ಮುಂಬೈ: ಉದ್ಯಮಿ ಸೈರಸ್ ಮಿಸ್ತ್ರಿ (Cyrus Mistry) ಅವರನ್ನು ಹೊತ್ತ ಕಾರು ಅಪಘಾತಕ್ಕೊಳಗಾಗುವ ಕೇವಲ 5 ಸೆಕೆಂಡು ಮೊದಲು ಬ್ರೇಕ್ ಗಳನ್ನು (brakes) ಅದುಮಲಾಗಿತ್ತು ಐಷಾರಾಮಿ ಕಾರು ತಯಾರಿಕಾ ಸಂಸ್ಥೆಯು ಪಾಲ್ಘರ್ ಪೊಲೀಸ್ ಗೆ (Palghar police) ನೀಡಿರುವ ತನ್ನ ಮಧ್ಯಂತರ ವರದಿಯಲ್ಲಿ ತಿಳಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮರ್ಸಿಡಿಸ್-ಬೆಂಜ್ ಕಂಪನಿಯ ತಜ್ಞರ ತಂಡವೊಂದು ಸೋಮವಾರದಂದು ಹಾಂಗ್ ಕಾಂಗ್ ನಿಂದ ಮುಂಬೈಗೆ ಆಗಮಿಸಿ ಅಪಘಾತಕ್ಕೊಳಗಾದ ಕಾರಿನ ತಪಾಸಣೆ ನಡೆಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಏತನ್ಮಧ್ಯೆ, ಜರ್ಮನಿ ಮೂಲದ ಕಾರು ಉತ್ಪಾದನಾ ಸಂಸ್ಥೆಯು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತನಿಕಾಧಿಕಾರಿಗಳೊಂದಿಗೆ ಸಹಕರಿಸುತ್ತಿರುವುದಾಗಿ ಹೇಳಿದ್ದು ತಾನು ಗ್ರಾಹಕರ ಖಾಸಗಿತನ ಮತ್ತಯ ಗೌಪ್ಯತೆಯನ್ನು ಗೌರವಿಸುವುದರಿಂದ ಅಪಘಾತಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಕೇವಲ ಪೊಲೀಸ್ ಅಧಿಕಾರಿಗಳೊಂದಿಗೆ ಮಾತ್ರ ಶೇರ್ ಮಾಡುವುದಾಗಿ ಹೇಳಿದೆ.
ರವಿವಾರ ಮಧ್ಯಾಹ್ನ ಪಾಲ್ಘಾರ್ ಜಿಲ್ಲೆಯಲ್ಲಿ ಮಿಸ್ತ್ರಿ (54) ಅವರ ಕಾರು ರಸ್ತೆ ವಿಭಜಕವೊಂದಕ್ಕೆ ಡಿಕ್ಕಿ ಹೊಡೆದ ಕಾರಣ ಅವರು ಮತ್ತು ಅವರ ಸ್ನೇಹಿತ ಜಹಾಂಗೀರ್ ಪಂಡೋಲಿ ಸಾವನ್ನಪ್ಪಿದರು.
ಕಾರನ್ನು ಓಡಿಸುತ್ತಿದ್ದ ಅನಹಿತಾ ಪಂಡೋಲೆ (55) ಮತ್ತು ಅವರ ಪತಿ ಡೇರಿಯಸ್ ಪಂಡೋಲೆ (60) ಗಾಯಗೊಳಗಾಗಿದ್ದು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರೆಲ್ಲ ಗುಜರಾತ್ ನಿಂದ ಮುಂಬೈಗೆ ಬರುತ್ತಿದ್ದಾಗ, ಸೂರ್ಯ ನದಿ ಸೇತುವೆ ಮೇಲೆ ಅಪಘಾತ ಸಂಭವಿಸಿತ್ತು.
‘ಮರ್ಸಿಡಿಸ್-ಬೆಂಜ್ ಕಂಪನಿಯು ತನ್ನ ಮಧ್ಯಂತರ ವರದಿಯನ್ನು ಪೊಲೀಸ್ ಗೆ ಸಲ್ಲಿಸಿದೆ. ವರದಿಯಲ್ಲಿ ಉಲ್ಲಖಿಸಲಾಗಿರುವ ಪ್ರಕಾರ ಅಪಘಾತಕ್ಕೆ ಕೆಲ ಸೆಕೆಂಡುಗಳಷ್ಟು ಮೊದಲು ಕಾರು ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಮತ್ತು ಅದರ ವೇಗ 89 ಕಿಮೀ/ಗಂಟೆ ಆದಾಗ ಸೇತುವೆ ಮೇಲಿನ ರಸ್ತೆ ವಿಭಜಕಕ್ಕೆ ಅದು ಡಿಕ್ಕಿ ಹೊಡೆಯಿತು,’ ಎಂದು ಪಾಲ್ಘಾರ್ ಪೊಲೀಸ್ ವರಿಷ್ಠಾಧಿಕಾರಿ ಬಾಳಾಸಾಹೇಬ್ ಪಾಟೀಲ್ ಹೇಳಿದ್ದಾರೆ.
