ನವದೆಹಲಿ: ಭಾರತದ ಕೊವಿಡ್ ಲಸಿಕೆಗಳ ಬಗ್ಗೆ ವಿದೇಶಗಳಲ್ಲಿ ಆಗಾಗ ವಿವಾದಗಳು ನಡೆಯುತ್ತಲೇ ಇವೆ. ಈ ಮೊದಲು ಭಾರತದ ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಕೆಲವು ದೇಶಗಳಲ್ಲಿ ಮಾನ್ಯತೆ ಇಲ್ಲ ಎಂಬುದು ಸಾಕಷ್ಟು ಚರ್ಚೆಗೊಳಗಾಗಿತ್ತು. ಆದರೆ, ಬಳಿಕ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳನ್ನು ಪಡೆದವರಿಗೂ ಇಂಗ್ಲೆಂಡ್ನಲ್ಲಿ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿತ್ತು. ಇದಕ್ಕೆ ಭಾರತದಿಂದ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕೋವಿಶೀಲ್ಡ್ ಲಸಿಕೆ ಕೂಡ ಅನುಮೋದಿತ ಲಸಿಕೆ ಎಂದು ಹೊಸ ನಿಯಮವನ್ನು ಜಾರಿಗೊಳಿಸಿದೆ. ಆದರೆ, ಕ್ವಾರಂಟೈನ್ ಮಾತ್ರ ಕಡ್ಡಾಯವಾಗಿರಲಿದೆ.
ಇಂಗ್ಲೆಂಡ್ನಲ್ಲಿ ನೀಡಲಾಗುವ ಆಸ್ಟ್ರಾಜೆನಿಕಾ ಲಸಿಕೆಯ ಭಾರತದ ಆವೃತ್ತಿಯಾದ ಕೋವಿಶೀಲ್ಡ್‌ನ ಎರಡು ಡೋಸ್ ಪಡೆದಿದ್ದರೂ ಅವರಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ ಎಂದು ಇಂಗ್ಲೆಂಡ್ನಲ್ಲಿ ಪರಿಗಣಿಸಲಾಗುತ್ತಿತ್ತು. ಅಲ್ಲದೆ, ಕೋವಿಶೀಲ್ಡ್ ಲಸಿಕೆ ಪಡೆದವರಿಗೆ 10 ದಿನಗಳ ಕ್ವಾರಂಟೈನ್ ಕೂಡ ಕಡ್ಡಾಯವಾಗಿತ್ತು. ಕೋವಿಶೀಲ್ಡ್ ಅನ್ನೇ ಬ್ರಿಟನ್ನಲ್ಲಿ ಅಸ್ಟ್ರಾಜೆನಿಕಾ ಲಸಿಕೆ ಎಂಬ ಹೆಸರಿನಲ್ಲಿ ನೀಡಲಾಗುತ್ತಿದೆ. ಆದರೂ ಕೋವಿಶೀಲ್ಡ್ಗೆ ಮಾನ್ಯತೆ ನೀಡದಿರುವುದು ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇಂಗ್ಲೆಂಡ್‌ನ ಹೊಸ ನಿಯಮದ ಪ್ರಕಾರ, ಆಕ್ಸ್‌ಫರ್ಡ್- ಆಸ್ಟ್ರಾಜೆನಿಕಾ, ಫೈಜರ್- ಬಯೋಎನ್‌ಟೆಕ್ ಅಥವಾ ಮಾಡರ್ನಾದ ಡಬಲ್ ಡೋಸ್ ಲಸಿಕೆಯ ಎರಡೂ ಡೋಸ್ ಪಡೆದವರು ಅಥವಾ ಸಿಂಗಲ್ ಡೋಸ್‌ನ ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ ಪಡೆದವರನ್ನು ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದವರು ಎಂದು ಸೂಚಿಸಲಾಗಿತ್ತು. ಇದೀಗ ಆ ಪಟ್ಟಿಗೆ ಕೋವಿಶೀಲ್ಡ್ ಅನ್ನು ಕೂಡ ಸೇರಿಸಲಾಗಿದೆ. ಆದರೆ, ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರು ಇಂಗ್ಲೆಂಡ್ನಲ್ಲಿ ಕ್ವಾರಂಟೈನ್ ಆಗಬೇಕಾದುದು ಮಾತ್ರ ಕಡ್ಡಾಯ.
ಆಸ್ಟ್ರೇಲಿಯಾ, ಆ್ಯಂಟಿಗುವಾ ಮತ್ತು ಬಾರ್ಬುಡಾ, ಬಾರ್ಬಡೋಸ್, ಬಹ್ರೇನ್, ಬ್ರೂನಿ, ಕೆನಡಾ, ಡೊಮಿನಿಕಾ, ಇಸ್ರೇಲ್, ಜಪಾನ್, ಕುವೈತ್, ಮಲೇಷ್ಯಾ, ನ್ಯೂಜಿಲ್ಯಾಂಡ್, ಕತಾರ್, ಸೌದಿ ಅರೇಬಿಯಾ, ಸಿಂಗಾಪುರ, ದಕ್ಷಿಣ ಕೊರಿಯಾ ಅಥವಾ ತೈವಾನ್‌ನ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಅಡಿಯಲ್ಲಿ ಲಸಿಕೆ ಪಡೆದವರನ್ನು ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದವರು ಎಂದು ಪರಿಗಣಿಸಲಾಗುತ್ತದೆ.
ಈ ಬಗ್ಗೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಘಾಲ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಇಂಗ್ಲೆಂಡ್ ವಿದೇಶಾಂಗ ಇಲಾಖೆ ಸಚಿವರ ಜೊತೆ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿದ್ದಾರೆ. ಅವರು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವ ಕೆಲ ಭರವಸೆ ನೀಡಿದ್ದಾರೆ. ನಾವು ನಮ್ಮ ಸ್ನೇಹಿ ರಾಷ್ಟ್ರಗಳ ಲಸಿಕೆಗೆ ಮಾನ್ಯತೆ ನೀಡಿದ್ದೇವೆ. ಇವೆಲ್ಲವೂ ಪರಸ್ಪರ ಮಾನ್ಯತೆ ನೀಡುವ ಕ್ರಮಗಳು. ಒಂದು ವೇಳೆ ನಮಗೆ ತೃಪ್ತಿ ಆಗದಿದ್ದರೆ ಕ್ರಮಕ್ಕೆ ಅವಕಾಶ ಇದೆ. ನಾವು ಕೂಡ ಇಂಗ್ಲೆಂಡ್‌ನ ಲಸಿಕೆಗೆ ಮಾನ್ಯತೆ ನೀಡದಿರಲು ಸಾಧ್ಯವಿದೆ ಎನ್ನುವ ಮೂಲಕ ಇಂಗ್ಲೆಂಡ್ಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದರು.
ಇದನ್ನೂ ಓದಿ: Covid Vaccine: ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರಿಗೆ ಇಂಗ್ಲೆಂಡ್ನಲ್ಲಿ ಮಾನ್ಯತೆ ಇಲ್ಲ; ನಿಯಮ ಬದಲಾವಣೆಗೆ ಭಾರತ ಒತ್ತಾಯ
Covid-19: ಕೋವಿಶೀಲ್ಡ್ ಲಸಿಕೆಯ ಡೋಸ್ಗಳ ನಡುವೆ ಅಂತರ ತಗ್ಗಿಸುವ ಪ್ರಸ್ತಾಪವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ
(Covishield Vaccine UK lists Covishield as approved Covid-19 vaccine in revised travel advisory and Allows Entry for Indians)
Published On - 2:36 pm, Wed, 22 September 21