ಕಾರು ಲಾಕ್ ಮಾಡಿ ದೇವಸ್ಥಾನದ ಪೂಜೆಗೆ ಹೋದ ಮಾಲೀಕ; ಉಸಿರುಗಟ್ಟಿ ಕಾರೊಳಗೆ ನಾಯಿ ಸಾವು
ವೃಂದಾವನ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಕುಟುಂಬಸ್ಥರು ಕಾರನ್ನು ಲಾಕ್ ಮಾಡಿ ದೇವಸ್ಥಾನಕ್ಕೆ ಹೋಗಿದ್ದರು. ಆಗ ಕಾರಿನ ಒಳಗಿದ್ದ ನಾಯಿ ಉಸಿರಾಡಲಾಗದೆ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಂಪೂರ್ಣ ಬಂದ್ ಆಗಿದ್ದ ಕಾರಿನೊಳಗೆ ಉಸಿರುಗಟ್ಟಿ ಒದ್ದಾಡುತ್ತಿದ್ದ ನಾಯಿಯನ್ನು ಕಂಡು ಪಾರ್ಕಿಂಗ್ ಸಿಬ್ಬಂದಿ ಕಾರು ಓಪನ್ ಮಾಡಿದ್ದಾರೆ. ಅಮಾನವೀಯ ರೀತಿಯಲ್ಲಿ ನಾಯಿಯನ್ನು ಲಾಕ್ ಆದ ಕಾರೊಳಗೆ ಬಿಟ್ಟುಹೋಗಿದ್ದ ಮಾಲೀಕರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ನವದೆಹಲಿ, ಜುಲೈ 8: ವೃಂದಾವನದಲ್ಲಿ ನಡೆದ ದುರಂತ ಘಟನೆಯಲ್ಲಿ ಬಂಕೆ ಬಿಹಾರಿ ದೇವಾಲಯಕ್ಕೆ (Banke Bihari Temple) ಭೇಟಿ ನೀಡಿದ್ದ ದಂಪತಿ ತಮ್ಮ ಮುದ್ದಿನ ಲ್ಯಾಬ್ರಡಾರ್ ನಾಯಿಯನ್ನು ತಮ್ಮ ಕಾರಿನೊಳಗೆ ಬಿಟ್ಟು ಕಾರು ಲಾಕ್ ಮಾಡಿ ಹೋಗಿದ್ದರು. ಕಾರಿನೊಳಗೆ ಗಾಳಿಯಾಡದ ಹಿನ್ನೆಲೆಯಲ್ಲಿ ಬಿಸಿಲ ಶಾಖದಿಂದ ನಾಯಿ ಉಸಿರಾಡಲಾಗದೆ, ಕುಡಿಯಲು ನೀರು ಕೂಡ ಸಿಗದೆ ಸಾವನ್ನಪ್ಪಿದೆ. ಕಾರಿನೊಳಗೆ ಒದ್ದಾಡುತ್ತಿದ್ದ ನಾಯಿಯನ್ನು ನೋಡಿದ ಪಾರ್ಕಿಂಗ್ ಸಿಬ್ಬಂದಿ ಅದನ್ನು ಕಾಪಾಡಲು ಮಾಡಿದ ಪ್ರಯತ್ನಗಳ ಹೊರತಾಗಿಯೂ ನಾಯಿಯನ್ನು ಉಳಿಸಲಾಗಲಿಲ್ಲ. ವೃಂದಾವನದ ಶ್ರೀಯಾದ್ ಆಸ್ಪತ್ರೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕಾರಿನ ಒಳಗಿನಿಂದ ನಾಯಿಯ ಕಿರುಚಾಟ ಕೇಳಿ ಹತ್ತಿರದ ಜನರು ತಕ್ಷಣ ಬಾಗಿಲು ತೆರೆಯಲು ಪ್ರಯತ್ನಿಸಿದರು. ಆದರೆ ಅದು ಲಾಕ್ ಆಗಿತ್ತು. ಒದ್ದಾಡುತ್ತಿರುವ ನಾಯಿಯನ್ನು ರಕ್ಷಿಸಲು ಕೆಲವರು ಕಿಟಕಿ ಒಡೆಯಲು ಸೂಚಿಸಿದರು. ಇನ್ನು ಕೆಲವರು ಮೆಕ್ಯಾನಿಕ್‌ಗೆ ಕರೆ ಮಾಡಿದರು. ಕೊನೆಗೆ ಕಾರಿನ ಬಾಗಿಲು ತೆರೆಯುವ ಹೊತ್ತಿಗೆ ನಾಯಿ ಅರ್ಧ ಸತ್ತಿತ್ತು. ಜನರು ತಕ್ಷಣ ನಾಯಿಯನ್ನು ಹೊರಗೆ ಎಳೆದು ಅದಕ್ಕೆ ನೀರು ಹಾಕಿ, ನೀರು ಕುಡಿಸಿದರೂ ನಾಯಿ ಬದುಕಲಿಲ್ಲ.
