Crime News: ಗಾಜಿಯಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು; ಸುಳ್ಳು ಹೇಳಿ ಸಿಕ್ಕಿಬಿದ್ದ ಮಹಿಳೆ

| Updated By: ಸುಷ್ಮಾ ಚಕ್ರೆ

Updated on: Oct 21, 2022 | 10:42 AM

ಅಕ್ಟೋಬರ್ 19ರಂದು ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಐವರು ವ್ಯಕ್ತಿಗಳು ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿತ್ತು.

Crime News: ಗಾಜಿಯಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು; ಸುಳ್ಳು ಹೇಳಿ ಸಿಕ್ಕಿಬಿದ್ದ ಮಹಿಳೆ
ಸಾಂದರ್ಭಿಕ ಚಿತ್ರ
Follow us on

ಗಾಜಿಯಾಬಾದ್: ಗಾಜಿಯಾಬಾದ್​ನಲ್ಲಿ 2 ದಿನಗಳ ಹಿಂದೆ ಬೆಳಕಿಗೆ ಬಂದ ಸಾಮೂಹಿಕ ಅತ್ಯಾಚಾರ (Gang Rape) ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆದರೆ, ಆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಅಚ್ಚರಿಯ ವಿಷಯಗಳು ತಿಳಿದುಬಂದಿವೆ. ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆ ಮಹಿಳೆ ಸುಳ್ಳು ಹೇಳಿದ್ದಾಳೆ ಎಂಬುದು ತನಿಖೆ ವೇಳೆ ಹೊರಬಿದ್ದಿದೆ. ಆಸ್ತಿ ವಿವಾದದ ಕಾರಣದಿಂದ ಮಹಿಳೆಯು ಆ ಪುರುಷರನ್ನು ಬಂಧಿಸಲು ಅತ್ಯಾಚಾರದ ಆರೋಪ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮೀರತ್ ರೇಂಜ್ ಐಜಿ ಪ್ರವೀಣ್ ಕುಮಾರ್ ಹೇಳಿಕೆ ನೀಡಿದ್ದು, ಸದ್ಯ ನಡೆಯುತ್ತಿರುವ ಆಸ್ತಿ ವಿವಾದದಲ್ಲಿ ಆರೋಪಿಯನ್ನು ಸಿಲುಕಿಸಲು ಆ ಮಹಿಳೆ ಆಜಾದ್ ಎಂಬ ವ್ಯಕ್ತಿಯೊಂದಿಗೆ ಸುಳ್ಳು ಕಥೆಯನ್ನು ಹೆಣೆದಿದ್ದಳು ಎಂದಿದ್ದಾರೆ. ಪ್ರಮುಖ ಆರೋಪಿ ಆಜಾದ್ ಮತ್ತು ಆತನ ಸಹಚರರಾದ ಗೌರವ್ ಮತ್ತು ಅಫ್ಜಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸಂಚಿಗೆ ಬಳಸಿದ್ದ ಆಲ್ಟೊ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ಲಾನ್​ಗೆ ಮಹಿಳೆಗೆ ಸಹಾಯ ಮಾಡಿದ ಮೂವರನ್ನು ಬಂಧಿಸಲಾಗಿದ್ದು, ಆಕೆಯ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Breaking: ಮಹಿಳೆಯನ್ನು ಅಪಹರಿಸಿ, 2 ದಿನಗಳ ಕಾಲ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡಿದ ನಾಲ್ವರು ಆರೋಪಿಗಳ ಬಂಧನ

ಅಕ್ಟೋಬರ್ 19ರಂದು ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಐವರು ವ್ಯಕ್ತಿಗಳು ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿತ್ತು. ಆಕೆಯನ್ನು ಗೋಣಿಚೀಲದಲ್ಲಿ ಕೈಕಾಲುಗಳನ್ನು ಕಟ್ಟಿ ರಸ್ತೆಯಲ್ಲಿ ಎಸೆಯಲಾಗಿತ್ತು. ಆ ಮಹಿಳೆ ತನ್ನ ಸಹೋದರನ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಗಾಜಿಯಾಬಾದ್‌ನಿಂದ ಹಿಂತಿರುಗುತ್ತಿದ್ದಳು ಎಂದು ವರದಿಯಾಗಿತ್ತು. ಆಗ ಆಕೆ ಬಸ್ಸಿಗಾಗಿ ಕಾಯುತ್ತಿದ್ದಾಗ, ಸ್ಕಾರ್ಪಿಯೋದಲ್ಲಿ ಬಂದ ಐವರು ಆ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿ ರಸ್ತೆಯಲ್ಲಿ ಎಸೆದು ಹೋಗಿದ್ದರು ಎನ್ನಲಾಗಿತ್ತು.

ಗಾಜಿಯಾಬಾದ್‌ನಿಂದ ದೆಹಲಿಗೆ ಸಂಪರ್ಕ ಕಲ್ಪಿಸುವ ಆಶ್ರಮ ರಸ್ತೆಯ ಬಳಿ ಆಕೆಯ ಸ್ನೇಹಿತರೊಬ್ಬರು ಆಕೆ ಪತ್ತೆಯಾದ ಸ್ಥಳದಲ್ಲಿಯೇ ಫೋನ್ ಸ್ವಿಚ್ ಆಫ್ ಮಾಡಿದ್ದರು ಎಂದು ಮೊಬೈಲ್ ಸಿಗ್ನಲ್ ಟ್ರ್ಯಾಕಿಂಗ್ ತೋರಿಸಿತ್ತು. ಇದು ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಆ ಮಹಿಳೆಯನ್ನು ಗಾಜಿಯಾಬಾದ್ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಳು. ಮೀರತ್‌ನ ಆಸ್ಪತ್ರೆಯಲ್ಲೂ ಆಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಿರಲಿಲ್ಲ. ಆಕೆಯ ಒತ್ತಾಯದ ಮೇರೆಗೆ ಮಹಿಳೆಯನ್ನು ದೆಹಲಿಯ ಜಿಟಿಬಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ದೆಹಲಿಯ ಜಿಟಿಬಿ ಆಸ್ಪತ್ರೆಯ ವೈದ್ಯರು ನಂತರ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ತಿಳಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 am, Fri, 21 October 22