ದೆಹಲಿ: ಕೊವಿಡ್ 19 ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವ ಕೊವಿನ್ (CoWin) ಪೋರ್ಟಲ್ನಲ್ಲಿ ಮುಂದಿನ ವಾರದಿಂದ ಹಿಂದಿ ಸೇರಿ, 14 ಭಾಷೆಗಳು ಲಭ್ಯವಾಗಲಿದೆ. ಹಾಗೇ ಭಾರತದಲ್ಲಿ ಕೊವಿಡ್ 19 ರೂಪಾಂತರ ಪತ್ತೆ, ನಿರ್ವಹಣೆಗಾಗಿ INSACOG (Indian SARS-CoV-2 Genomics Consortium)ನೆಟ್ವರ್ಕ್ಗೆ ಇನ್ನೂ 17 ಪ್ರಯೋಗಾಲಯಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ತಿಳಿಸಿದೆ. ಕೊವಿಡ್ 19ಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚಿಸಲು ಹಲವು ಸಚಿವರು ಸೇರಿ ನಡೆಸಿದ 26ನೇ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ನೇತೃತ್ವವನ್ನು ಆರೋಗ್ಯ ಸಚಿವ ಹರ್ಷವರ್ಧನ್ ವಹಿಸಿದ್ದರು ಎಂದು ಇಲಾಖೆ ಹೇಳಿದೆ.
INSACOG ನೆಟ್ವರ್ಕ್ನಲ್ಲಿ ಸದ್ಯ 10 ಲ್ಯಾಬೋರೇಟರಿಗಳು ಮಾತ್ರ ಇವೆ. ಅದನ್ನೀಗ 17ಕ್ಕೆ ಏರಿಸಲಾಗುವುದು. ಕಳೆದ 26ದಿನಗಳಲ್ಲಿ ಇದೇ ಮೊದಲಬಾರಿಗೆ ದೇಶದಲ್ಲಿ ಇಂದು 3 ಲಕ್ಷಕ್ಕಿಂತಲೂ ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಂದು ಸಕಾರಾತ್ಮಕ ವಿಚಾರ ಎಂದು ಹರ್ಷವರ್ಧನ್ ತಿಳಿಸಿದ್ದಾರೆ. ಅಲ್ಲದೆ, ಡಿಆರ್‌ಡಿಒ 2-ಡಿಆಕ್ಸಿ-ಡಿ-ಗ್ಲೂಕೋಸ್ (2ಡಿಜಿ) ಔಷಧವನ್ನು ಅಭಿವೃದ್ಧಿ ಪಡಿಸಿದ್ದರ ಬಗ್ಗೆ ಶ್ಲಾಘಿಸಿದರು. ಡಿಆರ್‌ಡಿಒ ಈ ಔಷಧ ಅಭಿವೃದ್ಧಿ ಪಡಿಸುವ ಕೆಲಸವನ್ನು ಕಳೆದ ವರ್ಷ ಏಪ್ರಿಲ್ನಿಂದ ಪ್ರಾರಂಭ ಮಾಡಿತ್ತು. ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದರು.
ಇನ್ನು ಕೊವಿಡ್ ಸೋಂಕಿಗೆ ತತ್ತರಿಸಿರುವ ರಾಜ್ಯಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದು ಹೇಳಿರುವ ಆರೋಗ್ಯ ಸಚಿವರು,ಇಲ್ಲಿಯವರೆಗೆ 4.22 ಕೋಟಿಗೂ ಅಧಿಕ N95 ಮಾಸ್ಕ್ಗಳು, 1.76 ಕೋಟಿ ಪಿಪಿಇ ಕಿಟ್ಗಳು, 52.64 ಲಕ್ಷ ರೆಮ್ಡೆಸಿವಿರ್ ಇಂಜೆಕ್ಷನ್ ಮತ್ತು 45,066 ವೆಂಟಿಲೇಟರ್ಗಳನ್ನು ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದಿಂದ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜಕೀಯ ನಾಯಕರು ಕೊರೊನಾ ಔಷಧ ಸಂಗ್ರಹಿಸಿಡುವಂತಿಲ್ಲ, ಆರೋಗ್ಯ ಇಲಾಖೆಗೆ ಒಪ್ಪಿಸಬೇಕು: ದೆಹಲಿ ಹೈಕೋರ್ಟ್ ಸೂಚನೆ
ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2ಡಿಜಿ ಔಷಧದ 10 ಸಾವಿರ ಡೋಸ್ ಇಂದು ವಿತರಣೆ