ಉತ್ತರ ಪ್ರದೇಶ: ಡ್ರಿಪ್ನಲ್ಲಿ ಮೂಸಂಬಿ ರಸ ನೀಡಿರುವುದಾಗಿ ಆರೋಪ, ರೋಗಿ ಸಾವು
ಈ ಕುರಿತು ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಆಸ್ಪತ್ರೆಯಲ್ಲಿ ಡೆಂಗ್ಯೂ ರೋಗಿಗೆ ಪ್ಲೇಟ್‌ಲೆಟ್ ಬದಲಿಗೆ ಸಿಹಿ ನಿಂಬೆ ರಸವನ್ನು ತುಂಬಿಸಿದ ವಿಡಿಯೊ ವೈರಲ್ ಆಗಿದ್ದು, ನನ್ನ ನಿರ್ದೇಶನದ ಮೇರೆಗೆ ಆಸ್ಪತ್ರೆಗೆ ಸೀಲ್ ಮಾಡಿದ್ದು ಪ್ಲೇಟ್‌ಲೆಟ್ ಪ್ಯಾಕೆಟ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ
ಲಖನೌ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನ (Prayagraj)ಖಾಸಗಿ ಆಸ್ಪತ್ರೆಯೊಂದರಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ಡ್ರಿಪ್ ಮೂಲಕ ನೀಡಿದ್ದರಿಂದ ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರು ಸಾವನ್ನಪ್ಪಿದ ಘಟನೆ ವರದಿ ಆಗಿದೆ. ಈ ಬಗ್ಗೆ ಜಿಲ್ಲಾಡಳಿತದ ಪ್ರಾಥಮಿಕ ತನಿಖೆಯ ನಡೆಸಿದ್ದು ಆಸ್ಪತ್ರೆಯ ಅಧಿಕಾರಿಗಳ ಲೋಪವನ್ನು ಬಹಿರಂಗಪಡಿಸಿದ ನಂತರ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೋಗಿಯ ಕುಟುಂಬ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. 32 ವರ್ಷದ ರೋಗಿಯ ಸಂಬಂಧಿಕರಿಗೆ ಪ್ರಯಾಗ್‌ರಾಜ್‌ನಲ್ಲಿರುವ ಗ್ಲೋಬಲ್ ಹಾಸ್ಪಿಟಲ್ ಆಂಡ್ ಟ್ರಾಮಾ ಸೆಂಟರ್‌ನಲ್ಲಿ ‘ಪ್ಲಾಸ್ಮಾ’ ಎಂದು ಗುರುತಿಸಲಾದ ಪ್ಯಾಕ್ನಲ್ಲಿ ಸಿಹಿ ನಿಂಬೆ ರಸವನ್ನು ನೀಡಲಾಗಿದೆ. ರೋಗಿಯ ಕುಟುಂಬವು ಆಸ್ಪತ್ರೆಯಿಂದ ಸರಬರಾಜು ಮಾಡಿದ ಪ್ಯಾಕ್ನ್ನು ಡ್ರಿಪ್ ಹಾಕಿದ ನಂತರ ಅವನ ಸ್ಥಿತಿಯು ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. ರೋಗಿಯನ್ನು ಎರಡನೇ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ನಿಧನರಾದರು. ಈ ಎರಡನೇ ಆಸ್ಪತ್ರೆಯ ವೈದ್ಯರು ‘ಪ್ಲೇಟ್‌ಲೆಟ್’ ಬ್ಯಾಗ್ ನಕಲಿ. ಇದು ರಾಸಾಯನಿಕಗಳು ಮತ್ತು ಸಿಹಿ ಅಥವಾ ಮೂಸಂಬಿ ರಸದ ಮಿಶ್ರಣವಾಗಿದೆ ಎಂದು ಹೇಳಿರುವುದಾಗಿ ಕುಟುಂಬ ತಿಳಿಸಿದೆ.
ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ. ನನ್ನ 26 ವರ್ಷದ ಸಹೋದರಿ ವಿಧವೆಯಾಗಿದ್ದಾಳೆ. ಯೋಗಿ ಆದಿತ್ಯನಾಥ ಸರ್ಕಾರವು ಲೋಪದೋಷಗಳಿಗಾಗಿ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದು ರೋಗಿಯ ಸಂಬಂಧಿ ಸೌರಭ್ ತ್ರಿಪಾಠಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಆಸ್ಪತ್ರೆಯಲ್ಲಿ ಡೆಂಗ್ಯೂ ರೋಗಿಗೆ ಪ್ಲೇಟ್‌ಲೆಟ್ ಬದಲಿಗೆ ಸಿಹಿ ನಿಂಬೆ ರಸವನ್ನು ತುಂಬಿಸಿದ ವಿಡಿಯೊ ವೈರಲ್ ಆಗಿದ್ದು, ನನ್ನ ನಿರ್ದೇಶನದ ಮೇರೆಗೆ ಆಸ್ಪತ್ರೆಗೆ ಸೀಲ್ ಮಾಡಿದ್ದು ಪ್ಲೇಟ್‌ಲೆಟ್ ಪ್ಯಾಕೆಟ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದರೆ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಠಕ್ ಹೇಳಿದ್ದಾರೆ.
ಮುಖ್ಯ ವೈದ್ಯಾಧಿಕಾರಿಗಳ ಸೂಚನೆಯ ಮೇರೆಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, ಮಾದರಿಯನ್ನು ಪರೀಕ್ಷಿಸುವವರೆಗೆ ಹಾಗೆಯೇ ಇರುತ್ತದೆ ಎಂದು ಪ್ರಯಾಗರಾಜ್‌ನ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಆರೋಪವನ್ನು ತಳ್ಳಿಹಾಕಿರುವ ಆಸ್ಪತ್ರೆಯು, ರೋಗಿಗಳ ಸಂಬಂಧಿಕರಿಂದಲೇ ಪ್ಲೇಟ್‌ಲೆಟ್‌ಗಳನ್ನು ಖರೀದಿಸಲಾಗಿದೆ ಎಂದು ಹೇಳಿದೆ. ಆಸ್ಪತ್ರೆಯ ಮಾಲೀಕರು, ರೋಗಿಯ ಪ್ಲೇಟ್‌ಲೆಟ್ ಮಟ್ಟವು 17,000 ಕ್ಕೆ ಇಳಿದಿತ್ತು. ನಂತರ ಅವರ ಸಂಬಂಧಿಕರಿಗೆ ರಕ್ತದ ಪ್ಲೇಟ್‌ಲೆಟ್‌ಗಳನ್ನು ವ್ಯವಸ್ಥೆ ಮಾಡಲು ಕೇಳಲಾಯಿತು. “ಅವರು ಸರ್ಕಾರಿ ಆಸ್ಪತ್ರೆಯಿಂದ ಐದು ಯೂನಿಟ್ ಪ್ಲೇಟ್‌ಲೆಟ್‌ಗಳನ್ನು ತಂದರು. ಮೂರು ಯೂನಿಟ್ ನೀಡಿದ ನಂತರ ರೋಗಿಗೆ ಅಸ್ವಸ್ಥತೆ ಕಾಣಿಸಿತು. ಆದ್ದರಿಂದ ನಾವು ಅದನ್ನು ನಿಲ್ಲಿಸಿದ್ದೇವೆ” ಎಂದು ಆಸ್ಪತ್ರೆಯ ಮಾಲೀಕರು ಹೇಳಿದ್ದು ,ತನಿಖೆಗೆ ಸಹಕರಿಸುವುದಾಗಿ ಹೇಳಿದ್ದೆ.
ಪ್ರಯಾಗ್‌ರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ, ವಿಚಾರಣೆ ನಡೆಯುತ್ತಿದೆ ಮತ್ತು ಪ್ಲೇಟ್‌ಲೆಟ್‌ಗಳನ್ನು ಸಹ ಪರೀಕ್ಷಿಸಲಾಗುವುದು ಎಂದು ಹೇಳಿದರು.
Published On - 8:58 pm, Fri, 21 October 22