ಶಿವರಾಜ್ಕುಮಾರ್ ಆಸ್ಪತ್ರೆಯಲ್ಲಿರುವಾಗಲೇ ಬಂತು ದುಃಖದ ಸುದ್ದಿ; ಗೀತಕ್ಕ ಭಾವುಕ ಪತ್ರ
ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಅವರ ಪತ್ನಿ ಗೀತಾ ಅವರು ತಮ್ಮ ಪ್ರೀತಿಯ ನಾಯಿ ನೀಮೋನ ಸಾವಿನ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ನೀಮೋ ಕುಟುಂಬದ ಅವಿಭಾಜ್ಯ ಅಂಗವಾಗಿದ್ದ ಮತ್ತು ಅವರ ಪ್ರೀತಿಯನ್ನು ಹಂಚಿಕೊಂಡಿದ್ದ ಎಂದು ಅವರು ಹೇಳಿದ್ದಾರೆ.
ಶಿವರಾಜ್ಕುಮಾರ್ ಅವರು ಕ್ಯಾನ್ಸರ್ಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅವರು ಸರ್ಜರಿಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿರುವುದು ಖುಷಿಯ ಸುದ್ದಿ ಆದರೆ, ಮತ್ತೊಂದು ದುಃಖದ ಸುದ್ದಿಯೂ ಸಿಕ್ಕಿದೆ. ಈಗ ಗೀತಾ ಅವರು ದುಃಖದ ವಿಚಾರ ಒಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಅವರು ಸಾಕಿದ ಪ್ರೀತಿಯ ಶ್ವಾನ ನಿಧನ ಹೊಂದಿದೆ. ಈ ಬಗ್ಗೆ ಗೀತಾ ಅವರು ಪೋಸ್ಟ್ ಹಾಕಿದ್ದಾರೆ.
‘ನಮ್ಮ ಮನೆಯಲ್ಲಿ ನಾವು ಐದಲ್ಲ, ಆರು ಜನ. ಶಿವಣ್ಣ, ಗೀತಾ, ನಿಶು, ನಿವಿ, ದಿಲೀಪ್ ಮತ್ತು ನನ್ನ ಮರಿ ನೀಮೋ. ನಿಶು ಮದುವೆಗೆ ಮುಂಚೆ ಅವಳ ಬರ್ತ್ಡೇಗೆ ದಿಲೀಪ್ ನಿಮೋನ ಗಿಫ್ಟ್ ಆಗಿ ಕೊಟ್ಟರು. ನಿಶು ಡಾಕ್ಟರ್ ಆಗಿದ್ದರಿಂದ ಅವಳಿಗೆ ನೀಮೋನನ್ನು ನೋಡಿಕೊಳ್ಳಲು ಸಮಯ ಆಗುತ್ತಿರಲಿಲ್ಲ. ಈ ಮೂಲಕ ಅವನು ನಮ್ಮ ಮನೆಯ ಆರನೆಯವನಾದ’ ಎಂದು ಪೋಸ್ಟ್ ಆರಂಭಿಸಿದ್ದಾರೆ ಗೀತಾ ಶಿವರಾಜ್ಕುಮಾರ್.
ಸಾಮಾನ್ಯವಾಗಿ ಸಾಕಿದ ಶ್ವಾನದ ಹಿಂದೆ ಎಲ್ಲರೂ ಓಡುತ್ತಾ ಇರುತ್ತಾರೆ. ಆದರೆ, ಗೀತಕ್ಕನ ಮನೆಯಲ್ಲಿ ಹಾಗಿರಲಿಲ್ಲ. ಗೀತಾ ಅವರ ಹಿಂದೆ ನೀಮೋ ಓಡತ್ತಿದ್ದ. ‘ನಾನು ಕಿಚನ್ನಲ್ಲಿ ಇರುವಾಗ ಅಥವಾ ಮನೆಯಲ್ಲಿ ಎಲ್ಲೇ ಹೋದರೂ ಅವನು ಯಾವಾಗಲೂ ನನ್ನ ಹಿಂದೆ. ನನ್ನ ಕೆಲ್ಸ ಮುಗಿಯುವುದು ಎಷ್ಟೇ ಹೊತ್ತಾದರೂ ಅವನು ಮಾತ್ರ ನನ್ನ ಹಿಂದೆ ಇರುತ್ತಿದ್ದ. ಶಿವಣ್ಣ ಅವರ ಕಾಲ ಬಳಿ ಅಂಟಿಕೊಂಡು, ಆ್ಯಂಗಲ್ ಅಡ್ಡೆಸ್ಟ್ ಮಾಡಿಕೊಂಡು, ನನ್ನ ಮುಖ ಕಾಣೋ ಹಾಗೆ ಕೂರುತ್ತಿದ್ದ ನೀಮೋ’ ಎಂದು ಶ್ವಾನದ ಗುಣಗಾನ ಮಾಡಿದ್ದಾರೆ ಗೀತಾ.