ಇದನ್ನೂ ಓದಿ: ಪ್ರವಾಹಪೀಡಿತರಿಗೆ ಪರಿಹಾರ ನೀಡಲು ನಾನು ಸಚಿವೆಯಲ್ಲ; ವಿವಾದಕ್ಕೀಡಾದ ಸಂಸದೆ ಕಂಗನಾ ರಣಾವತ್
ಕಾರಿನ ಮಾಲೀಕರು ದೇವಸ್ಥಾನಕ್ಕೆ ಹೋಗುವಾಗ ಅಲ್ಲಿದ್ದ ಸ್ಥಳೀಯರು ಕಾರು ಮಾಲೀಕರಿಗೆ ಆ ನಾಯಿಯನ್ನು ಹೊರಗೆ ಕಟ್ಟುವಂತೆ ಸೂಚಿಸಿದ್ದರು. ಆದರೆ, ನಾಯಿ ಹೊರಗೆ ಸುರಕ್ಷಿತವಾಗಿರುವುದಿಲ್ಲ ಎಂದು ಅವರು ಕಾರಿನೊಳಗೆ ಬಿಟ್ಟು ಹೋಗಿದ್ದರು. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉಸಿರುಗಟ್ಟಿದ ಕಾರಿನೊಳಗೆ ಹೋರಾಡುತ್ತಿರುವ ನಾಯಿಯ ವಿಡಿಯೋ ನೋಡುಗರನ್ನು ಕಣ್ಣೀರು ಸುರಿಸುವಂತೆ ಮಾಡಿತು.
#SHOCKING : Dog Suffocates in Car While Family Worships at Banke Bihari
In a tragic incident in Vrindavan, a couple left their Labrador dog locked inside their car while they visited the Banke Bihari Temple. The dog succumbed to heatstroke and dehydration. Despite efforts by a… pic.twitter.com/FHaDi1arde
— upuknews (@upuknews1) July 8, 2025
ಇದನ್ನೂ ಓದಿ: ವಾಮಾಚಾರದ ಆರೋಪ; ಬಿಹಾರದ ಪುರ್ನಿಯಾದಲ್ಲಿ ಒಂದೇ ಕುಟುಂಬದ ಐವರ ಸಜೀವ ದಹನ
ವೈದ್ಯರ ವರದಿಗಳ ಪ್ರಕಾರ, ಆ ನಾಯಿಯ ಸಾವಿಗೆ ಕಾರಣ ಉಸಿರುಗಟ್ಟುವಿಕೆ. ಈ ಘಟನೆಯ ನಂತರ, ಸಾರ್ವಜನಿಕರು ಆ ನಾಯಿಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಐತಿಹಾಸಿಕ ತಾಜ್ ಮಹಲ್‌ಗೆ ಪ್ರವಾಸದ ಸಮಯದಲ್ಲಿ ಹರಿಯಾಣದ ವ್ಯಕ್ತಿ ಕಾರಿನೊಳಗೆ ಗಂಟೆಗಟ್ಟಲೆ ನಾಯಿಯನ್ನು ಬಿಟ್ಟು ಹೋದ ನಂತರ ನಾಯಿ ಸಾವನ್ನಪ್ಪಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




