಳನ್ನು , ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಲಸಿಕೆಯ ಸುರಕ್ಷತೆ, ಪರಿಣಾಮಕಾರಿತನ, ಗುಣಮಟ್ಟ ಮತ್ತು ರಿಸ್ಕ್ ಮ್ಯಾನೇಜ್ ಮೆಂಟ್ ಪ್ಲ್ಯಾನ್ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಇಂದು ಭಾರತ್ ಬಯೋಟೆಕ್ ಕಂಪನಿಯ ಪ್ರತಿನಿಧಿಗಳು ಕೊವ್ಯಾಕ್ಸಿನ್ ಲಸಿಕೆಯ ಬಗ್ಗೆ ತನ್ನ ಪ್ರಸಂಟೇಷನ್ ಅನ್ನು ಸ್ಟ್ರಾಟಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್ ಫರ್ಟ್ ಎದುರು ನೀಡಲಿದ್ದಾರೆ. ನಾಳೆ ಸ್ಟ್ರಾಟಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್ ಫರ್ಟ್ ಮತ್ತೊಮ್ಮೆ ಸಭೆ ಸೇರಿ ಕೊವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಲು ಶಿಫಾರಸ್ಸು ಮಾಡಬೇಕೇ ಬೇಡವೇ ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳುವರು. ಹೀಗಾಗಿ ಈ ತಿಂಗಳೊಳಗಾಗಿ ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮೋದನೆ ಸಿಗುತ್ತಾ ಇಲ್ಲವೇ ಎಂಬುದು ಸ್ಪಷ್ಟವಾಗಲಿದೆ.

ಇದನ್ನೂ ಓದಿ: Covaxin Vaccine: ವಿಶ್ವ ಆರೋಗ್ಯ ಸಂಸ್ಥೆಯಿಂದ ಕೋವ್ಯಾಕ್ಸಿನ್ ಲಸಿಕೆ ಅನುಮತಿಗೆ ಪ್ರಯತ್ನಿಸುತ್ತಿದ್ದೇವೆ; ಭಾರತ್ ಬಯೋಟೆಕ್ ಸ್ಪಷ್ಟನೆ

Covaxin Vaccine: ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿ ಶೀಘ್ರದಲ್ಲೇ ಕೊವ್ಯಾಕ್ಸಿನ್​​ಗೆ ಸಿಗಲಿದೆ ಸ್ಥಾನ !