ನವದೆಹಲಿ: ಮನೆಯೊಳಗೆ ಆಟವಾಡುತ್ತಿದ್ದಾಗ 5 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಬಿಸಿ ಸಾಂಬಾರಿನ ಪಾತ್ರೆಗೆ ಬಿದ್ದು, ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಕರಣ್‌ಪುರದ ಸುತಾರಿ ಗ್ರಾಮದಲ್ಲಿ 5 ವರ್ಷದ ಬಾಲಕ ಕುದಿಯುತ್ತಿರುವ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ರೈತ ಸುಶೀಲ್ ಸಿಂಗ್ ಅವರ 5 ವರ್ಷದ ಮಗ ಪ್ರಶಾಂತ್ ಕಾರ್ಯಕ್ರಮಕ್ಕೆ ಅಡುಗೆ ಮಾಡುತ್ತಿದ್ದ ಜಾಗದಲ್ಲಿ ಆಟವಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಆ ಬಾಲಕನ ಮುಂಡನ ಕಾರ್ಯಕ್ರಮದ ಪ್ರಯುಕ್ತ ಮನೆಯಲ್ಲಿ ದೊಡ್ಡ ಪಾತ್ರೆಗಳಲ್ಲಿ ಅಡುಗೆ ಮಾಡಲಾಗುತ್ತಿತ್ತು. ಈ ವೇಳೆ ಗೆಳೆಯರೊಂದಿಗೆ ಆಟವಾಡುತ್ತಿದ್ದ ಆತ ಆಕಸ್ಮಿಕವಾಗಿ ಕುದಿಯುತ್ತಿದ್ದ ಸಾಂಬಾರ್ ಪಾತ್ರೆಗೆ ಬಿದ್ದಿದ್ದಾನೆ. ಅಡುಗೆ ಮನೆಯಲ್ಲಿದ್ದ ಕಿಟಕಿಯ ಮೇಲೆ ಹತ್ತಿ ಕೆಳಗೆ ಹಾರುತ್ತಿದ್ದಾಗ ಆತ ಬ್ಯಾಲೆನ್ಸ್ ತಪ್ಪಿ ಕುದಿಯುತ್ತಿದ್ದ ಪಾತ್ರೆಯೊಳಗೆ ಬಿದ್ದಿದ್ದಾನೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ಬೈಕ್ಗೆ ಲಾರಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಸಾವು; ಮಕ್ಕಳಿಗೆ ಗಾಯ
ಆ ಬಾಲಕನ ಮನೆಯವರೆಲ್ಲ ನೆಂಟರನ್ನು ಸ್ವಾಗತಿಸುವುದರಲ್ಲಿ ಬ್ಯುಸಿಯಾಗಿದ್ದಾಗ ಅಡುಗೆ ಮನೆಯಲ್ಲಿ ಈ ಘಟನೆ ನಡೆದಿದೆ. ವಿಷಯ ಗೊತ್ತಾದ ತಕ್ಷಣ ಆತನನ್ನು ಮೀರತ್‌ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಅಡ್ಮಿಟ್ ಮಾಡುವಷ್ಟರಲ್ಲಿ ಆತ ಸಾವನ್ನಪ್ಪಿದ್ದ. ಶುಭ ಸಮಾರಂಭ ನಡೆಯಬೇಕಾಗಿದ್ದ ಆ ಮನೆಯಲ್ಲಿ ಆ ಬಾಲಕನ ಅಂತ್ಯಕ್ರಿಯೆ ನಡೆಸಲಾಯಿತು.