ಸುಖಾಸುಮ್ಮನೆ RT-PCR ಪರೀಕ್ಷೆ ಅಗತ್ಯವಿಲ್ಲ; ಪ್ರಯೋಗಾಲಯಗಳ ಮೇಲಿನ ಒತ್ತಡ ತಗ್ಗಿಸಲು ICMR ಹೊಸ ಮಾರ್ಗಸೂಚಿ
ಭಾರತದಲ್ಲಿ 2,506 ಮಾಲಿಕ್ಯುಲರ್ ಲ್ಯಾಬೋರೇಟರಿಗಳಿಂದ ಬೇರೆ ಬೇರೆ ಪರೀಕ್ಷೆಗಳನ್ನೂ ಸೇರಿಸಿ ಒಟ್ಟು 15 ಲಕ್ಷ ಪರೀಕ್ಷೆಗಳನ್ನು ಕಡಿಮೆ ಅವಧಿಯಲ್ಲಿ ನಡೆಸುವ ಸಾಮರ್ಥ್ಯವಿದೆ. ಆದರೆ, ಪ್ರಸ್ತುತ RT-PCR ಟೆಸ್ಟ್ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಹಾಗೂ ಪ್ರಯೋಗಾಲಯದ ಸಿಬ್ಬಂದಿ ಕೊರೊನಾ ಸೋಂಕಿಗೆ ತುತ್ತಾಗುತ್ತಿರುವುದು ಪ್ರಯೋಗಾಲಯದ ಮೇಲೆ ಒತ್ತಡ ತರುತ್ತಿದೆ.
ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಅನಿರೀಕ್ಷಿತ ಆಘಾತ ನೀಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಯಶಸ್ವಿಯಾಗಿ ಮೊದಲ ಅಲೆಯನ್ನು ಎದುರಿಸಿದ್ದ ಭಾರತದಲ್ಲೀಗ ವೈದ್ಯಕೀಯ ವ್ಯವಸ್ಥೆಯೇ ಅಲುಗಾಡಲಾರಂಭಿಸಿದೆ. ಸೋಂಕಿತರನ್ನು ಪತ್ತೆ ಹಚ್ಚಿ ಸೋಂಕು ಹಬ್ಬದಂತೆ ತಡೆಯಲು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ RT-PCR ಪರೀಕ್ಷೆಯನ್ನು ಹೆಚ್ಚಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ಈಗ ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವೈದ್ಯಕೀಯ ಪ್ರಯೋಗಾಲಯಗಳ ಮೇಲಿನ ಹೊರೆ ತಪ್ಪಿಸುವ ಸಲುವಾಗಿ RT-PCR ಪರೀಕ್ಷೆ ಪ್ರಮಾಣವನ್ನು ಕಡಿಮೆ ಮಾಡಲು ತಿಳಿಸಿದೆ.
ಅಲ್ಲದೇ, ಯಾವ ಯಾವ ಸಂದರ್ಭಗಳಲ್ಲಿ RT-PCR ಟೆಸ್ಟ್ ಅಗತ್ಯವಿಲ್ಲ ಎಂಬುದನ್ನೂ ICMR ಸ್ಪಷ್ಟವಾಗಿ ಹೇಳಿದೆ. ಈ ನೂತನ ನಿಯಮಾವಳಿ ಪ್ರಕಾರ ಈ ಕೆಳಕಂಡ ಸಂದರ್ಭಗಳಲ್ಲಿ RT-PCR ಪರೀಕ್ಷೆ ಮಾಡಿಸಬೇಕಾಗಿಲ್ಲ.
