ಐಸಿಎಮ್ಆರ್ ತಜ್ಞರ ಪ್ರಕಾರ ಪ್ಲಾಸ್ಮಾ ಚಿಕಿತ್ಸೆಯಿಂದ ಕೊವಿಡ್-19 ರೋಗಿಗೆ ಯಾವುದೇ ಉಪಯೋಗವಿಲ್ಲ!
ಕೊರೊನಾದಿಂದ ಗುಣಮುಖರಾದವರ ರಕ್ತದ ಪ್ಲಾಸ್ಮಾ ಕಣಗಳನ್ನು ಪಡೆದು ಅವುಗಳನ್ನು ಕೊರೊನಾ ಸೋಕಿನಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯ ದೇಹಕ್ಕೆ ಸೇರಿಸಲಾಗುತ್ತಿತ್ತು . ಕೊರೊನಾದಿಂದ ಗುಣಮುಖರಾದವರ ರಕ್ತದ ಪ್ಲಾಸ್ಮಾ ಕಣಗಳು ಕೊರೊನಾ ವೈರಸ್ ಅನ್ನು ಮೆಟ್ಟಿ ನಿಂತು ಸೋಲಿಸುತ್ತವೆ. ಇದರಿಂದ ಕೊರೊನಾ ರೋಗಿಗಳು ಸೋಂಕಿನಿಂದ ಬೇಗನೇ ಗುಣಮುಖರಾಗುತ್ತಾರೆ ಎಂದು ವೈದ್ಯರು ವ್ಯಾಖ್ಯಾನಿಸುತ್ತಿದ್ದರು.
ನಮ್ಮ ದೇಶದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಸುತ್ತಿರುವ ಪ್ಲಾಸ್ಮಾ ಥೆರಪಿಯಿಂದ ಅವರ ಜೀವ ಉಳಿಸಲು ಸಾಧ್ಯವೇ ಇಲ್ಲ. ಹೀಗಾಗಿ, ಸದ್ಯದಲ್ಲೇ ನಮ್ಮ ದೇಶದಲ್ಲಿ ಕೊರೊನಾ ರೋಗಿಗಳ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಬದಲಾವಣೆ ಆಗಲಿದೆ. ಪ್ಲಾಸ್ಮಾ ಥೆರಪಿಯನ್ನು ನಿಲ್ಲಿಸಲು ಸೂಚಿಸಿ ಹೊಸ ಮಾರ್ಗಸೂಚಿಯನ್ನು ಐಸಿಎಂಆರ್ ಹೊರಡಿಸಲಿದೆ. ಹಾಗಾದರೆ, ಜೀವ ಉಳಿಸುತ್ತೆ ಎಂದೇ ನಂಬಿದ್ದ ಪ್ಲಾಸ್ಮಾ ಚಿಕಿತ್ಸೆ ನಿಲ್ಲಿಸುತ್ತಿರುವುದೇಕೆ? ಇದರ ಬಗ್ಗೆ ತಿಳಿಯುವುದು ಅತ್ಯವಶ್ಯಕವಾಗಿದೆ. ಭಾರತದಲ್ಲಿ ಕೊರೊನಾ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಗೆಳಲ್ಲಿ ಪ್ಲಾಸ್ಮಾ ಥೆರಪಿ ಸಹ ಒಂದು. ಪ್ಲಾಸ್ಮಾ ಥೆರಪಿಯಿಂದ ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ರೋಗಿಗಳ ಪ್ರಾಣ ಉಳಿಸಬಹುದೆಂದು ವೈದ್ಯರು ಈ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಪ್ಲಾಸ್ಮಾ ಥೆರಪಿಯನ್ನು ಕೊರೊನಾ ರೋಗಿಗಳ ವೈದ್ಯಕೀಯ ಚಿಕಿತ್ಸೆಯ ಮಾರ್ಗಸೂಚಿಯಲ್ಲಿ ಸೇರಿಸಿತ್ತು.
ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಕೊರೊನಾದಿಂದ ಗುಣಮುಖರಾದ ವ್ಯಕ್ತಿಗಳ ರಕ್ತದ ಪ್ಲಾಸ್ಮಾವನ್ನು ಸಂಗ್ರಹಿಸಿ ಪ್ಲಾಸ್ಮಾ ಥೆರಪಿ ನೀಡಲು ಸರ್ಕಾರ ಒಪ್ಪಿಗೆ ನೀಡಿತ್ತು. ಕಳೆದೊಂದು ವರ್ಷದಿಂದ ನಮ್ಮ ದೇಶ ಹಾಗೂ ವಿದೇಶಗಳಲ್ಲೂ ಕೂಡ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನೀಡಲಾಗುತ್ತಿದೆ. ಕೊರೊನಾ ವೈರಸ್ನ ಹುಟ್ಟೂರು ಚೀನಾ, ಇಂಗ್ಲೆಂಡ್, ಆಮೆರಿಕಾ ಸೇರಿದಂತೆ ಬಹುತೇಕ ದೇಶಗಳಲ್ಲಿ ಕೊರೊನಾ ರೋಗಿಗಳ ಜೀವ ಉಳಿಸಲು ಅಂತಿಮ ಅಸ್ತ್ರವಾಗಿ ವೈದ್ಯರು ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಿದ್ದಾರೆ. ನಮ್ಮ ದೇಶದಲ್ಲೂ ಕೊರೊನಾದಿಂದ ಗುಣಮುಖರಾದವರು ಬೇರೆಯವರ ಜೀವ ಉಳಿಸಲು ಪ್ಲಾಸ್ಮಾ ಥೆರಪಿಗಾಗಿ ಪ್ಲಾಸ್ಮಾ ದಾನ ಮಾಡುವುದನ್ನು ಪೋತ್ಸಾಹಿಸಲಾಗುತ್ತಿದೆ. ದೆಹಲಿ ಸರ್ಕಾರ ಪ್ಲಾಸ್ಮಾ ದಾನ ಮಾಡಿದವರಿಗೆ ಮೆಚ್ಚುಗೆಯ ಸರ್ಟಿಫಿಕೇಟ್ ನೀಡಿ ಪೋತ್ಸಾಹಿಸುತ್ತಿದೆ
ಪ್ಲಾಸ್ಮಾ ಥೆರಪಿ ಅಂದರೇನು?
ಕೊರೊನಾದಿಂದ ಗುಣಮುಖರಾದವರ ರಕ್ತದ ಪ್ಲಾಸ್ಮಾ ಕಣಗಳನ್ನು ಪಡೆದು ಅವುಗಳನ್ನು ಕೊರೊನಾ ಸೋಕಿನಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯ ದೇಹಕ್ಕೆ ಸೇರಿಸಲಾಗುತ್ತಿತ್ತು . ಕೊರೊನಾದಿಂದ ಗುಣಮುಖರಾದವರ ರಕ್ತದ ಪ್ಲಾಸ್ಮಾ ಕಣಗಳು ಕೊರೊನಾ ವೈರಸ್ ಅನ್ನು ಮೆಟ್ಟಿ ನಿಂತು ಸೋಲಿಸುತ್ತವೆ. ಇದರಿಂದ ಕೊರೊನಾ ರೋಗಿಗಳು ಸೋಂಕಿನಿಂದ ಬೇಗನೇ ಗುಣಮುಖರಾಗುತ್ತಾರೆ ಎಂದು ವೈದ್ಯರು ವ್ಯಾಖ್ಯಾನಿಸುತ್ತಿದ್ದರು. ಕೊರೊನಾದಿಂದ ಗುಣಮುಖರಾದವರ ರಕ್ತದಲ್ಲಿ ಜೀವಂತ ವೈರಸ್ ಅನ್ನು ಸೋಲಿಸುವ ಶಕ್ತಿ, ಸಾಮರ್ಥ್ಯ ಇದೆ ಎಂದು ವೈದ್ಯರು ಅಂದುಕೊಂಡಿದ್ದರು. ಪ್ಲಾಸ್ಮಾ ಥೆರಪಿ ಪಡೆದ ಬಳಿಕ ಅನೇಕರು ಕೊರೊನಾದಿಂದ ಗುಣಮುಖರಾಗಿದ್ದಾರೆ ಎನ್ನುವ ಚಮತ್ಕಾರಗಳನ್ನು ನಾವು ಸಹ ಕೇಳುತ್ತಿದ್ದೆವು.
