ಭಾರತದಲ್ಲಿ ಕೊರೊನಾ ಸ್ಫೋಟ; ದಿನವೂ 10 ಸಾವಿರಕ್ಕಿಂತ ಹೆಚ್ಚು ಕೊವಿಡ್ ಕೇಸ್ ಪತ್ತೆ

| Updated By: ಸುಷ್ಮಾ ಚಕ್ರೆ

Updated on: Jan 01, 2022 | 7:45 PM

ಭಾರತದಲ್ಲಿ ಈಗ ಕೊರೊನಾದ ಮೂರನೇ ಅಲೆ ಪ್ರಾರಂಭವಾಗಿದೆ. ಕಳೆದ ಮೂರು ದಿನಗಳಿಂದ ಭಾರತದಲ್ಲಿ ದಿನವೂ ಹತ್ತು ಸಾವಿರಕ್ಕಿಂತ ಹೆಚ್ಚಿನ ಹೊಸ ಕೊರೊನಾ ಕೇಸ್ ಪತ್ತೆಯಾಗುತ್ತಿವೆ

ಭಾರತದಲ್ಲಿ ಕೊರೊನಾ ಸ್ಫೋಟ; ದಿನವೂ 10 ಸಾವಿರಕ್ಕಿಂತ ಹೆಚ್ಚು ಕೊವಿಡ್ ಕೇಸ್ ಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಭಾರತದಲ್ಲಿ ಈಗ ಮತ್ತೆ ಕೊರೊನಾ ಕೇಸ್​ಗಳ ಸ್ಫೋಟವಾಗುತ್ತಿದೆ. ಕಳೆದ ಮೂರು ದಿನಗಳಿಂದ ದೇಶದಲ್ಲಿ ದಿನವೂ ಹತ್ತು ಸಾವಿರಕ್ಕಿಂತ ಹೆಚ್ಚಿನ ಹೊಸ ಕೊರೊನಾ ಕೇಸ್ ಪತ್ತೆಯಾಗುತ್ತಿವೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈನಂತಹ ನಗರಗಳಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತವು ಈಗ ಕೊರೊನಾದ ಮೂರನೇ ಅಲೆಯ ಪ್ರಾರಂಭದ ಹಂತದಲ್ಲಿದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಹೇಳುತ್ತಿದ್ದಾರೆ.

ಭಾರತದಲ್ಲಿ ಈಗ ಕೊರೊನಾದ ಮೂರನೇ ಅಲೆ ಪ್ರಾರಂಭವಾಗಿದೆ. ಅಕ್ಷರಶಃ ಭಾರತ ಈಗ ಕೊರೊನಾದ 3ನೇ ಅಲೆಯ ಆರಂಭಿಕ ಹಂತಲ್ಲಿದೆ ಎನ್ನುವುದು ದೇಶದ ಕೊರೊನಾ ಕೇಸ್ ಗಳ ಸಂಖ್ಯೆಯನ್ನು ನೋಡಿದರೆ ಗೊತ್ತಾಗುತ್ತದೆ. ಕಳೆದ ಮೂರು ದಿನಗಳಿಂದ ಭಾರತದಲ್ಲಿ ದಿನವೂ ಹತ್ತು ಸಾವಿರಕ್ಕಿಂತ ಹೆಚ್ಚಿನ ಹೊಸ ಕೊರೊನಾ ಕೇಸ್ ಪತ್ತೆಯಾಗುತ್ತಿವೆ. ಡಿಸೆಂಬರ್ 25ಕ್ಕೂ ಮೊದಲು ಭಾರತದಲ್ಲಿ ನಿತ್ಯ ಹತ್ತು ಸಾವಿರಕ್ಕಿಂತ ಕಡಿಮೆ ಕೊರೊನಾ ಕೇಸ್ ಪತ್ತೆಯಾಗುತ್ತಿದ್ದವು. ಆದರೆ, ಕಳೆದ ಮೂರು ದಿನಗಳಲ್ಲಿ ದೇಶದಲ್ಲಿ ಕೊರೊನಾ ಕೇಸ್ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿವೆ. ಮುಂದಿನ ಒಂದು ತಿಂಗಳಲ್ಲಿ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ದೇಶಗಳಂತೆ ಭಾರತದಲ್ಲೂ ಕೊರೊನಾ ಕೇಸ್ ಏರಿಕೆಯಾಗುವ ಭೀತಿ ಇದೆ.

ಡಿಸೆಂಬರ್ 29ರಂದು ಭಾರತದಲ್ಲಿ 13 ಸಾವಿರ ಕೊರೊನಾ ಕೇಸ್ ಪತ್ತೆಯಾಗಿದೆ. ಡಿಸೆಂಬರ್ 30 ರಂದು ಭಾರತದಲ್ಲಿ 16,764 ಹೊಸ ಕೊರೊನಾ ಕೇಸ್ ಪತ್ತೆಯಾಗಿದೆ. ಡಿಸೆಂಬರ್ 31ರಂದು ಭಾರತದಲ್ಲಿ 22,775 ಹೊಸ ಕೊರೊನಾ ಕೇಸ್ ಪತ್ತೆಯಾಗಿದೆ. ಗುರುವಾರಕ್ಕೆ ಹೋಲಿಸಿದರೆ, ಶುಕ್ರವಾರ ಶೇ. 35ರಷ್ಟು ಕೊರೊನಾ ಕೇಸ್ ಏರಿಕೆಯಾಗಿವೆ. ಭಾರತದಲ್ಲಿ ಹೀಗೆ ಕೊರೊನಾ ಕೇಸ್ ಏರಿಕೆಯಾಗಲು ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಕಾರಣ ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯ. ಭಾರತದಲ್ಲಿ ಇಂದು ಬೆಳಿಗ್ಗೆಯವರೆಗೂ 1,431 ಒಮಿಕ್ರಾನ್ ಪ್ರಭೇದದ ಕೊರೊನಾ ಕೇಸ್ ಪತ್ತೆಯಾಗಿವೆ. ಆದರೆ, ಇವು ಜೆನೋಮಿಕ್ ಸಿಕ್ವೇನ್ಸಿಂಗ್ ನಿಂದ ದೃಢಪಟ್ಟ ಒಮಿಕ್ರಾನ್ ತಳಿಯ ಕೊರೊನಾ ಕೇಸ್ ಗಳು. ಜೆನೋಮಿಕ್ ಸಿಕ್ವೇನ್ಸಿಂಗ್ ಅನ್ನು ಎಲ್ಲ ಕೊರೊನಾ ಸ್ಯಾಂಪಲ್ ಗಳಿಗೂ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಒಮಿಕ್ರಾನ್ ತಳಿಯ ಕೊರೊನಾ ವೈರಸ್ ಈಗಾಗಲೇ ಭಾರತದಲ್ಲಿ ಸಮುದಾಯಕ್ಕೆ ಹರಡಿದೆ. ಒಮಿಕ್ರಾನ್ ತಳಿಗೆ ವೇಗವಾಗಿ ಹರಡುವ ಸಾಮರ್ಥ್ಯ ಇದೆ. ಹೀಗಾಗಿ ಒಮಿಕ್ರಾನ್ ತಳಿಯೇ ಈಗ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ನಿತ್ಯ ಹತ್ತು ಸಾವಿರಕ್ಕಿಂತ ಕಡಿಮೆಗೆ ಕುಸಿದಿದ್ದ ಕೊರೊನಾ ಕೇಸ್ ಗಳು ಕಳೆದ 3 ದಿನಗಳಿಂದ 10 ಸಾವಿರದ ಗಡಿ ದಾಟಿ ಏರಿಕೆಯಾಗುತ್ತಿವೆ. ಭಾರತದಲ್ಲಿ ಕೊರೊನಾ ಸಕ್ರಿಯ ಕೇಸ್ ಗಳ ಸಂಖ್ಯೆ ಕೂಡ ಒಂದು ಲಕ್ಷಕ್ಕಿಂತ ಕಡಿಮೆಗೆ ಕುಸಿದಿತ್ತು. ಆದರೇ, ಇಂದು ಭಾರತದಲ್ಲಿ ಕೊರೊನಾ ಸಕ್ರಿಯ ಕೇಸ್ ಗಳ ಸಂಖ್ಯೆ 1,04,781 ಕ್ಕೇರಿಕೆಯಾಗಿದೆ. ನಿತ್ಯದ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.2.05ಕ್ಕೇರಿಕೆಯಾಗಿದೆ.

ನಮ್ಮ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಕೊರೊನಾ ಕೇಸ್ ಗಳು ಮೂರು ಪಟ್ಟು ಏರಿಕೆಯಾಗಿವೆ. ಮಹಾರಾಷ್ಟ್ರದಲ್ಲಿ ಡಿಸೆಂಬರ್ 29ರ ಬುಧವಾರ 3,900 ಕೊರೊನಾ ಕೇಸ್ ಗಳು ಪತ್ತೆಯಾಗಿದ್ದವು. ಆದರೇ, ಡಿಸೆಂಬರ್ 31ರ ಶುಕ್ರವಾರ 8,067 ಹೊಸ ಕೊರೊನಾ ಕೇಸ್ ಪತ್ತೆಯಾಗಿವೆ. ಮುಂಬೈ ನಗರದಲ್ಲಿ ಬುಧವಾರ 2,455 ಹೊಸ ಕೊರೊನಾ ಕೇಸ್ ಪತ್ತೆಯಾಗಿದ್ದವು. ಆದರೇ, ಶುಕ್ರವಾರ ಮುಂಬೈನಲ್ಲಿ 5,428 ಕೊರೊನಾ ಕೇಸ್ ಪತ್ತೆಯಾಗುವ ಮೂಲಕ ಮೂರೇ ದಿನಕ್ಕೆ ಕೊರೊನಾ ಕೇಸ್ ಡಬಲ್ ಆಗಿವೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೊನಾದ ಮೂರನೇ ಅಲೆ ಆರಂಭವಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ಘೋಷಿಸಿದ್ದಾರೆ. 3ನೇ ಅಲೆಯನ್ನು ಒಮಿಕ್ರಾನ್ ಅಲೆ ಎಂದು ಕರೆಯಬೇಕಾಗುತ್ತೆ ಎಂದಿದ್ದಾರೆ. ಮಹಾರಾಷ್ಟ್ರ ರಾಜ್ಯವು ಲಾಕ್ ಡೌನ್ ಹೊಸ್ತಿಲಲ್ಲಿ ಇದೆ. ಕೆಲವೇ ದಿನಗಳಲ್ಲಿ ಕಠಿಣ ನಿರ್ಬಂಧ ವಿಧಿಸಲಾಗುತ್ತೆ ಎಂದು ಪರಿಹಾರ, ಪುನರ್ ವಸತಿ ಸಚಿವ ವಿಜಯ್ ವಡಟಿವಾರ್ ಹೇಳಿದ್ದಾರೆ. ಇನ್ನೂ ಮಹಾರಾಷ್ಟ್ರ ಸರ್ಕಾರದ ಹತ್ತು ಸಚಿವರಿಗೆ ಕೊರೊನಾ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಸದ್ಯ 24 ಸಾವಿರ ಕೊರೊನಾ ಸಕ್ರಿಯ ಕೇಸ್ ಗಳಿವೆ. ಡಿಸೆಂಬರ್ 21ರಂದು 7 ಸಾವಿರ ಕೊರೊನಾ ಸಕ್ರಿಯ ಕೇಸ್ ಗಳಿದ್ದವು. ಈಗ ಮೂರು ಪಟ್ಟು ಕೊರೊನಾ ಸಕ್ರಿಯ ಕೇಸ್ ಹೆಚ್ಚಾಗಿವೆ. ಮಹಾರಾಷ್ಟ್ರದಲ್ಲಿ 454 ಒಮಿಕ್ರಾನ್ ಪ್ರಭೇದದ ಕೊರೊನಾ ಕೇಸ್ ಪತ್ತೆಯಾಗಿವೆ.

