ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯ ಗೌಡ ವಂಚನೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದ ಕಾಂಗ್ರೆಸ್ ನಾಯಕ, ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾದರು. ಬೆಂಗಳೂರಿನ ಇಡಿ ಕಚೇರಿಗೆ ಆಗಮಿಸಿದ ಅವರು ವಿಚಾರಣೆ ಎದುರಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿ, ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಬೆಂಗಳೂರು, ಜುಲೈ 8: ಐಶ್ವರ್ಯಾ ಗೌಡಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಪುನರುಚ್ಚರಿಸಿದರು. ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗೆ ಹಾಜರಾದ ನಂತರ ಮಾತನಾಡಿದ ಅವರು, ಅನ್ಯಾಯಕ್ಕೆ ಒಳಗಾಗಿದ್ದವರು ಏನು ಮಾಹಿತಿ ಕೊಟ್ಟಿದ್ದಾರೋ ಗೊತ್ತಿಲ್ಲ. ಇಡಿ ಅಧಿಕಾರಿಗಳು ನನ್ನನ್ನು ಕರೆದಿದ್ದಕ್ಕೆ ಬಂದು ಹೇಳಿಕೆ ನೀಡಿದ್ದೇನೆ. ವೈಯಕ್ತಿಕ ಆಸ್ತಿ ಮತ್ತು ದಾಖಲೆ ಕೇಳಿದ್ದರು, ಅದನ್ನು ಕೊಟ್ಟಿದ್ದೇನೆ. ಹೇಗೆ ಈ ಪ್ರಕರಣಕ್ಕೆ ನನ್ನ ಲಿಂಕ್ ಮಾಡಿದ್ದರೋ ಗೊತ್ತಿಲ್ಲ. ಕೊಟ್ಟಿರುವ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. ಮತ್ತೆ ವಿಚಾರಣೆಗೆ ಕರೆದಿಲ್ಲ ಎಂದು ತಿಳಿಸಿದರು. ಕೆಲವು ದಿನಗಳ ಹಿಂದಷ್ಟೇ ಡಿಕೆ ಸುರೇಶ್ ಇಡಿ ವಿಚಾರಣೆಗೆ ಹಾಜರಾಗಿದ್ದರು.