ಆದರೆ, ಕೊರೊನಾ ವೈರಸ್ ವಿರುದ್ಧ ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯೇ ಅಲ್ಲ. ಪ್ಲಾಸ್ಮಾ ಥೆರಪಿಯಿಂದ ಕೊರೊನಾದಿಂದ ವ್ಯಕ್ತಿಗಳು ಗುಣಮುಖರಾಗಲ್ಲ. ಪ್ಲಾಸ್ಮಾ ಥೆರಪಿಯಿಂದ ವ್ಯಕ್ತಿಗಳ ಜೀವ ಉಳಿದಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಭಾರತದ ಐಸಿಎಂಆರ್ ತಜ್ಞರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ವಾರದಲ್ಲೇ ಐಸಿಎಂಆರ್ ಕೊರೊನಾ ರೋಗಿಗಳ ಚಿಕಿತ್ಸೆಗೆ ಹೊಸ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಿದೆ . ಈ ಪರಿಷ್ಕೃತ ಮಾರ್ಗಸೂಚಿಯಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಕೈ ಬಿಡಲು ನಿರ್ದೇಶನ ನೀಡಲಿದೆ ಎಂದು ತಿಳಿದುಬಂದಿದೆ
ಪ್ಲಾಸ್ಮಾ ಥೆರಪಿಯಿಂದ ಕೊರೊನಾ ರೋಗಿಗಳು ಗುಣಮುಖ ಆಗಿರುವುದಕ್ಕೆ ಸಾಕ್ಷ್ಯವಿಲ್ಲ. ಸದ್ಯ ಲಭ್ಯವಿರುವ ಅಂಕಿಅಂಶಗಳ ಪರಿಶೀಲನೆ ನಡೆಸಿದಾಗ, ಪ್ಲಾಸ್ಮಾ ಥೆರಪಿಯಿಂದ ರೋಗಿಗಳ ಜೀವ ಉಳಿದಿರುವುದಕ್ಕೆ ಸಾಕ್ಷ್ಯ ಸಿಕ್ಕಿಲ್ಲ ಎಂದು ಐಸಿಎಂಆರ್‌ನ ಸಾಂಕ್ರಮಿಕ ರೋಗ, ಸೋಂಕು ವಿಭಾಗದ ಮುಖ್ಯಸ್ಥ ಸಮೀರನ್ ಪಾಂಡಾ ಹೇಳಿದ್ದಾರೆ. ಕೊರೊನಾ ರೋಗಿಗಳಿಗೆ ಸದ್ಯ ನೀಡುತ್ತಿರುವ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನ ಮುಂದುವರಿಸಬೇಕೇ ಬೇಡವೇ ಎನ್ನುವ ಬಗ್ಗೆ ಐಸಿಎಂಆರ್ ತಜ್ಞರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ದೇಶದಲ್ಲಿ ಎಷ್ಟು ಮಂದಿ ಪ್ಲಾಸ್ಮಾ ಥೆರಪಿ ಪಡೆದಿದ್ದಾರೆ. ಪ್ಲಾಸ್ಮಾ ಥೆರಪಿ ಪಡೆದವರ ಪೈಕಿ ಎಷ್ಟು ಮಂದಿ ಕೊರೊನಾ ವೈರಸ್ ನಿಂದ ಮುಕ್ತರಾಗಿ ಕೊರೊನಾ ನೆಗೆಟಿವ್ ಆಗಿದ್ದಾರೆ, ಪ್ಲಾಸ್ಮಾ ಥೆರಪಿ ಪಡೆದವರಿಗೂ, ಪಡೆಯದೇ ಇರುವವರು ಎಷ್ಟು ದಿನಗಳಲ್ಲಿ ಗುಣಮುಖ ಆಗಿದ್ದಾರೆ, ಪ್ಲಾಸ್ಮಾ ಥೆರಪಿಯಿಂದ ಕೊರೊನಾದಿಂದ ಸಾವುನ್ನು ಪಡೆಯಲು ಸಾಧ್ಯವಾಗಿದೆಯೇ, ಎಂಬ ಮಾಹಿತಿ ಅಂಕಿ-ಅಂಶಗಳನ್ನು ಪರಿಶೀಲಿಸಿದ್ದಾರೆ.