ತಮಿಳುನಾಡಿನಲ್ಲಿ ಶುಕ್ರವಾರ 1,155 ಹೊಸ ಕೊರೊನಾ ಕೇಸ್ ಪತ್ತೆಯಾಗಿವೆ. ತಮಿಳುನಾಡಿನಲ್ಲಿ ಕೊರೊನಾ ಕೇಸ್ ಏರಿಕೆಯಾಗುತ್ತಿರುವುದರಿಂದ ಈಗಾಗಲೇ ಜನವರಿ 10ರವರೆಗೆ ಲಾಕ್ ಡೌನ್ ಹಾಗೂ ಜನವರಿ 30ರವರೆಗೆ ಕಠಿಣ ನಿರ್ಬಂಧ ವಿಧಿಸಲಾಗಿದೆ. 1 ರಿಂದ 8ನೇ ತರಗತಿಯವರೆಗೂ ಭೌತಿಕ ತರಗತಿ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ರೆಸ್ಟೊರೆಂಟ್, ಪಾರ್ಕ್, ಥಿಯೇಟರ್ ಗಳಲ್ಲಿ ಶೇ.50 ರಷ್ಟು ಆಸನ ಸಾಮರ್ಥ್ಯ ಮಾತ್ರ ಭರ್ತಿಯಾಗಿರಬೇಕು ಎಂದು ನಿರ್ಬಂಧ ಹೇರಲಾಗಿದೆ. ಕೇರಳದಲ್ಲಿ ಶುಕ್ರವಾರ 2,676 ಹೊಸ ಕೊರೊನಾ ಕೇಸ್ ಪತ್ತೆಯಾಗಿವೆ. ಕೇರಳದಲ್ಲಿ ಸದ್ಯ 19,416ಕೊರೊನಾ ಸಕ್ರಿಯ ಕೇಸ್ ಗಳಿವೆ. ಕೇರಳದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರವು ಶುಕ್ರವಾರ ಶೇ.4.39 ರಷ್ಟು ದಾಖಲಾಗಿದೆ.

ಹೀಗೆ ಕರ್ನಾಟಕದ ನೆರೆಹೊರೆಯ ರಾಜ್ಯಗಳಲ್ಲಿ ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವುದು ಕರ್ನಾಟಕಕ್ಕೂ ಎಚ್ಚರಿಕೆಯ ಗಂಟೆ. ಕರ್ನಾಟಕದ ರಾಜಧಾನಿ ಬೆಂಗಳೂರನಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿವೆ. ಕರ್ನಾಟಕದಲ್ಲೂ ಒಮಿಕ್ರಾನ್ ಪ್ರಭಾವದಿಂದಾಗಿ ಕೊರೊನಾ ಕೇಸ್ ಹೆಚ್ಚಾಗುತ್ತಿವೆ. ಹೀಗಾಗಿ ಕರ್ನಾಟಕದಲ್ಲೂ ಕೊರೊನಾ ಹರಡದಂತೆ ತಡೆಯಲು ಕೆಲ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಬೇಕಾದ ಅನಿವಾರ್ಯತೆ ಬರಬಹುದು. ಆದರೆ, ಇದರಿಂದ ವ್ಯಾಪಾರ, ವಾಣಿಜ್ಯ, ಉದ್ಯಮ ಚಟುವಟಿಕೆ, ಹಣಕಾಸು ವ್ಯವಹಾರಗಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಜನರ ಜೀವ ಹಾಗೂ ಜೀವನ ಎರಡನ್ನೂ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡರೇ ಸೂಕ್ತ. ಸದ್ಯ ಒಮಿಕ್ರಾನ್ ಸೋಂಕಿನಿಂದ ಸಾವು-ನೋವು ಸಂಭವಿಸುತ್ತಿಲ್ಲ. ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆಯೂ ಆಫ್ರಿಕಾದಲ್ಲೂ ಎದುರಾಗಿಲ್ಲ. ಆಫ್ರಿಕಾದಲ್ಲಿ ಈಗಾಗಲೇ ಒಂದೇ ತಿಂಗಳಲ್ಲಿ ಕೊರೊನಾ ಕೇಸ್ ಕಡಿಮೆಯಾಗುತ್ತಿವೆ. ಹೀಗಾಗಿ, ಭಾರತದಲ್ಲಿ ಒಮಿಕ್ರಾನ್ ಪ್ರೇರಿತ ಕೊರೊನಾದ 3ನೇ ಅಲೆ ಒಂದೇ ತಿಂಗಳಲ್ಲಿ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರ ಇದೆ.

ಇದನ್ನೂ ಓದಿ: Covid Vaccine: ಅಫ್ಘಾನಿಸ್ತಾನಕ್ಕೆ ಭಾರತದಿಂದ 5 ಲಕ್ಷ ಡೋಸ್ ಕೊವಿಡ್ ಲಸಿಕೆ ರವಾನೆ

Coronavirus: ಕೊವಿಡ್ ಟೆಸ್ಟ್ ಹೆಚ್ಚಳಕ್ಕೆ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