‘ನೀಮೋ ನನ್ನ ಜೀವನದ ಭಾಗ. ನೀಮೋ, ಗೀತಾ ಇಬ್ಬರಲ್ಲ, ನಾವಿಬ್ಬರೂ ಒಂದೇ. ಅವನು ಬೆಳೆಯುವಾಗ ಅವನು ಎಷ್ಟೇ ದೊಡ್ಡವನಾದರೂ ಮಗುವಿನಂತೆ ಆರೈಕೆ ಮಾಡಿ, ಅವನ ಊಟ, ತಿಂಡಿ, ಅವನಿಗೆ ಜ್ವರ ಬಂದರೆ ತಕ್ಷಣ ಟ್ರೇಟ್‌ಮೆಂಟ್, ಅದಾದಮೇಲೆ ಅವನಿಗೆ ಕರೆಕ್ಟ್ ಟೈಮಿಗೆ ಮೆಡಿಸಿನ್, ಹೀಗೆ ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದು ನಿವಿ. ಈಗ ಈ ಮರಿ ನಮ್ಮನ್ನೆಲ್ಲಾ ಬಿಟ್ಟು ದೇವರ ಹತ್ತಿರ ಹೋದ. ನನ್ನ ಮರಿ ನಾನು ಅಮೇರಿಕಾಗೆ ಬಂದ ಮೇಲೆ ನನ್ನನ್ನು ಬಿಟ್ಟು ಹೋದ. ಅವನ ನಿಸ್ವಾರ್ಥ ಪ್ರೀತಿ ಯಾರಿಂದಲೂ ತುಂಬಲು ಸಾಧ್ಯವಾಗುವುದಿಲ್ಲ. ನಾವು ಅಮೇರಿಕಾಗೆ ಬಂದ ಮೇಲೆನೇ ಅವನು ಹೊರಡಬೇಕು ಎಂದು ಅವನು ಡಿಸೈಡ್ ಮಾಡಿದ್ದ ಅನ್ಸುತ್ತೆ’ ಎಂದು ಭಾವುಕರಾಗಿ ಸಾಲುಗಳನ್ನು ಬರೆದುಕೊಂಡಿದ್ದಾರೆ ಗೀತಾ.
View this post on Instagram
‘ಈಗ ಒಂದು ತಿಂಗಳಿಂದ ರಾತ್ರಿ ಶಿವಣ್ಣನಿಗೆ ಅಂಟಿಕೊಂಡು ಮಲಗುತ್ತಿದ್ದ. ಮೊದಲ್ಲೆಲ್ಲಾ ಅವನು ಹೀಗೆ ಮಾಡಿದವನಲ್ಲ. ನೆನ್ನೆ ಮಾತನಾಡುವಾಗ ನಿವಿ ‘ಪಪ್ಪನಿಗೆ ಏನು ಆಗ್ತಾ ಇತ್ತು ಅಂತ ಅವನಿಗೆ ಗೊತ್ತಿತ್ತು ಅನಿಸುತ್ತದೆ, ಅದಕ್ಕೆ ಹಾಗೆ ಮಲಗುತ್ತಿದ್ದ’ ಎಂದಳು. ನನಗೂ ಹಾಗೆ ಅನ್ನಿಸಿತು. ನಾವು ಅಲ್ಲೇ ಇದ್ದರೆ ತುಂಬಾ ಕಷ್ಟ ಪಡ್ತೀವಿ ಹಾಗೂ ಈ ಸಮಯದಲ್ಲಿ ಕಷ್ಟ ಪಡಬಾರದೆಂದು ಕಾದು ನನ್ನ ಮರಿ ನಮ್ಮೆಲ್ಲರನ್ನು ಬಿಟ್ಟು ಹೋದ. ಅವನನ್ನು ನಮ್ಮ ಜೀವನದ ಭಾಗವಾಗಿ ಕರೆದುಕೊಂಡು ಬಂದಿದ್ದು ಹಾಗೂ ಅವನು ಹೊರಡುವಾಗ ಜೊತೆಯಲ್ಲೇ ನಿಂತಿದ್ದು ದಿಲೀಪ್. ನಮ್ಮ ಮನೆಯ ಎಲ್ಲರೂ ನೀಮೋನನ್ನು ಅವರ ಸ್ವಂತ ಮಗುವಿನಂತೆ ನೋಡಿಕೊಂಡಿದ್ದಾರೆ’ ಎಂದಿದ್ದಾರೆ ಗೀತಾ.
ಇದನ್ನೂ ಓದಿ: ತಿರುಪತಿ ಸನ್ನಿಧಾನಕ್ಕೆ ತೆರಳಿ ಮುಡಿ ಕೊಟ್ಟ ಶಿವರಾಜ್ಕುಮಾರ್-ಗೀತಾ
‘ನೀಮೋ ಸದಾ ನಮ್ಮೊಳಗಿದ್ದಾನೆ, ನನ್ನೊಳಗಿದ್ದಾನೆ. ಯಾವಾಗಲೂ ಇರುತ್ತಾನೆ. ಅವನು ಹೋಗಿದ್ದನ್ನು ನಾನು ಕಣ್ಣಲ್ಲಿ ನೋಡಿಲ್ಲ. ನೋಡಿದ್ದರೂ ಅವನು ಹೋಗಿದ್ದಾನೆ ಎಂದು ನಾನು ಎಂದೂ ಒಪ್ಪಿಕೊಳ್ಳಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗೋವಾಗ ನಮ್ಮ ನೋವನ್ನೂ ಅವರ ಜೊತೆಯಲ್ಲಿ ತಗೆದುಕೊಂಡು ಹೋಗುತ್ತಾರಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತಗೊಂಡಿದ್ದಾನೆ’ ಎಂದಿದ್ದಾರೆ ಅವರು. ಈ ಮೂಲಕ ಶಿವರಾಜ್ಕುಮಾರ್ ಚೇತರಿಕೆ ಕಂಡಿದ್ದಾರೆ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:09 pm, Sat, 28 December 24