ಈ ವೇಳೆ ಪ್ಲಾಸ್ಮಾ ಥೆರಪಿಯಿಂದ ಕೊರೊನಾದಿಂದ ಸಾವುನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದು ಅಂಕಿ-ಅಂಶಗಳಿಂದ ಸಾಬೀತಾಗಿದೆ. ಕಳೆದ ವರ್ಷದ ಏಪ್ರಿಲ್ ನಿಂದ ಜುಲೈವರೆಗೆ 464 ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗ ನಡೆಸಲಾಗಿದೆ. ಇದರ ಬಗ್ಗೆ ಐಸಿಎಂಆರ್ ಅಧ್ಯಯನ ನಡೆಸಿದೆ. ಕಳೆದ ವರ್ಷ ನಡೆದ ಪ್ರಯೋಗದಲ್ಲಿ ಪ್ಲಾಸ್ಮಾ ಥೆರಪಿಯಿಂದ ಕೊರೊನಾ ರೋಗಿಗಳ ಸಾವು ತಪ್ಪಿಸಲು ಸಾಧ್ಯವಾಗಿಲ್ಲ ಎನ್ನುವುದು ಅಧ್ಯಯನದ ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.
ಹೀಗಾಗಿ ದೇಶದಲ್ಲಿ ಕೊರೊನಾ ರೋಗಿಗಳಿಗೆ ನೀಡುತ್ತಿರುವ ಪ್ಲಾಸ್ಮಾ ಥೆರಪಿಯನ್ನು ನಿಲ್ಲಿಸುವುದೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಐಸಿಎಂಆರ್ ತಜ್ಞರು ಬಂದಿದ್ದಾರೆ. ಈ ವಾರದಲ್ಲೇ ಐಸಿಎಂಆರ್ ಕೊರೊನಾ ರೋಗಿಗಳ ಚಿಕಿತ್ಸೆಗೆ ಹೊಸ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಿದೆ . ಈ ಪರಿಷ್ಕೃತ ಮಾರ್ಗಸೂಚಿಯಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಕೈ ಬಿಡಲು ನಿರ್ದೇಶನ ನೀಡಲಿದೆ.
ಇಂಗ್ಲೆಂಡ್ ನಲ್ಲೂ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿಲ್ಲ!
ಭಾರತ ಮಾತ್ರವಲ್ಲದೇ, ಇಂಗ್ಲೆಂಡ್ ನಲ್ಲೂ ಪ್ಲಾಸ್ಮಾ ಥೆರಪಿಯಿಂದ ಕೊರೊನಾ ರೋಗಿಗಳ ಜೀವ ಉಳಿಸಲು ಸಾಧ್ಯವಾಗಿಲ್ಲ ಎನ್ನುವುದು ಅಧ್ಯಯನದಿಂದ ಸಾಬೀತಾಗಿದೆ. ಈ ಬಗ್ಗೆ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ನಲ್ಲಿ ವರದಿ ಪ್ರಕಟವಾಗಿದೆ. ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಪ್ರಕಾರ, ಇಂಗ್ಲೆಂಡ್ ನಲ್ಲೂ ಪ್ಲಾಸ್ಮಾ ಥೆರಪಿ ಪಡೆದವರು ಹಾಗೂ ಪ್ಲಾಸ್ಮಾ ಥೆರಪಿ ಪಡೆಯದೇ ಇರುವವರ ಅಂಕಿ-ಅಂಶಗಳನ್ನ ಹೋಲಿಸಿ ನೋಡಿದಾಗ, ಪ್ಲಾಸ್ಮಾ ಥೆರಪಿಯಿಂದ ರೋಗಿಗಳ ಜೀವ ಉಳಿಸಲು ಸಾಧ್ಯವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇಂಗ್ಲೆಂಡ್ ನಲ್ಲಿ 2020ರ ಮೇ-28ರಿಂದ2021ರ ಜನವರಿ 15ರವರೆಗಿನ ಅಂಕಿ-ಅಂಶಗಳನ್ನು ಕಲೆಹಾಕಿ ಅಧ್ಯಯನ ನಡೆಸಲಾಗಿದೆ. 11,558 ರೋಗಿಗಳ ಪೈಕಿ 5,795 ಮಂದಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿತ್ತು. ಇನ್ನೂಳಿದ 5763 ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನೀಡದೇ, ಸಾಮಾನ್ಯ ಚಿಕಿತ್ಸೆಯನ್ನೇ ನೀಡಲಾಗಿತ್ತು. ಈ ಎರಡು ಗುಂಪುಗಳಲ್ಲಿ 28 ದಿನದ ಅಂತರದಲ್ಲಿ ಸಂಭವಿಸಿದ ಸಾವುಗಳಲ್ಲಿ ಹೇಳಿಕೊಳ್ಳುವಂಥ ಅಂತರವೇನೂ ಇರಲಿಲ್ಲ. ಪ್ಲಾಸ್ಮಾ ಥೆರಪಿ ಪಡೆದವರ ಪೈಕಿ 1399 ಮಂದಿ ಅಂದ್ರೆ, ಶೇ.24 ರಷ್ಟು ಮಂದಿ ಸಾವನ್ನಪ್ಪಿದ್ದರು. ಪ್ಲಾಸ್ಮಾ ಥೆರಪಿ ಪಡೆಯದ ಗುಂಪಿನಲ್ಲಿ 1,408 ಮಂದಿ ಅಂದ್ರೆ, ಶೇ.24 ರಷ್ಟು ಮಂದಿ ಸಾವನ್ನಪ್ಪಿದ್ದರು.
ಇನ್ನು ಆಸ್ಪತ್ರೆಯಿಂದ ಡಿಸಚಾರ್ಚ್ ಆದವರ ಸಂಖ್ಯೆಯಲ್ಲೂ ಅಂಥ ವ್ಯತ್ಯಾಸವೇನೂ ಇರಲಿಲ್ಲ. ಪ್ಲಾಸ್ಮಾ ಥೆರಪಿ ಪಡೆದ 28 ದಿನದೊಳಗೆ 3,832 ಮಂದಿ ಡಿಸಚಾರ್ಜ್ ಆಗಿದ್ದರು. ಇನ್ನೂ ಇದೇ ರೀತಿ ಪ್ಲಾಸ್ಮಾ ಥೆರಪಿ ಪಡೆಯದ 3,822 ಮಂದಿ ಸಾಮಾನ್ಯ ಚಿಕಿತ್ಸೆ ಪಡೆದೇ ಆಸ್ಪತ್ರೆಯಿಂದ ಡಿಸಚಾರ್ಜ್ ಆಗಿದ್ದರು. ಹೀಗಾಗಿ ಇಂಗ್ಲೆಂಡ್ ನಲ್ಲೂ ಪ್ಲಾಸ್ಮಾ ಮಾರ್ಗಸೂಚಿಯಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಕೈ ಬಿಡಲು ನಿರ್ದೇಶನ ನೀಡಲಿದೆ.
ಇದನ್ನೂ ಓದಿ: ಸುಖಾಸುಮ್ಮನೆ RT-PCR ಪರೀಕ್ಷೆ ಅಗತ್ಯವಿಲ್ಲ; ಪ್ರಯೋಗಾಲಯಗಳ ಮೇಲಿನ ಒತ್ತಡ ತಗ್ಗಿಸಲು ICMR ಹೊಸ ಮಾರ್ಗಸೂಚಿ