ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡೋದು ಒಬ್ಬರಲ್ಲ, ಮೂವರು ಸೆಲೆಬ್ರಿಟಿಗಳು
3 ತಿಂಗಳಿಗೆ ಬದಲಾಗಿ, ಬರೋಬ್ಬರಿ 5 ತಿಂಗಳ ಕಾಲ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯಲಿದೆ. ಆದ್ದರಿಂದ ಮೂವರು ಸೆಲೆಬ್ರಿಟಿಗಳಿಗೆ ಈ ಬಾರಿ ನಿರೂಪಣೆಯ ಜವಾಬ್ದಾರಿ ನೀಡಲು ತೀರ್ಮಾನಿಸಲಾಗಿದೆ. ಆದರೆ ಈ ಬಗ್ಗೆ ಆಯೋಜಕರು ಇನ್ನೂ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳುವುದು ಬಾಕಿ ಇದೆ.

ವರ್ಷದಿಂದ ವರ್ಷಕ್ಕೆ ಬಿಗ್ ಬಾಸ್ (Bigg Boss) ಕಾರ್ಯಕ್ರಮದ ಸ್ವರೂಪ ಬದಲಾಗುತ್ತಿದೆ. ಪ್ರತಿ ವರ್ಷ ಕೆಲವು ಹೊಸ ವಿಷಯಗಳನ್ನು ಈ ಶೋನಲ್ಲಿ ಪರಿಚಯಿಸಲಾಗುತ್ತಿದೆ. ಒಂದಷ್ಟು ಪ್ರಯೋಗಗಳನ್ನು ಕೂಡ ಮಾಡಲಾಗುತ್ತದೆ. ವಿವಿಧ ಥೀಮ್ನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತದೆ. ಎಲ್ಲ ಭಾಷೆಯಲ್ಲಿಯೂ ಈ ಶೋ ಫೇಮಸ್ ಆಗಿದೆ. ಈ ವರ್ಷದ ಬಿಗ್ ಬಾಸ್ ಹೊಸ ಸೀಸನ್ (Bigg Boss 19) ಆರಂಭಕ್ಕೆ ತಯಾರಿ ನಡೆಯುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ (Salman Khan) ಅವರು ಎಂದಿನಂತೆ ಶೋ ನಡೆಸಿಕೊಡಲಿದ್ದಾರೆ. ಆದರೆ ಅವರ ಜೊತೆ ಇನ್ನೂ ಇಬ್ಬರು ನಿರೂಪಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹಿಂದಿ ಬಿಗ್ ಬಾಸ್ ಈವರೆಗೂ 18 ಸೀಸನ್ಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಈಗ 19ನೇ ಸೀಸನ್ಗೆ ಸಿದ್ಧತೆ ನಡೆಯುತ್ತಿದೆ. ವಿಶೇಷ ಏನೆಂದರೆ, ಇಷ್ಟು ವರ್ಷಗಳ ಕಾಲ ಕೇವಲ 3 ತಿಂಗಳು ನಡೆಯುತ್ತಿದ್ದ ಈ ರಿಯಾಲಿಟಿ ಶೋ ಅನ್ನು ಈ ಬಾರಿ 5 ತಿಂಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ! ಅದಕ್ಕಾಗಿ ಮೂವರು ನಿರೂಪಕರಿಗೆ ಶೋ ನಡೆಸಿಕೊಡುವ ಜವಾಬ್ದಾರಿ ನೀಡಲಾಗುತ್ತದೆ ಎಂಬ ಸುದ್ದಿ ಕೇಳಿಬಂದಿದೆ.
ಎಂದಿನಂತೆ ಸಲ್ಮಾನ್ ಖಾನ್ ಅವರು 3 ತಿಂಗಳ ಕಾಲಾವಧಿಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಇನ್ನು ಹೆಚ್ಚುವರಿ ಎರಡು ತಿಂಗಳು ಶೋ ನಡೆಸಿಕೊಡಲು ಇನ್ನಿಬ್ಬರು ಸೆಲೆಬ್ರಿಟಿಗಳ ಮೊರೆ ಹೋಗಲಾಗುತ್ತಿದೆ. ವರದಿಗಳ ಪ್ರಕಾರ, ಕರಣ್ ಜೋಹರ್ ಮತ್ತು ಅನಿಲ್ ಕಪೂರ್ ಅವರಿಗೆ ಈ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಬಿಗ್ ಬಾಸ್ ಆಯೋಜಕರು ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಸದ್ಯಕ್ಕೆ ಈ ಎಲ್ಲ ಮಾಹಿತಿ ಅಂತೆ-ಕಂತೆಗಳ ಹಂತದಲ್ಲಿದೆ. ಈ ಬಾರಿ ಒಟಿಟಿಗೆ ಹೆಚ್ಚು ಆದ್ಯತೆ ನೀಡಲು ತೀರ್ಮಾನಿಸಿದಂತಿದೆ. ಆದರೆ ಟಿವಿಯಲ್ಲಿ ಪ್ರಸಾರ ಆಗುವುದಕ್ಕಿಂತ ಒಂದೆರಡು ಗಂಟೆಗಳ ಮುಂಚೆ ಒಟಿಟಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗಲಿದೆ. ಯಾವ ಸ್ಪರ್ಧಿಗಳಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹೊಸ ಸೀಸನ್ ನೋಡಲು ವೀಕ್ಷಕರು ಕಾದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಬಗ್ಗೆ ಸುದೀಪ್ಗೆ ಇದ್ದ ಅಸಮಾಧಾನ ಏನು? ನೇರವಾಗಿ ವಿವರಿಸಿದ ಕಿಚ್ಚ
ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ನಡೆಸಿಕೊಡಲಿದ್ದಾರೆ. ಇನ್ಮುಂದೆ ತಾವು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದು ಕಳೆದ ವರ್ಷ ಸುದೀಪ್ ಅವರು ಹೇಳಿದ್ದರು. ಆದರೆ ನಂತರ ಮನಸ್ಸು ಬದಲಾಯಿಸಿದರು. ಇದರಿಂದ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಇತ್ತೀಚೆಗೆ ಮಾಹಿತಿ ನೀಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