1. ಯಾವುದೇ ವ್ಯಕ್ತಿಗೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ನಲ್ಲಿ ಪಾಸಿಟಿವ್ ಕಂಡುಬಂದರೆ ಮತ್ತೆ RT-PCR ಪರೀಕ್ಷೆ ಅಗತ್ಯವಿಲ್ಲ 2. ಮೊದಲ ಬಾರಿ RT-PCR ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದ್ದರೆ ಮತ್ತೆ ಮಾಡಿಸಬೇಕಾಗಿಲ್ಲ. 3. 10 ದಿನಗಳ ಹೋಂ ಐಸೋಲೇಷನ್ ಮುಗಿಸಿ ನಂತರದ ಮೂರು ದಿನಗಳಲ್ಲಿ ಯಾವುದೇ ಜ್ವರ ಬಾರದಿದ್ದಲ್ಲಿ RT-PCR ಬೇಡ. 4. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಹೊತ್ತಿನಲ್ಲಿ RT-PCR ಪರೀಕ್ಷೆ ಬೇಕಿಲ್ಲ. 5. ಹೊರರಾಜ್ಯ ಪ್ರಯಾಣಿಕರು RT-PCR ಟೆಸ್ಟ್ ಮಾಡಿಸಬೇಕೆಂದು ರಾಜ್ಯ ಸರ್ಕಾರಗಳು ಹೇಳಿವೆಯಾದರೂ ಅನಗತ್ಯ ಹೊರೆ ತಪ್ಪಿಸುವ ಸಲುವಾಗಿ ಅದನ್ನು ಕೈ ಬಿಡುವಂತೆ ಐಸಿಎಂಆರ್ ಸೂಚಿಸಿದೆ.
ಭಾರತದಲ್ಲಿ 2,506 ಮಾಲಿಕ್ಯುಲರ್ ಲ್ಯಾಬೋರೇಟರಿಗಳಿಂದ ಬೇರೆ ಬೇರೆ ಪರೀಕ್ಷೆಗಳನ್ನೂ ಸೇರಿಸಿ ಒಟ್ಟು 15 ಲಕ್ಷ ಪರೀಕ್ಷೆಗಳನ್ನು ಕಡಿಮೆ ಅವಧಿಯಲ್ಲಿ ನಡೆಸುವ ಸಾಮರ್ಥ್ಯವಿದೆ. ಆದರೆ, ಪ್ರಸ್ತುತ RT-PCR ಟೆಸ್ಟ್ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಹಾಗೂ ಪ್ರಯೋಗಾಲಯದ ಸಿಬ್ಬಂದಿ ಕೊರೊನಾ ಸೋಂಕಿಗೆ ತುತ್ತಾಗುತ್ತಿರುವುದು ಪ್ರಯೋಗಾಲಯದ ಮೇಲೆ ಒತ್ತಡ ತರುತ್ತಿದೆ. ಇದರಿಂದಾಗಿ ಒಂದು RT-PCR ಟೆಸ್ಟ್ ನಡೆಸಿ ಫಲಿತಾಂಶ ಪಡೆಯಲು 72 ಗಂಟೆಗೂ ಅಧಿಕ ಸಮಯ ಬೇಕಾಗುತ್ತಿದೆ. ಇದನ್ನು ತಡೆಗಟ್ಟಬೇಕೆಂದರೆ RT-PCR ಪರೀಕ್ಷೆಗಳನ್ನು ಅಗತ್ಯಕ್ಕನುಸಾರವಾಗಿ ಮಾತ್ರ ಮಾಡಬೇಕೆಂದು ತಿಳಿಸಲಾಗಿದೆ.
ಯಾವಾಗ RT-PCR ಪರೀಕ್ಷೆ ಮಾಡಿಸಬೇಕು? ಯಾವ ವ್ಯಕ್ತಿಗೆ ಸೋಂಕಿನ ಲಕ್ಷಣಗಳಿದ್ದರೂ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ನಲ್ಲಿ ನೆಗೆಟಿವ್ ಬರುತ್ತದೋ ಅವರು RT-PCR ಪರೀಕ್ಷೆ ಮೊರೆ ಹೋಗಬೇಕು.
RAT ಅಥವಾ RT-PCR ಟೆಸ್ಟ್ ನಂತರ ಲಸಿಕೆ ವಿವರ ಕಡ್ಡಾಯ ಇದೇ ವೇಳೆ ಲಸಿಕೆ ವಿವರಕ್ಕೆ ಮಹತ್ವ ನೀಡಿರುವ ಐಸಿಎಂಆರ್ RAT ಅಥವಾ RT-PCR ಪರೀಕ್ಷೆ ಬಳಿಕ ಕೊರೊನಾ ಲಸಿಕೆ ವಿವರವನ್ನು ಕಡ್ಡಾಯವಾಗಿ ದಾಖಲಿಸುವಂತೆ ಸೂಚಿಸಿದೆ. ಲಸಿಕೆ ಪಡೆದ ವ್ಯಕ್ತಿಗೆ ಸೋಂಕು ತಗುಲಿದೆಯೋ? ಇಲ್ಲವೋ? ಎಂದು ಅರಿತುಕೊಳ್ಳುವ ಸಲುವಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ.