ಹೆಣ್ಣುಮಕ್ಕಳು ರಾತ್ರಿ 10 ಗಂಟೆಯಾದರೂ ಸುರಕ್ಷಿತವಾಗಿ ಓಡಾಡುವಂತಾಗಬೇಕು, ಪುರುಷರ ಮನಸ್ಸಲ್ಲಿ ಭಯ ಹುಟ್ಟಿಸಿ: ಸುಪ್ರೀಂ
ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ಮಹಿಳಾ ಸುರಕ್ಷತೆ ಕುರಿತು ತೀವ್ರ ತರಾಟೆ ತೆಗೆದುಕೊಂಡಿದೆ. ಲೈಂಗಿಕ ದೌರ್ಜನ್ಯ ಎಸಗುವವರ ಮನಸ್ಸಿನಲ್ಲಿ ಸಾವಿನ ಭಯ ಹುಟ್ಟಿಸುವಂತೆ ನಿರ್ದೇಶಿಸಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ಮಹಿಳೆಯರು ರಾತ್ರಿ 10 ಗಂಟೆಯಾದರೂ ಸುರಕ್ಷಿತವಾಗಿ ಓಡಾಡುವ ವಾತಾವರಣ ಸೃಷ್ಟಿಸಲು ಸೂಚಿಸಿದೆ. ಪೊಲೀಸರು ನಿರ್ಲಕ್ಷ್ಯ ವಹಿಸಿರುವುದನ್ನು ಪ್ರಶ್ನಿಸಿ, ಕಠಿಣ ಕ್ರಮಗಳಿಗೆ 4 ವಾರಗಳ ಗಡುವು ನೀಡಿದೆ.

ನವದೆಹಲಿ, ಅಕ್ಟೋಬರ್ 05: ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ ದೆಹಲಿ ಪೊಲೀಸರಿಗೆ ಕಠಿಣ ಸೂಚನೆ ನೀಡಿದೆ. ಲೈಂಗಿಕ ಅಪರಾಧಗಳನ್ನು ಮಾಡುವ ಪ್ರವೃತ್ತಿ ಹೊಂದಿರುವ ಪುರುಷರ ಮನಸ್ಸಿನಲ್ಲಿ ಪ್ರಾಣ ಭಯ ಹುಟ್ಟಬೇಕು.’ಇನ್ನು ಮುಂದೆ ಇಂತಹ ಕೃತ್ಯವೆಸಗಿದರೆ ನಾವು ಖಂಡಿತವಾಗಿಯೂ ಸಾಯುತ್ತೇವೆ’ ಎಂಬ ಭಯವನ್ನು ಪೊಲೀಸರು ಸೃಷ್ಟಿಸಬೇಕು. ಮಹಿಳೆಯರು ರಾತ್ರಿ 10 ಗಂಟೆಯಾದರೂ ಸುರಕ್ಷಿತವಾಗಿ ಹೊರಗೆ ಓಡಾಡುವಂತಾಗಬೇಕು ಎಂದು ಕೋರ್ಟ್ ಹೇಳಿದೆ.
ದಕ್ಷಿಣ ದೆಹಲಿಯ ಲೇಡಿ ಶ್ರೀ ರಾಮ್ (LSR) ಮಹಿಳಾ ಕಾಲೇಜಿನಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಆಸ್ಥಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ನಕಲಿ ಪೊಲೀಸರ ಸೋಗಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿತು. ಆ ಪ್ರದೇಶದಲ್ಲಿ ಈ ಹಿಂದೆಯೇ ಕಿರುಕುಳದ ದೂರುಗಳಿದ್ದರೂ ಪೊಲೀಸರು ಮುನ್ನೆಚ್ಚರಿಕೆ ವಹಿಸದಿರುವುದನ್ನು ಪ್ರಶ್ನಿಸಿತು.
ಸ್ಲೀಪರ್ ಬಸ್ ಹಾಗೂ ಸ್ವರೂಪ್ ನಗರ ಘಟನೆಗಳು
ಗ್ರೇಟರ್ ನೋಯ್ಡಾದಿಂದ ದೆಹಲಿಗೆ ಸುಮಾರು 47 ಕಿ.ಮೀ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಸ್ವರೂಪ್ ನಗರದಲ್ಲಿ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ನ್ಯಾಯಾಲಯ ಪ್ರಸ್ತಾಪಿಸಿ, ಇದು ವ್ಯವಸ್ಥೆಯ ವೈಫಲ್ಯ ಎಂದು ಹೇಳಿತು.
