Coronavirus: ಕೊವಿಡ್ ಟೆಸ್ಟ್ ಹೆಚ್ಚಳಕ್ಕೆ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆ
ಕೊವಿಡ್ ಲಕ್ಷಣಗಳಿರುವ ಯಾವುದೇ ವ್ಯಕ್ತಿಯನ್ನು ನೆಗೆಟಿವ್ ವರದಿ ಬರುವವರೆಗೆ ಶಂಕಿತ ಸೋಂಕಿತ ಎಂದೇ ಪರಿಗಣಿಸಬೇಕು ಎಂದು ಕೇಂದ್ರ ಸರ್ಕಾರವು ಸೂಚಿಸಿದೆ.
ದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೆಸ್ಟ್ ಪ್ರಮಾಣವನ್ನೂ ಹೆಚ್ಚಿಸಬೇಕೆಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳಿಗೂ ಪತ್ರ ಬರೆದಿದ್ದಾರೆ. ಕೊವಿಡ್ ಲಕ್ಷಣಗಳಿದ್ದರೆ ಸ್ವಯಂ ಪರೀಕ್ಷೆಗೆ ಒಳಪಡಬೇಕು. ಯಾವುದೇ ರೀತಿಯ ಕೆಮ್ಮು, ತಲೆನೋವು, ನೆಗಡಿ, ಗಂಟಲು ಕೆರೆತ, ಉಸಿರಾಟ ಸಮಸ್ಯೆ, ಮೈಕೈನೋವು, ರುಚಿ ಅಥವಾ ವಾಸನೆ ಕಳೆದುಕೊಂಡಿದ್ದರೆ, ಆಯಾಸ, ಭೇದಿ, ಜ್ವರ ಇದ್ದರೆ ಕೊವಿಡ್ ಎಂದು ಪರಿಗಣಿಸಿ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಜನರಿಗೆ ಸೂಚಿಸಿದ್ದಾರೆ.
ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಱಪಿಡ್ ಆಂಟಿಜನ್ ಟೆಸ್ಟ್ (Rapid Antigen Tests – RAT) ಆಧರಿತ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಆರ್ಟಿಪಿಸಿಆರ್ ಆಧರಿತ ಪರೀಕ್ಷೆಗಳಿಂದ ಕೊವಿಡ್ ವರದಿ ಕೈಸೇರುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ RATಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ರಾಜ್ಯಗಳಲ್ಲಿ ಸಾಕಷ್ಟು ಕಡೆ ಹಗಲಿರುಳು (24/7) ಕೆಲಸ ಮಾಡುವ RAT ಕೇಂದ್ರಗಳನ್ನು ಸ್ಥಾಪಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾಸ್ಪತ್ರೆಗಳು ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ RAT ತಪಾಸಣೆಗೆ ಅವಕಾಶ ನೀಡಬೇಕು ಎಂದು ಸೂಚಿಸಿದ್ದಾರೆ. ಕೊವಿಡ್ ತಪಾಸಣೆಯ ಎಲ್ಲ ವಿವರಗಳನ್ನೂ ಐಸಿಎಂಆರ್ ಪೋರ್ಟಲ್ಗೆ ಅಪ್ಡೇಟ್ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.
ಕೊವಿಡ್ ಲಕ್ಷಣಗಳಿರುವ ಯಾವುದೇ ವ್ಯಕ್ತಿಯನ್ನು ನೆಗೆಟಿವ್ ವರದಿ ಬರುವವರೆಗೆ ಶಂಕಿತ ಸೋಂಕಿತ ಎಂದೇ ಪರಿಗಣಿಸಬೇಕು. ಅಂಥವರನ್ನೆಲ್ಲಾ ತಪಾಸಣೆಗೆ ಒಳಪಡಿಸಬೇಕು. ತಪಾಸಣೆ ವರದಿ ಬರುವವರೆಗೆ ಅಂಥವರು ಪ್ರತ್ಯೇಕವಾಸದಲ್ಲಿ (ಐಸೊಲೇಶನ್) ಇರಬೇಕು. ಗೃಹ ಸಚಿವಾಲಯವು ಪ್ರಕಟಿಸಿರುವ ಹೋಂ ಐಸೊಲೇಶನ್ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಭಾರತದಲ್ಲಿ ಪ್ರಸ್ತುತ 3,117 ಮಾಲಿಕ್ಯುಲರ್ ಟೆಸ್ಟಿಂಗ್ ಲ್ಯಾಬ್ಗಳಿವೆ. ಇವುಗಳಲ್ಲಿ ಆರ್ಟಿ-ಪಿಸಿಆರ್, ಟ್ರೂನೆಟ್, ಸಿಬಿಎನ್ಎಟಿ (CBNAT) ಮತ್ತಿತರ ಸವಲತ್ತುಗಳು ಲಭ್ಯವಿವೆ. ಭಾರತಕ್ಕೆ ಪ್ರಸ್ತುತ ಒಂದು ದಿನಕ್ಕೆ 20 ಲಕ್ಷಕ್ಕೂ ಹೆಚ್ಚು ಟೆಸ್ಟಿಂಗ್ ನಿರ್ವಹಿಸುವ ಸಾಮರ್ಥ್ಯವಿದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Karnataka Covid Update: ಸೋಂಕಿತರ ಸಂಖ್ಯೆ ಮತ್ತೆ ಏರಿಕೆ, ಒಂದೇ ದಿನ 832 ಮಂದಿಗೆ ಕೊರೊನಾ ಸೋಂಕು ದೃಢ ಇದನ್ನೂ ಓದಿ: Omicron: ಒಮಿಕ್ರಾನ್ ಮೊದಲು ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹೊಸ ಕೇಸುಗಳ ಸಂಖ್ಯೆ ಕುಸಿತ