ಅಕ್ವಾನ್ ಚಂಡಮಾರುತದ ಅಬ್ಬರ; ಒಡಿಶಾದಲ್ಲಿ 72,000 ಜನರ ಸ್ಥಳಾಂತರ, 31 ಎನ್‌ಡಿಆರ್‌ಎಫ್ ತಂಡಗಳ ನಿಯೋಜನೆ
ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡಿರುವ ‘ಅಕ್ವಾನ್’ ಚಂಡಮಾರುತವು ನಾಳೆ ಅಂದರೆ ನವೆಂಬರ್ 20ರ ಮಧ್ಯಾಹ್ನದ ವೇಳೆಗೆ ಉತ್ತರ ಆಂಧ್ರಪ್ರದೇಶವನ್ನು ಹಾದುಹೋಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 24 ದಿನಗಳಲ್ಲಿ ಪೂರ್ವ ಕರಾವಳಿಗೆ ಅಪ್ಪಳಿಸುತ್ತಿರುವ ಮೂರನೇ ಚಂಡಮಾರುತ ಇದಾಗಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾ ಸರ್ಕಾರಗಳು ಕಟ್ಟೆಚ್ಚರ ವಹಿಸಿವೆ. ಈ ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿ ಆಂಧ್ರಪ್ರದೇಶ, ಯಾನಂ ಮತ್ತು ದಕ್ಷಿಣ ಒಡಿಶಾದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆಯು ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ.

ಭುವನೇಶ್ವರ, ನವೆಂಬರ್ 19: ಪೂರ್ವ ಕರಾವಳಿಯತ್ತ ‘ಅಕ್ವಾನ್’ ಚಂಡಮಾರುತವು ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಒಡಿಶಾ ಮತ್ತು ಆಂಧ್ರಪ್ರದೇಶ ಸರ್ಕಾರಗಳು ತುರ್ತು ಸಿದ್ಧತೆಗಳನ್ನು ನಡೆಸಿವೆ. ಅಧಿಕಾರಿಗಳು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದು, ಪರಿಹಾರ ಶಿಬಿರಗಳನ್ನು ಸಜ್ಜುಗೊಳಿಸಿದ್ದಾರೆ ಮತ್ತು ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ನೆರವಾಗಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) 5 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ 31 ತಂಡಗಳನ್ನು ನಿಯೋಜಿಸಿದ್ದು, ಹೆಚ್ಚುವರಿಯಾಗಿ 18 ತಂಡಗಳನ್ನು ಮೀಸಲಿಟ್ಟಿದೆ.
ಅಕ್ವಾನ್ ಚಂಡಮಾರುತವು ಭೂಕುಸಿತ ಉಂಟುಮಾಡುವ ನಿರೀಕ್ಷೆಯಿರುವುದರಿಂದ ಪ್ರಮುಖ ಸ್ಥಳಗಳಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ. ಇಂದು ಮಧ್ಯಾಹ್ನದ ವೇಳೆಗೆ ನರಸಾಪುರ ಮತ್ತು ಪುರಿ ನಡುವಿನ ಉತ್ತರ ಆಂಧ್ರಪ್ರದೇಶ-ಯಾನಂ ಮತ್ತು ದಕ್ಷಿಣ ಒಡಿಶಾ ಕರಾವಳಿಯನ್ನು ಚಂಡಮಾರುತ ಹಾದುಹೋಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
72 ಸಾವಿರ ಜನರ ಸ್ಥಳಾಂತರ:
ಒಡಿಶಾ ಸರ್ಕಾರವು ಸಿದ್ಧತೆಗಳನ್ನು ಚುರುಕುಗೊಳಿಸಿದ್ದು, ಮುಖ್ಯ ಕಾರ್ಯದರ್ಶಿ ಅನು ಗಾರ್ಗ್ ಅವರ ಮಾಹಿತಿಯ ಪ್ರಕಾರ, ಅಪಾಯಕಾರಿ ಪ್ರದೇಶಗಳಿಂದ ಸುಮಾರು 72,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜನರಿಗೆ ಆಶ್ರಯ ನೀಡಲು ರಾಜ್ಯದಲ್ಲಿ ಸುಮಾರು 7,900 ಪರಿಹಾರ ಶಿಬಿರಗಳನ್ನು ಗುರುತಿಸಲಾಗಿದೆ.