2012ರ ನಿರ್ಭಯಾ ಪ್ರಕರಣದ ಹೋಲಿಕೆ:
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು, “2012ರ ನಿರ್ಭಯಾ ಪ್ರಕರಣದ ಅಪರಾಧಿಗಳು ಸಹ ಅಪರಾಧ ಎಸಗುವ ಮುನ್ನ ಮದ್ಯ ಸೇವಿಸಿ ಸುತ್ತಾಡುತ್ತಿದ್ದರು. ಒಂದು ದಶಕ ಕಳೆದರೂ ಪರಿಸ್ಥಿತಿ ಬದಲಾಗದಿರುವುದು ನೋವಿನ ಸಂಗತಿ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಮತ್ತಷ್ಟು ಓದಿ:
ಜನ್ಮದಿನ ಕರಾಳ ದಿನವಾಯ್ತು; ದೇವಸ್ಥಾನದಿಂದ ಬರುವಾಗ ಕುತ್ತಿಗೆಗೆ ಚಾಕು ಹಿಡಿದು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!
ಕಾಲೇಜುಗಳ ಸುತ್ತ ಕಟ್ಟೆಚ್ಚರಮಹಿಳಾ ಕಾಲೇಜುಗಳ ಸುತ್ತ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವ ಪೋಕರಿಗಳು ಮತ್ತು ಅಲೆಮಾರಿಗಳ ಮೇಲೆ ನಿಗಾ ಇರಿಸಿ ಕಠಿಣ ಕ್ರಮ ಕೈಗೊಳ್ಳುವುದು.ಅಕ್ರಮ ತಿನಿಸುಗಳು/ಢಾಬಾಗಳ ನಿಯಂತ್ರಣಸಮಾಜವಿರೋಧಿ ಶಕ್ತಿಗಳು ಜಮಾಯಿಸಿ ಅಕ್ರಮವಾಗಿ ಮದ್ಯ ಸೇವಿಸುವ ತಿನಿಸುಗಳು ಹಾಗೂ ಅಡ್ಡೆಗಳ ಮೇಲೆ ತಕ್ಷಣವೇ ದಾಳಿ ನಡೆಸುವುದು.
ವಾರ್ರೂಮ್ ಸ್ಥಾಪನೆರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ತುರ್ತು ಸ್ಪಂದನೆಗಾಗಿ ಮೀಸಲಾದ ಸಮಗ್ರ ‘ವಾರ್ ರೂಮ್’ ಕಾರ್ಯನಿರ್ವಹಣೆಯನ್ನು ಚುರುಕುಗೊಳಿಸುವುದು.ಲೈಂಗಿಕ ಅಪರಾಧಿಗಳ ಡೇಟಾಬೇಸ್ರಾಷ್ಟ್ರೀಯ ಲೈಂಗಿಕ ಅಪರಾಧಿಗಳ ಡೇಟಾಬೇಸ್ ಪರಿಶೀಲಿಸಿ, ಹಳೆಯ ಅಪರಾಧಿಗಳು ಮತ್ತು ಶಂಕಿತರ ಚಲನವಲನಗಳ ಮೇಲೆ ನಿರಂತರ ಕಣ್ಗಾವಲು ಇಡುವುದು.
4 ವಾರಗಳ ಗಡುವುಬೀಟ್ ಗಸ್ತು, ಸಿಸಿಟಿವಿ ಕಣ್ಗಾವಲು ಹಾಗೂ ಕತ್ತಲೆಯಿರುವ ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳ ವ್ಯವಸ್ಥೆಯನ್ನು ಬಲಪಡಿಸಿ 4 ವಾರಗಳಲ್ಲಿ ವರದಿ ಸಲ್ಲಿಸುವುದು.ಸಾರ್ವಜನಿಕ ಸ್ಥಳಗಳಲ್ಲಿ ಸಂವಿಧಾನದ 21ನೇ ವಿಧಿಯಡಿ ಮಹಿಳೆಯರ ಘನತೆ ಮತ್ತು ಜೀವಿಸುವ ಹಕ್ಕನ್ನು ರಕ್ಷಿಸುವುದು ಆಡಳಿತ ಹಾಗೂ ಪೊಲೀಸರ ಮೂಲಭೂತ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




