ವಿರಾಟ್ ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ

ವಿರಾಟ್ ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ

ಝಾಹಿರ್ ಯೂಸುಫ್
|

Updated on:Dec 28, 2024 | 8:30 AM

India vs Australia: ಮೆಲ್ಬೋರ್ನ್​ನ ಎಂಸಿಜಿ ಮೈದಾನದಲ್ಲಿ ಸ್ಯಾಮ್ ಕೊನ್​ಸ್ಟಾಸ್ ಹಾಗೂ ವಿರಾಟ್ ಕೊಹ್ಲಿ ನಡುವಣ ಜಿದ್ದಾಜಿದ್ದು ಮುಂದುವರೆಯುವ ಲಕ್ಷಣಗಳು ಕಾಣಿಸುತ್ತಿದೆ. ಏಕೆಂದರೆ ಮೊದಲ ಇನಿಂಗ್ಸ್​ನಲ್ಲಿ ತನ್ನನ್ನು ಕೆಣಕಿದ್ದ ಕೊಹ್ಲಿಗೆ ಇದೀಗ ಆಸ್ಟ್ರೇಲಿಯಾದ ಯುವ ದಾಂಡಿಗ ಮೈದಾನದಲ್ಲೇ ತಿರುಗೇಟು ನೀಡಿದ್ದಾರೆ. ಅದು ಸಹ ಆಕ್ರಮಣಕಾರಿ ಸಂಭ್ರಮದೊಂದಿಗೆ ಎಂಬುದು ವಿಶೇಷ.

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗುತ್ತಿದೆ. ಈ ಪಂದ್ಯದ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡದ ಯುವ ಆರಂಭಿಕ ಆಟಗಾರ ಸ್ಯಾಮ್ ಕೊನ್​ಸ್ಟಾಸ್ ಅವರನ್ನು ವಿರಾಟ್ ಕೊಹ್ಲಿ ಟಾರ್ಗೆಟ್ ಮಾಡಿದ್ದರು.

ಆಸ್ಟ್ರೇಲಿಯಾ ತಂಡದ ಮೊದಲ ಇನಿಂಗ್ಸ್​ನ 10ನೇ ಓವರ್ ಮುಕ್ತಾಯದ ವೇಳೆ ಸ್ಯಾಮ್ ಕೊನ್​ಸ್ಟಾಸ್ ಅವರನ್ನು ಭುಜದಿಂದ ಗುದ್ದುವ ಮೂಲಕ ವಿರಾಟ್ ಕೊಹ್ಲಿ ಕೆಣಕಿದ್ದರು. ಇದರ ಬೆನ್ನಲ್ಲೇ ಕೊಹ್ಲಿ ಹಾಗೂ ಸ್ಯಾಮ್ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಅತಿರೇಕದ ವರ್ತನೆಗೆ ವಿರಾಟ್ ಕೊಹ್ಲಿಗೆ ಐಸಿಸಿ ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ವಿಧಿಸಿದೆ. ಅಲ್ಲದೆ ಒಂದು ಡಿಮೆರಿಟ್ ಅಂಕವನ್ನು ಸಹ ನೀಡಿದೆ. ಅಲ್ಲಿಗೆ ಇದು ಮುಗಿಯಿತು ಅಂದುಕೊಂಡರೆ ನಿಮ್ಮ ಊಹೆ ತಪ್ಪು.

ಏಕೆಂದರೆ ಟೀಮ್ ಇಂಡಿಯಾದ ಮೊದಲ ಇನಿಂಗ್ಸ್​ನಲ್ಲಿ ವಿರಾಟ್ ಕೊಹ್ಲಿ (36) ಔಟಾಗುತ್ತಿದ್ದಂತೆ ಸ್ಯಾಮ್ ಕೊನ್​ಸ್ಟಾಮ್ ಸಂಭ್ರಮಿಸಿದ್ದಾರೆ. ಅದು ಸಹ ಆಸ್ಟ್ರೇಲಿಯಾ ಅಭಿಮಾನಿಗಳನ್ನು ಇನ್ನೂ ಜೋರಾಗಿ ಕೂಗಿ ಎನ್ನುವ ಮೂಲಕ ಎಂಬುದು ವಿಶೇಷ.

ಅಂದರೆ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಆಸ್ಟ್ರೇಲಿಯಾ ಫ್ಯಾನ್ಸ್ ಮೂದಲಿಕೆ ಆರಂಭಿಸಿದ್ದರು. ಇದೇ ವೇಳೆ ಸ್ಯಾಮ್ ಕೊನ್​ಸ್ಟಾಸ್ ಅಭಿಮಾನಿಗಳತ್ತ ಕೈ ಮಾಡಿ ಇನ್ನೂ ಜೋರಾಗಿ ಕೂಗುವಂತೆ ತಿಳಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ಅಂದಹಾಗೆ ಇದು ಸ್ಯಾಮ್ ಕೊನ್​ಸ್ಟಾಸ್ ಅವರ ಮೊದಲ ಟೆಸ್ಟ್ ಪಂದ್ಯ. ಚೊಚ್ಚಲ ಪಂದ್ಯದಲ್ಲೇ ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರನನ್ನು ಎದುರು ಹಾಕಿಕೊಳ್ಳುವ ಮೂಲಕ ಸ್ಯಾಮ್ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.

 

 

Published on: Dec 28, 2024 08:30 AM