ಇದನ್ನೂ ಓದಿ: ಆಂಧ್ರದತ್ತ ಮುನ್ನುಗ್ಗುತ್ತಿರುವ ಮುರಸು ಚಂಡಮಾರುತ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ
ಗರ್ಭಿಣಿಯರಿಗೆ ವಿಶೇಷ ವ್ಯವಸ್ಥೆ:
ತುರ್ತು ಕಾರ್ಯಾಚರಣೆಗಾಗಿ ರಾಜ್ಯದಲ್ಲಿ 60 ಒಡಿಆರ್‌ಎಎಫ್ ತಂಡಗಳು, 14 ಎನ್‌ಡಿಆರ್‌ಎಫ್ ತಂಡಗಳು ಮತ್ತು 131 ಅಗ್ನಿಶಾಮಕ ದಳದ ತಂಡಗಳನ್ನು ನಿಯೋಜಿಸಲಾಗಿದೆ. ಗರ್ಭಿಣಿಯರು, ವಿಕಲಚೇತನ, ವೃದ್ಧ ನಿವಾಸಿಗಳಿಗೆ ಅಧಿಕಾರಿಗಳು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ರಾಜ್ಯದಲ್ಲಿ ಗುರುತಿಸಲಾದ 9,000 ಗರ್ಭಿಣಿಯರ ಪೈಕಿ ಹೆಚ್ಚಿನವರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಹವಾಮಾನ ಪರಿಸ್ಥಿತಿ ಮತ್ತು ಸ್ಥಳೀಯ ಅಪಾಯದ ಮೌಲ್ಯಮಾಪನವನ್ನು ಆಧರಿಸಿ, 8 ಜಿಲ್ಲೆಗಳ ಸುಮಾರು 2.4 ಲಕ್ಷ ಜನರನ್ನು ಸ್ಥಳಾಂತರಿಸಬೇಕಾಗಬಹುದು ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಒಡಿಶಾ ರಾಜ್ಯದಲ್ಲಿ 87 ಅಪಾಯಕಾರಿ ಬ್ಲಾಕ್‌ಗಳು ಮತ್ತು 1,902 ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳ ಸಿದ್ಧತೆ:
ಆಂಧ್ರಪ್ರದೇಶ ಸರ್ಕಾರವು ತುರ್ತು ಪರಿಸ್ಥಿತಿಗಳನ್ನು ಎದುರಿಸಲು 13 ಎನ್‌ಡಿಆರ್‌ಎಫ್ ತಂಡಗಳು ಮತ್ತು 11 ಎಸ್‌ಡಿಆರ್‌ಎಫ್ ತಂಡಗಳನ್ನು ಸನ್ನದ್ಧವಾಗಿ ಇರಿಸಿದೆ. ಜಿಲ್ಲಾ ಮತ್ತು ಮಂಡಲ ನಿಯಂತ್ರಣ ಕೊಠಡಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಅಸುರಕ್ಷಿತ ಸ್ಥಳಗಳಿಂದ ನಿವಾಸಿಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯನ್ನೂ ಸಿದ್ಧವಾಗಿ ಇರಿಸಲಾಗಿದೆ.
ವಿದ್ಯುತ್ ಮೂಲಸೌಕರ್ಯಕ್ಕೆ ಉಂಟಾಗಬಹುದಾದ ಸಂಭವನೀಯ ಹಾನಿಯನ್ನು ನಿಭಾಯಿಸಲು ವಿದ್ಯುತ್ ವಿತರಣಾ ಕಂಪನಿಗಳು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿದ್ದು, ತುರ್ತು ತಂಡಗಳನ್ನು ನಿಯೋಜಿಸಿವೆ. ಕರಾವಳಿ ಪ್ರದೇಶದ ನಿವಾಸಿಗಳು ಮನೆಯೊಳಗೆಯೇ ಇರಲು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಮುರಸು ಚಂಡಮಾರುತ: ನವೆಂಬರ್ 3ರ ಬೆಳಗಿನ ಜಾವ ಆಂಧ್ರಕ್ಕೆ ಅಪ್ಪಳಿಸುವ ಸಾಧ್ಯತೆ, ತಮಿಳುನಾಡು, ಒಡಿಶಾದಲ್ಲೂ ಕಟ್ಟೆಚ್ಚರ
ಎನ್‌ಡಿಆರ್‌ಎಫ್ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಢ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಒಟ್ಟು 31 ತಂಡಗಳನ್ನು ನಿಯೋಜಿಸಿದೆ. ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ತಲಾ 3 ತಂಡಗಳನ್ನು ನಿಯೋಜಿಸಲಾಗಿದೆ. ಛತ್ತೀಸ್‌ಗಢ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ತಲಾ 1 ತಂಡವನ್ನು ನಿಯೋಜಿಸಲಾಗಿದೆ. ತುರ್ತು ನಿಯೋಜನೆ ಮತ್ತು ಬೆಂಬಲಕ್ಕಾಗಿ ಇನ್ನೂ ೧೮ ತಂಡಗಳನ್ನು ಮೀಸಲಿರಿಸಲಾಗಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ:
ಪೂರ್ವ ಕರಾವಳಿಯುದ್ದಕ್ಕೂ ಪ್ರತಿಕೂಲ ಹವಾಮಾನ ಇರುವ ನಿರೀಕ್ಷೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಸುಧಾರಿಸುವವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ದಡದಲ್ಲಿಯೇ ಇರುವಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