ಡಿಕ್ಕಿ ಸಂಭವಿಸುವ 5 ಸೆಕೆಂಡು ಮೊದಲು ಬ್ರೇಕ್ ಗಳನ್ನು ಅದುಮಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿ ಓ) ಸಹ ವರದಿಯೊಂದನ್ನು ಸಲ್ಲಿಸಿದ್ದು ಕಾರಿನಲ್ಲಿದ್ದ 4 ಏರ್ ಬ್ಯಾಗ್ ಗಳು-ಚಾಲಕನ ಸೀಟಿಗೆ ಅಳವಡಿಸಿದ್ದ ಮೂರು ಮತ್ತು ಅದರ ಪಕ್ಕದ ಸೀಟಿಗೆ ಅಳವಡಿಸಿದ್ದ 1-ಅಪಘಾತದ ನಂತರ ಬಿಚ್ಚಿಕೊಂಡವು ಅಂತ ಹೇಳಿದೆ, ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
‘ಮರ್ಸಿಡಿಸ್-ಬೆಂಜ್ ಕಂಪನಿಯ ತಜ್ಞರ ತಂಡವೊಂದು ಸೆಪ್ಟೆಂಬರ್ 12 ರಂದು ಹಾಂಗ್ ಕಾಂಗ್ ನಿಂದ ಮುಂಬೈಗೆ ಆಗಮಿಸಿ ಅಪಘಾತಕ್ಕೊಳಗಾದ ಕಾರಿನ ತಪಾಸಣೆ ನಡೆಸಲಿದ್ದಾರೆ,’ ಎಂದು ಪಾಟೀಲ್ ಹೇಳಿದ್ದಾರೆ.
ಅಲ್ಲಿಯವರೆಗೆ ಕಾರನ್ನು ಥಾಣೆಯ ಹಿರಾನಂದನಿ ಪಾರ್ಕ್ ನಲ್ಲಿರುವ ಮರ್ಸಿಡಿಸ್ ಕಂಪನಿಯ ಘಟಕದಲ್ಲಿ ಇಟ್ಟಿರಲಾಗುವುದು ಎಂದು ಪಾಟೀಲ ಹೇಳಿದ್ದಾರೆ.
‘ತಪಾಸಣೆ ನಡೆದ ಮೇಲೆ ಕಾರು ಸಂಸ್ಥೆಯು ತನ್ನ ಅಂತಿಮ ವರದಿ ಸಲ್ಲಿಸಲಿದೆ,’ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಟಾಟಾ ಸನ್ಸ್ ಕಂಪನಿಯ ಮಾಜಿ ಚೇರ್ಮನ್ ಸಾವನ್ನಪ್ಪಿದ ಕಾರಿನ ಎಲೆಕ್ಟ್ರಾನಿಕ್ ಕಂಟ್ರೋಲ್ ಮಾಡ್ಯೂಲ್ ಅನ್ನು ಪರಿಶೀಲನೆಗಾಗಿ ಜರ್ಮನಿಗೆ ಕಳಿಸಲಾಗಿದೆ.
ಸಾಮಾನ್ಯವಾಗಿ ಎಲ್ಲ ಐಷಾರಾಮಿ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಕಂಟ್ರೋಲ್ ಮಾಡ್ಯೂಲ್ ಅಳವಡಿಸಲಾಗಿರುತ್ತದೆ, ಇದು ಬ್ರೇಕ್ ವೈಫಲ್ಯ ಅಥವಾ ಬ್ರೇಕ್ ಫ್ಲ್ಯೂಯ್ಡ್ ಕಡಿಮೆಯಾಗಿರಬಹುದಾದ ತಾಂತ್ರಿಕ ಅಂಶಗಳನ್ನು ಪತ್ತೆ ಮಾಡುತ್ತದೆ.
ಈ ದಾರುಣ ಅಪಘಾತದ ಹಿನ್ನೆಲೆಯಲ್ಲಿ ಗುರುವಾರದಂದು ಜಿಲ್ಲಾಡಳಿತವು ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ಸುರಕ್ಷತೆಯ ಆಡಿಟ್ ನಡೆಸುವಂತೆ ಸೂಚಿಸಿದೆ.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಪೊಲೀಸರ ತಂಡವೊಂದು ಅಪಘಾತ ನಡೆದ ರಸ್ತೆ ತಪಾಸಣೆಯನ್ನು ಸೆಪ್ಟೆಂಬರ್ 14 ರಂದಯ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ಬೊಡ್ಕೆ ಹೇಳಿದ್ದಾರೆ.
ಅಪಘಾತ ನಡೆಯಬಹುದೆಂಬ ಶಂಕಿತ ರಸ್ತೆಗಳಲ್ಲಿ ಸೈನ್ ಬೋರ್ಡ್ ಗಳನ್ನು ನೆಡುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
Published On - 1:36 pm, Sat, 10 September 22